ಬೋರಬಂಡಾ ಶ್ರೀಕ್ಷೇತ್ರದಲ್ಲಿ ಕಾರ್ತಿಕ ದೀಪೋತ್ಸವ | ಪಂಚಮ ಸಿದ್ದಲಿಂಗ ಶ್ರೀಗಳಿಂದ ಆಶೀರ್ವಚನ
ಗುರುಮಠಕಲ್: ನೇರಡಗಂ ಶ್ರೀಕ್ಷೇತ್ರದ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತಮಠದ ಮೂಲಪುರುಷರಾದ ಶ್ರೀ ಸಿದ್ಧಲಿಂಗ ಶಿವಯೋಗಿಗಳವರು ತಪೊಗೈದ ಪ್ರಥಮ ಪುಣ್ಯಭೂಮಿ ಬೋರಬಂಡಾ ಗ್ರಾಮ ಎಂದು ಪಂಚಮ ಸಿದ್ಧಲಿಂಗ ಶ್ರೀಗಳು ನುಡಿದರು.
ತಾಲೂಕಿನ ಬೋರಬಂಡಾ ಶ್ರೀಕ್ಷೇತ್ರದಲ್ಲಿ ಕಾರ್ತಿಕ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ದೀಪೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಭಕ್ತರಿಗೆ ಆಶೀರ್ಚನ ನೀಡಿದರು.
ಬೊರಬಂಡಾ ಗ್ರಾಮದ ಗುಡ್ಡ ಬೆಟ್ಟಗಳ ಸುಂದರ ನಿಸರ್ಗ ಸೌಂದರ್ಯದ ಮಡಿಲಲ್ಲಿ ಸುಮಾರು 12 ವರ್ಷಗಳ ಕಾಲ ಅಘೋರ ತಪಸ್ಸು ಆಚರಿಸಿದ ಮಹಾತಪಸ್ವಿಗಳು ಶಾಪಾನುಗ್ರಹ ಸಮರ್ಥರು ಆಗಿದ್ದ ಶ್ರೀ ಸಿದ್ಧಲಿಂಗ ಶಿವಯೋಗಿಗಳು ತಮ್ಮ ತಪಸ್ಸಿನ ಶಕ್ತಿಯಿಂದ ಅಣಿಮಾದಿ ಸಿದ್ಧಿ ಪಡೆದು ಈ ಭಾಗದ ಭಕ್ತರ ಭವಣೆ ನಿಗಿಸಿ ಮನ-ಮನೆಯ ಆರಾದ್ಯ ದೇವರಾಗಿದ್ದಾರೆ ಎಂದರು.
ಗುರುಗಳು ಬೊರಬಂಡಾ ಗ್ರಾಮದ ತಪ್ಪಲಿನಲ್ಲಿ ಅನುಷ್ಠಾನಗೈದ ವಿಷಯವನ್ನು ತಿಳಿದ ಕಾಕಲವಾರ ಸಂಸ್ಥಾನದ ಅಂದಿನ ರಾಜಾ ಲಕ್ಷ್ಮಣಪ್ಪ ದೊರೆಗಳ ಕುಟುಂಬ ಕ್ಷೇತ್ರಕ್ಕೆ ಬಂದು ಪೂಜ್ಯರ ದರ್ಶನ ಪಡೆದು ತಮಗೆ ಸಂತಾನ ಭಾಗ್ಯ ಕರುಣಿಸುವಂತೆ ಬೇಡಿಕೊಂಡಾ ಗ ಅವರನ್ನು ಏಕದೃಷ್ಠಿಯಿಂದ ನೋಡಿದ ಶ್ರೀಗಳು ಫಲಪುಷ್ಪ ನೀಡಿ ಆರ್ಶೀವದಿಸುತ್ತಾರೆ.
ಗುರುವಿನ ಅನುಗ್ರಹದ ಫಲವಾಗಿ ಪುತ್ರ ಸಂತಾನ ಭಾಗ್ಯ ಪಡೆದ ರಾಜರು ಭಾವುಕರಾಗಿ ಪೂಜ್ಯರ ಮಹಿಮೆಯನ್ನು ಕೊಂಡಾಡಿದ್ದಲ್ಲದೆ ತನ್ನ ಸಂಸ್ಥಾನಕ್ಕೆ ಒಳಪಟ್ಟಿದ್ದ ಬೊರಬಂಡ ಗ್ರಾಮದ ಸುಮಾರು 16ನೂರು ಎಕರೆ ಪ್ರದೇಶವನ್ನು ಶ್ರೀಕ್ಷೇತ್ರಕ್ಕೆ ದೇಣಿಗೆಯಾಗಿ ಕೊಟ್ಟಿದ್ದರು. ಇದಲ್ಲದೆ ಗುರುಗಳು ತಂಗುವುದಕ್ಕೆ 12 ಗುಂ. ಭೂಮಿಯಲ್ಲಿ ಮಠ ಹಾಗೂ 8 ಗುಂ. ಪ್ರದೇಶದಲ್ಲಿ ಸುಂದರ ಕಲ್ಲಿನ ಕೆತ್ತನೆಯ ಬಾವಿಯನ್ನು ನಿರ್ಮಿಸಿ ಕೊಟ್ಟಿದ್ದರು ಎಂದು ನೆನಪಿಸಿದರು.
ಮುಂದೆ ಸಿದ್ದಲಿಂಗ ಶಿವಯೋಗಿಗಳು ತಮ್ಮ ಜೀವಿತಾವಧಿಯಲ್ಲಿ ಒಂದು ಸ್ಥಳದಲ್ಲಿ 12 ವರ್ಷದಂತೆ 12 ಸ್ಥಳಗಳಲ್ಲಿ ತಪಸ್ಸು ಮಾಡಿದ್ದಾರೆ ಎನ್ನಲಾಗಿದೆ. ಪೂಜ್ಯರು ನೇರಡಗಂ ಗ್ರಾಮದಲ್ಲಿ ಪಾಲ್ಗುಣ ಬಹುಳ ತದಿಗಿ ದಿನ ಜೀವ ಸಮಾಧಿ[ನಿರ್ವಿಕಲ್ಪ ಸಮಾಧಿ] ಹೊಂದುತ್ತಾರೆ ಎಂದು ತಿಳಿಸಿದರು. ಈ ದಿವ್ಯ ಪರಂಪರೆಯನ್ನು 2ನೇ 3ನೇ 4ನೇ ಪೀಠಾಧಿಪತಿಗಳು ನಡೆಸಿಕೋಂಡು ಬಂದಿರುತ್ತಾರೆ.
ತಾವು ಪಟ್ಟಾಧಿಕಾರ ವಹಿಸಿಕೊಂಡ ನಂತರದಲ್ಲಿ ಶ್ರೀ ಕ್ಷೇತ್ರದ ಎಲ್ಲಾ ಶಾಖಾ ಮಠಗಳ ಅಭಿವೃದ್ಧಿಯ ಜೊತೆಗೆ ನೇರಡಗಂ ಮೂಲಮಠದಲ್ಲಿ ಶ್ರೀ ಸಿದ್ದಲಿಂಗೇಶ್ವರ ಪಾಠ ಶಾಲೆ, ಜಗದ್ಗುರು ಲಿಂಗೈಕ್ಯ ಡಾ. ಸಂಗನಬಸವ ಮಹಾಸ್ವಾಮಿಗಳವರ ಸ್ಮರಣಾರ್ಥವಾಗಿ ಅನಾಥಾಶ್ರಮ, ಸುಕುಮಾರ ಗೋ ಶಾಲೆ ನಿರ್ಮಾಣ ಮಾಡಿದ್ದಾಗಿ ತಿಳಿಸಿದರು.
ಶ್ರೀಮಠದ ಶಾಖಾ ಕೇಂದ್ರಗಳಲ್ಲಿ ಅತ್ಯಂತ ಮಹತ್ವ ಪಡೆದ ಈ ಬೋರಬಂಡದಲ್ಲಿ ಮಠದ ಅಭಿವೃದ್ಧಿ ಮಾಡಬೇಕು ಎಂಬ ಆಶಯ ಹೊಂದಿದ್ದು ಇದಕ್ಕೆ ಭಕ್ತರು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಿದಾಗ ಮಾತ್ರ ಕಾರ್ಯ ಸಾಧನೆ ಆಗಲಿದೆ ಎಂದು ತಿಳಿಸಿದರು. ಈ ವೇಳೆ ನೂರಾರು ಭಕ್ತರು ಉಪಸ್ಥಿತರಿದ್ದರು.
