ಉಚಿತ ಆರೋಗ್ಯ ತಪಾಸಣಾ ಶಿಬಿರ | ರೋಗ ಬರುವ ಮುನ್ನ ಎಚ್ಚರವಿರಲಿ
ಗುರುಮಠಕಲ್: ಜೀವನದಲ್ಲಿ ಆರೋಗ್ಯವೇ ಮಹಾಭಾಗ್ಯವಾಗಿದೆ. ಸದೃಢವಾಗಿರಲು ಪ್ರತಿಯೊಬ್ಬರೂ ಕಾಳಜಿವಹಿಸುವುದು ಮುಖ್ಯವಾಗಿದೆ ಎಂದು ಟಿಎಚ್ಒ ಡಾ.ಹಣಮಂತರೆಡ್ಡಿ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಸಮುದಾಯ ಆರೋಗ್ಯ ಕೇಂದ್ರ ಮತ್ತು ವೈದೇಹಿ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಪ್ರಸ್ತುತ ಕಾಲರಾ, ಚಿಕುನ್ ಗುನ್ಯಾ, ಡೆಂಗ್ಯೂ ಸಾಂಕ್ರಾಮಿಕ ರೋಗಗಳ ಕುರಿತು ಎಚ್ಚರವಾಗಿದ್ದು, ಕಡ್ಡಾಯವಾಗಿ ಜನರು ನೀರನ್ನು ಕಾಯಿಸಿ, ಆರಿಸಿ, ಸೋಸಿದ ನಂತರವೇ ಕುಡಿಯಬೇಕು. ಪರಿಸರವನ್ನು ಸ್ವಚ್ಛವಾಗಿರಿಸಿ, ಎಲ್ಲೆಂದರಲ್ಲಿ ನಿಂತ ನೀರನ್ನು ಕುಡಿಯದಿರಿ ಮತ್ತು ಸಮಸ್ಯೆಯೆನಿಸಿದ ಕೂಡಲೇ ಹತ್ತಿರದ ಆಸ್ಪತ್ರೆಗೆ ತೆರಳಲು ತಿಳಿಸಿದರು.
ಡೆಂಗ್ಯೂ ಕಾಯಿಲೆಯನ್ನು ನಿರ್ಲಕ್ಷಿಸಿ, ತಡವಾಗಿ ಚಿಕಿತ್ಸೆಗೆಂದ ಹೋಗುವ ಸಂದರ್ಭಗಳಲ್ಲಿ ಪ್ರಾಣಾಪಾಯ ಸಂಭವಿಸಿದ ಉದಾಹರಣೆಗಳೂ ನಮ್ಮ ಮುಂದಿವೆ. ಆದ್ದರಿಂದ ನೀರು ನಿಲ್ಲದಂತೆ ಎಚ್ಚರವಹಿಸಿ, ಮನೆಯಲ್ಲಿ ನೀರು ಸಂಗ್ರಹಿಸುವ ವ್ಯವಸ್ಥೆಯನ್ನು ವಾರಕ್ಕೆ ಒಮ್ಮೆಯಾದರೂ ಸ್ವಚ್ಛಗೊಳಿಸಲು ಸೂಚಿಸಿದರು.
ನಮ್ಮದು ಗಡಿ ಭಾಗದ ಜನರಿಗಘ ಮಾರಣಾಂತಿಕ ಕಾಯಿಲೆಗಳಿಗೆ ಉತ್ತಮ ಚಿಕಿತ್ಸೆ ಸಿಗಬೇಕು ಎನ್ನುವ ಆಶಯದೊಂದಿಗೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಶಿಬಿರಗಳ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.
ವೈದೇಹಿ ಆಸ್ಪತ್ರೆಯ ಡಾ. ಶಿಲ್ಪಾ ಮಾತನಾಡಿ, ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇರುವವರನ್ನು ಬೆಂಗಳೂರಿಗೆ ಕರೆದೊಯ್ದು, ನಗರದ ನಮ್ಮ ಆಸ್ಪತ್ರೆಯಲ್ಲಿ ಉಚಿತ ವಸತಿ, ಊಟವನ್ನು ನೀಡಿ ಉಚಿತ ಚಿಕಿತ್ಸೆ ನೀಡಲಾಗುವುದು. ಸ್ವತಹ ನಾನೇ ಹೆಣ್ಣುಮಕ್ಕಳೊಂದಿಗೆ ಇರುತ್ತೇನೆ ಎಂದು ಹೇಳಿದರು.
ಖಾಸಾಮಠದ ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀಗಳು ಮಾತನಾಡಿ, ಮನುಷ್ಯನ ಜೀವನದಲ್ಲಿ ಸ್ಥಿರ-ಚರ, ಆದ್ಯಾತ್ಮಿಕ ಮತ್ತು ಆರೋಗ್ಯಗಳೆಂಬ ಮೂರು ಬಗೆಯ ಆಸ್ತಿಗಳಿದ್ದು, ಆರೋಗ್ಯವೆಂಬ ಆಸ್ತಿ ಪ್ರಮುಖವಾದುದು. ಮೂಢ ನಂಬಿಕೆಗಳನ್ನು ತೊರೆದು ಉತ್ತಮ ಆರೋಗ್ಯದತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ವೈದ್ಯಾಧಿಕಾರಿ ಡಾ.ಶಿವಪ್ರಸಾದ ಮೈತ್ರಿ ಹಾಗೂ ಸಂತೋಷ ನಿರೇಟಿ ಮಾತನಾಡಿದರು. ಡಾ.ಮಹೇಶ ಕುಮಾರ, ಡಾ.ವಿಘ್ನೇಶ್ವರ, ಡಾ.ಪ್ರದೀಪ, ಡಾ.ಪ್ರವೀಣ, ಡಾ.ಗಿರೀಶ, ಡಾ.ಸದನ್, ಡಾ.ತರುಣ, ಡಾ.ಅಜಿತ, ಸಮುದಾಯ ಆರೋಗ್ಯ ಕೇಂದ್ರದ ಹರೀಶ, ರಾಕೇಶ, ಪ್ರಶಾಂತ, ಭೀಮಶಂಕರ, ಭಾನುಪ್ರಕಾಶ, ಅಮೀನ್, ರವಿ ಬಂಡಿ ಇದ್ದರು.
ಶಿಬಿರದಲ್ಲಿ ಆರೋಗ್ಯ ತಪಾಸಣೆ ಮಾಡಿ ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರನ್ನು ಬೆಂಗಳೂರಿಗೆ ಕರೆದೊಯ್ಯ ಲಾಯಿತು.
