21ರಂದು ಪಟ್ಟಣದಲ್ಲಿ ಶಿವಾಜಿ ಜಯಂತಿ ಭವ್ಯ ಮೆರವಣಿಗೆ | ಹಿಂದೂ ಪೈರ್ ಬ್ರಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಅಮೋಘ ದೇಶಪತಿ ಆಗಮನ
ಗುರುಮಠಕಲ್: ಛತ್ರಪತಿ ಶಿವಾಜಿ ಮಹಾರಾಜ ಅವರ 396ನೇ ಜಯಂತಿಯ ಅಂಗವಾಗಿ ಇದೇ ಫೆಬ್ರುವರಿ 21ರಂದು ಪಟ್ಟಣದಲ್ಲಿ ಭವ್ಯ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹಿಂದೂ ಯುವ ಘರ್ಜನೆ ಸಮಿತಿ ಅಧ್ಯಕ್ಷ ವೆಂಕಟೇಶ್ ಮುದಿರಾಜ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರುವರಿ 21ರಂದು ಮಧ್ಯಾಹ್ನ 12 ಗಂಟೆಗೆ ನಗರದ ನಗರೇಶ್ವರ ದೇವಸ್ಥಾನದಿಂದ ಶಿವಾಜಿ ಮಹಾರಾಜರ ಪ್ರತಿಮೆಗೆ ಪೂಜೆ ಹಾಗೂ ಮಾಲಾರ್ಪಣೆ ನೆರವೇರಿಸಿ, ನಂತರ ಮುಖ್ಯರಸ್ತೆ ಮೂಲಕ ನಿಜಶರಣ ಅಂಬಿಗರ ಚೌಡಯ್ಯ ವೃತ್ತದವರೆಗೆ ಭವ್ಯ ಮೆರವಣಿಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಮಾಜಿ ಕೇಂದ್ರ ಸಚಿವರು ಹಾಗೂ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ಆರ್ ಪಾಟೀಲ್ ಯತ್ನಾಳ ಮತ್ತು ರಿಫ್ಲೆಕ್ಷನ್ ಗ್ರೂಪ್ ಆಫ್ ಚಾನಲ್ ಸ್ಥಾಪಕ ಹಾಗೂ ಸಿಇಒ ಅಮೋಘ ದೇಶಪತಿ ಆಗಮಿಸಲಿದ್ದು, ಶಿವಾಜಿ ಮಹಾರಾಜರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸಗಳು ನಡೆಯಲಿವೆ ಎಂದರು.
ಶಿವಾಜಿ ಮಹಾರಾಜರ ಆದರ್ಶಗಳು, ದೇಶಭಕ್ತಿ, ಶೌರ್ಯ ಮತ್ತು ಆಡಳಿತ ದಕ್ಷತೆಯನ್ನು ಯುವಪೀಳಿಗೆಗೆ ಪರಿಚಯಿಸುವುದು ಈ ಆಚರಣೆಯ ಮುಖ್ಯ ಉದ್ದೇಶವಾಗಿದೆ. ಗುರುಮಠಕಲ್ ಹಾಗೂ ಸುತ್ತಮುತ್ತಲಿನ ಭಾಗದ ಹಿಂದೂ ಭಾಂದವರು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಮಿತಿ ಮನವಿ ಮಾಡಿದೆ. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳು ಮತ್ತು ಹಲವು ಸಮಾಜ ಮುಖಂಡರು ಉಪಸ್ಥಿತರಿದ್ದರು.
