ಗುರುಮಠಕಲ್: ಪಟ್ಟಣದ ಭಾವಸಾರ ಸಮಾಜದ ಅಧ್ಯಕ್ಷ ಮುಖೇಶ ಪತಂಗೆ(56) ಅವರು ಶನಿವಾರ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ,ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯಿದ್ದಾರೆ. ನವೆಂಬರ್ 17ರಂದು ಪುತ್ರಿಯ ಮದುವೆ ನಿಶ್ಚಯವಾಗಿತ್ತು. ಸದ್ಯ ಮನೆಯಲ್ಲಿ ನೀರವ ಮೌನ ಆವರಿಸಿದೆ.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯಲ್ಲಿ 1984-85ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಶನಿವಾರ ತಮ್ಮ ಸಹಪಾಠಿ ಜತೆಗೂಡಿ ಶಿಕ್ಷಕರಿಗೆ ಸನ್ಮಾನಿಸಿದ್ದರು. ಸನ್ಮಾನ ಕಾರ್ಯಕ್ರಮದ ನಂತರ ಹೃದಯಾಘಾತವಾಗಿದ್ದು, ಚಿಕಿತ್ಸೆಗೆಂದು ತೆರಳುವಾಗ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಸ್ನೇಹಿತ ಇಲ್ಲ ಎನ್ನುವ ಸಂಗತಿ ಅವರ ಸಹಪಾಠಿಗಳಲ್ಲಿ ತೀವ್ರ ನೋವುಂಟು ಮಾಡಿದೆ. ಭಾನುವಾರ ಪಟ್ಟಣದಲ್ಲಿ ಅಂತ್ಯಕ್ರಿಯೆ ಜರುಗಲಿದೆ.