ಗುರುಮಠಕಲ್ ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ | ಭವ್ಯ ಶೋಭಾಯಾತ್ರೆ | ಗಡಿಯಲ್ಲಿ ಘರ್ಜಿಸಿದ ಹಿಂದು ಹುಲಿ ಯತ್ನಾಳ್
ಗುರುಮಠಕಲ್ (ಯಾದಗಿರಿ): ಸಿಎಂ… ಸಿಎಂ… ಸಿಎಂ… ಹೀಗೆ ಒಕ್ಕೊರಲ ಧ್ವನಿ ಸಾರ್ವಜನಿಕರಿಂದ ಕೇಳಿಬಂದಿದ್ದು, ಹಿಂದು ಫೈಯರ್ ಬ್ರ್ಯಾಂಡ್ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎದುರು. ಹೌದು, ಶನಿವಾರ ರಾತ್ರಿ ಗುರುಮಠಕಲ್ ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ವೇಳೆ ಯತ್ನಾಳ್ ವೇದಿಕೆಗೆ ಆಗಮಿಸುತ್ತಿದ್ದಂತೆ ಅವರ ಭಾಷಣ ಕೇಳಲು ಹಾತೊರೆಯುತ್ತಿದ್ದ ಅಭಿಮಾನಿಗಳ ಘೋಷಣೆ ಕೇಳಿ ಬಂತು.
ಮಾತುಗಳ ಆರಂಭದಲ್ಲೇ ವಿರೋಧಿಗಳಿಗೆ ಟಾಂಗ್ ನೀಡಿದ ಅವರು ನಿಮ್ಮ ಸಂಸದರು ಎಲ್ಲಿಯಾದರು ಕಂಡರೇ ? ಎಂದು ವಾಗ್ದಾಳಿ ನಡೆಸಿದರು. ಮಾಜಿ ಸಂಸದ ಡಾ. ಜಾದವ್ ಅವರನ್ನು ಹೊಗಳಿದರು. ರಾಜ್ಯದಲ್ಲಿ ಹಿಂದು ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಆದರೂ ನೀಲಿ, ಕೇಸರಿ ಶಾಲು ಹಾಕಿ ಧರ್ಮ ರಕ್ಷಣೆ ಹೋರಾಟ ಮಾಡುತ್ತಿರುವುದಕ್ಕೆ ಶ್ಲಾಘಿಸಿದರು. ಶಿವಾಜಿ ಮಹಾರಾಜರು ತಾಯಿ ಜೀಜಾಬಾಯಿ, ರಾಮಾಯಣ, ಮಹಾಭಾರತ ಪ್ರೇರಣೆಯಿಂದ ಹಿಂದು ಸಾಮ್ರಾಜ್ಯದ ಸ್ಥಾಪನೆಗೆ ಹೋರಾಡಿದ ಶ್ರೇಷ್ಠ ನಾಯಕ ಎಂದರು.
ಶಿವಾಜಿ ಮಹಾರಾಜರ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಮಹಾರಾಣಾ ಪ್ರತಾಪ್ ಇಲ್ಲದೇ ಇದ್ದರೆ ನಮ್ಮ ಹೆಸರುಗಳು ಬದಲಾಗುತ್ತಿದ್ದವು ಎಂದರು. ಭವ್ಯ ಕಾರ್ಯಕ್ರಮ ಆಯೋಜನೆಗೆ ಧನ್ಯವಾದ ತಿಳಿಸಿದರು. ಹಿಂದು ಧರ್ಮದ ಆಚರಣೆಗಳ ಮೇಲೆ ಕಲ್ಲು ತೂರಾಟ ನಡೆಯುತ್ತಿರುವ ಘಟನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಹಿಂದುಗಳು, ಹಿಂದುತ್ವ ಜಾಗೃತಿಯಾಗಿದೆ. ಇನ್ನು ಕೆಲ ವರ್ಷ ಎಷ್ಟು ತೊಂದರೆ ಕೊಡ್ತಿರಿ ಕೊಡಿ, 2028ಕ್ಕೆ ನಾವೇ ಬರುತ್ತೇವೆ. ಹಿಂದು ಮೆರವಣಿಗೆ ಮೇಲೆ ಕಲ್ಲು ಎಸೆದರೆ ಬುಲ್ಡೋಜರ್ ಬರಲಿದೆ ಎಂದರು. ನಮ್ಮ ಜೆಸಿಬಿ ಪಾರ್ಟಿ ರೆಡಿ, ನಮಗೆ 5 ವರ್ಷ ಕೊಡಿ, ಯೋಗಿ ಮಾದರಿ ಸರ್ಕಾರ ಮಾಡುವೆ ಎಂದರು.
ವಂದೇ ಮಾತರಂ ಹಾಡದವರ ಕುರಿತು ವಾಗ್ದಾಳಿ ನಡೆಸಿ, ದೇಶದಲ್ಲಿ ಇರುವವರು ಒಂದೇ ಮಾತರಂ ಹೇಳಲೇಬೇಕು ಎಂದರು. ಗಾಂಧಿ ರಾಷ್ಟ್ರಪಿತ ಒಪ್ಪಲ್ಲ. ನಮಗೆ ಡಾ. ಅಂಬೇಡ್ಕರ್ ಸಾಕು, ನೆಹರು ಮೊದಲ ಪ್ರಧಾನಿ ಎಂದು ಒಪ್ಪಲ್ಲ, ನೇತಾಜಿ ನಮ್ಮ ಮೊದಲ ಪ್ರಧಾನಿ ಎಂದು ಹೇಳಿದರು. ಕೇಸ್ ಹಾಕಿ ಧ್ವನಿ ಹತ್ತಿಕ್ಕುವ ಕೆಲಸವಾಗುತ್ತಿದೆ. ಇದಕ್ಕೆ ಹೆದರಲ್ಲ. ಎಷ್ಟು ಕೇಸ್ ಹಾಕ್ತಾರೆ ಅಷ್ಟು ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯ. ಪೊಲೀಸರು 150 ಕೇಸ್ ಹಾಕಿ 150 ಸೀಟು ಗೆಲ್ಲಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಹಿಂದು ಪರವಾಗಿ ವಿಧಾನಸಭೆಯಲ್ಲಿಯೂ ಮಾತನಾಡುವೆ. ಶಿವಾಜಿ ಮಹಾರಾಜರಿಂದ ಮೊಘಲರ ಅಂತ್ಯ ಪ್ರಾರಂಭ ವಾಯಿತು. ಮಹಾರಾಣಾ ಪ್ರತಾಪ್ ಅವರ ಪರಾಕ್ರಮ, ಶೌರ್ಯ ವಿವರಿಸಿ ಹಿಂದುಗಳ ಹುರಿದುಂಬಿಸಿದರು. ರಾಜ್ಯದಲ್ಲಿ ಅಕ್ರಮವಾಗಿ ರೋಹಿಂಗ್ಯಾ ಗಳು ನುಸುಳಿರುವ ವಿಷಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಪಾಕಿಸ್ತಾನ ಯುದ್ಧ ವೇಳೆ ಸಂದರ್ಭ ವಿವರಿಸಿ ಮಾಜಿ ಸೇನಾಧಿಕಾರಿ ಬರೆದ ಪುಸ್ತಕದ ಬಗ್ಗೆ ವಿರೋಧಿಗಳು ವಿವಾದ ಸೃಷ್ಟಿಸುತ್ತಿದ್ದಾರೆ ಎಂದರು. ಮೋದಿ ಅವರು ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ. ನಮ್ಮ ಸೈನಿಕರ ಮೇಲೆ ದಾಳಿಯಾದರೆ, ಸೀದಾ ಮೇಲೆಯೇ ಎಂದರು.
ಇದಕ್ಕೂ ಮೊದಲು ಯುವ ವಾಗ್ಮಿ ಅಮೋಘ ದೇಶಪತಿ, ಹಿಂದುಗಳನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಮಾತನಾಡಿ, ಹಿಂದುಗಳು ಒಗ್ಗೂಡಲು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಹಿಂದು ಸಮಾಜಗಳ ಯುವಕರು, ಪ್ರಮುಖರು, ಗಣ್ಯರು ಭಾಗವಹಿಸಿದ್ದರು.
ಏಕಾಏಕಿ ವೇದಿಕೆಗೆ ಬಂದ ಮಾಜಿ ಸಂಸದರು: ಕಾರ್ಯಕ್ರಮ ದಲ್ಲಿ ಮಾಜಿ ಸಂಸದ ಡಾ.ಉಮೇಶ ಜಾಧವ್ ಆಗಮಿಸುತ್ತಿದ್ದಂತೆ ನೆರೆದ ಜನರೆಲ್ಲ ಅಚ್ಚರಿಗೊಂಡರು. ಹೆಚ್ಚಿನ ಸಮಯ ತೆಗೆದುಕೊಳ್ಳದೇ ಶಿವಾಜಿ ಮಹಾರಾಜರ ಕುರಿತು ಮಾತನಾಡಿದರು.
ಭವ್ಯ ಶೋಭಾಯಾತ್ರೆ: ಪಟ್ಟಣದ ನಗರೇಶ್ವರ ದೇವಸ್ಥಾನ ಆವರಣದಿಂದ ಆರಂಭವಾದ ಶಿವಾಜಿ ಮಹಾರಾಜರ ಭವ್ಯ ಶೋಭಾಯಾತ್ರೆ ಮುಖ್ಯಬೀದಿಗಳ ಮೂಲಕ ನಿಜಶರಣ ಅಂಬಿಗರ ಚೌಡಯ್ಯ ವೃತ್ತದವರೆಗೆ ತಲುಪಿತು. ಮೆರವಣಿಗೆ ಯುದ್ಧಕ್ಕೂ ಯುವಕರು ಕುಣಿದು ಕುಪ್ಪಳಿಸಿದರು.
ಅಚ್ಚು ಕಟ್ಟಾಗಿ ಪೊಲೀಸ್ ಬಂದೋಬಸ್ತ್: ಶಾಂತಿಗೆ ಹೆಸರಾದ ಪಟ್ಟಣದಲ್ಲಿ ಮುನ್ನೆಚ್ಚರಿಕೆಯಾಗಿ ಪೊಲೀಸ್ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅಚ್ಚುಕಟ್ಟು ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಎಎಸ್ಪಿ ಖುದ್ದು ಮುಂದೆ ನಿಂತು ಎಲ್ಲವನ್ನೂ ಗಮನಿಸುತ್ತಿದ್ದರು. ಡಿವೈಎಸ್ಪಿ, ಗುರುಮಠಕಲ್ ಪಿಐ ಸೇರಿದಂತೆ ಸಿಬ್ಬಂದಿ ಬಂದೋಬಸ್ತ್ ಒದಗಿಸಿದರು. ಪಟ್ಟಣದಲ್ಲಿ ಪಥ ಸಂಚಲನ ನಡೆಸಿ, ಶಕ್ತಿ ಪ್ರದರ್ಶಿಸಿದರು.
