ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ ಹೋಮ, ಕಾರ್ತಿಕ ದೀಪೋತ್ಸವ
ಗುರುಮಠಕಲ್ : ದೀಪದ ಜ್ಯೋತಿಯಂತೆ ಪ್ರತಿಯೊಬ್ಬರ ಬಾಳು ಪ್ರಕಾಶಮಾನಗೊಳ್ಳಲಿ ಎಂದು ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವದಿಸಿದರು.
ತಾಲೂಕಿನ ಬೋರಬಂಡ ಗ್ರಾಮದ ಶ್ರೀಲಕ್ಷ್ಮೀ ತಿಮ್ಮಮ್ಮ ದೇವಸ್ಥಾನದ 16ನೇ ವಾರ್ಷಿಕ ಜಾತ್ರಾ ಮಹೋತ್ಸವದ ಮತ್ತು ಕಲ್ಯಾಣ ಉತ್ಸವ ಕಾರ್ಯಕ್ರಮ ಹಿನ್ನೆಲೆ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಕಾರ್ತೀಕ ಮಾಸದ ಆಚರಣೆಗಳಲ್ಲಿ ಸಾಕಷ್ಟು ಮಹತ್ವ ಮತ್ತು ಪವಿತ್ರ ಎನಿಸಿದೆ ಎಂದರು. ಮಾನವ ಧಾರ್ಮಿಕ ಆಚರಣೆಗಳ ಜೊತೆಗೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಜೀವನ ಸಾಗಿಸುವ ಅನಿವಾರ್ಯತೆಯಿದೆ ಎಂದರು.
ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಪ್ರಮುಖ ಮಣಿಕಂಠ ರಾಠೋಡ ಮಾತನಾಡಿ, ಐತಿಹಾಸಿಕ ಹಿನ್ನೆಲೆಯುಳ್ಳ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನಕ್ಕೆ ಬರುವ ಭಕ್ತರು ಬೇಡಿದ್ದನ್ನು ಕೊಡುವ ಎರಡನೇ ತಿರುಪತಿ ಎಂದು ಖ್ಯಾತಿ ಪಡೆದ ಬೋರಬಂಡಾ ಪವಿತ್ರ ಸ್ಥಳವಾಗಿದೆ. ಕಾರ್ತಿಕ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಬರುತ್ತದೆ. ಇಂದು ನಡೆಯುತ್ತಿರುವ ಹೋಮ ಸರ್ವರಿಗೆ ಸುಮಂಗಲಯುಂಟು ಮಾಡಲಿ ಎಂದು ಪ್ರಾರ್ಥಿಸಿದರು.
ಇನ್ನು ದೀಪೋತ್ಸವದಂತೆ ನಮ್ಮೆಲ್ಲರ ಜೀವನದಲ್ಲಿ ಕತ್ತಲು ಕಳೆದು ಹೊಳೆಯುವ ದೀಪದಂತೆ ಜೀವನದಲ್ಲಿ ಊಜ್ವಲಗೊಳ್ಳಲಿ ಎಂದು ಹೇಳಿದರು. ಈ ಭಾಗದಲ್ಲಿ ಬಂಜಾರ ಸಮುದಾಯ ತನ್ನದೇ ಆದ ಇತಿಹಾಸ ಹಾಗೂ ಸಂಸ್ಕೃತಿ ಹೊಂದಿದೆ. ಕಷ್ಟಪಟ್ಟು ದುಡಿದು ತಿನ್ನುವ ಸಮುದಾಯ ಸ್ವಾಭಿಮಾನಿ ಬದುಕು ಸಾಗಿಸುತ್ತಿದ್ದಾರೆ ಎಂದರು.
ಈ ವೇಳೆ ದೇವಸ್ಥಾನದ ಆವರಣದಲ್ಲಿ ದೀಪಗಳನ್ನು ಪ್ರಜ್ವಲಿಸಿ ಜನರು ಭಕ್ತಿಯಿಂದ ದೇವರ ದರ್ಶನ ಪಡೆದು ಪುನಿತರಾದರು. ಪ್ರಮುಖರಾದ ಆಯ್ಯಪ್ಪದಾನ ರಾಠೋಡ, ರಮೇಶ ಪವಾರ್, ಕಾಶಿನಾಥ ರಾಠೋಡ, ರಾಜು ರಾಠೋಡ, ಭಾರತಿ. ವೆಂಕಟಮ್ಮ, ಕೋಮಲಬಾಯಿ ಸೇರಿದಂತೆ ಅಪಾರ ಭಕ್ತರು ಇದ್ದರು.
