ಗುರುಮಠಕಲ್ ಗಣೇಶ ನಗರದಲ್ಲಿ 5 ನೇ ದಿನ ಪೂಜೆ | ದಂಪತಿಗಳು, ಸ್ಥಳೀಯರು ಭಾಗಿ | ಪಂಚಾಯತ ಬಡಾವಣೆಯಲ್ಲಿ ಗಣಪನಿಗೆ ವೈಭವದ ಅಲಂಕಾರ
ಗುರುಮಠಕಲ್: ಶುದ್ಧ ಮನಸ್ಸಿನಿಂದ ಮಾಡುವ ಪ್ರತಿಯೊಂದು ಕಾರ್ಯವು ಭಗವಂತನಿಗೆ ಅರ್ಪಣೆ ಯಾಗುತ್ತದೆ. ಪ್ರತಿಯೊಬ್ಬರೂ ಬ್ರಾಹ್ಮಿ ಮುಹೂರ್ತದಲ್ಲಿ ಭಗವಂತನನ್ನು ಆರಾಧಿಸುವ ಹಿಂದಿನ ಪದ್ಧತಿಯನ್ನು ಮರೆಯಬಾರದು ಎಂದು ಆಧ್ಯಾತ್ಮಿಕ ಚಿಂತಕ ಸೋಮಶೇಖರ ಸ್ವಾಮಿ ಪಸಪುಲ್ ಹೇಳಿದರು.
ಪಟ್ಟಣದ ಗಣೇಶ ನಗರದಲ್ಲಿ ಪ್ರತಿಷ್ಠಾಪಿಸಿದ ವಿಜ್ಞೇಶ್ವರನಿಗೆ 5ನೇ ದಿನದ ವಿಶೇಷ ಪೂಜೆ ಬಳಿಕ ಪ್ರವಚನ ನೀಡಿದ ಅವರು, ಜೀವನದಲ್ಲಿ ಸಂಸ್ಕಾರ ಮುಖ್ಯವಾಗಿದೆ ಎಂದರು. ವಿಜ್ಞೇಶ್ವರಗಿಂತ ಮೊದಲು ಗಂಗಾ ಮಾತೆಯ ಪೂಜೆ ಮುಖ್ಯ. ಹಿಂದಿನಿಂದಲೂ ಮನೆಯೊಳಗೆ ಗೋಮಾತೆ ಹಾಕಲಾಗುತ್ತಿದೆ. ಗೋಮಾತೆ ಇದ್ದರೆ ಯಾವುದೇ ವಾಸ್ತು ದೋಷ ಇರುತ್ತಿರಲಿಲ್ಲ. ಪ್ರತಿಯೊಬ್ಬರು ಗೋಮಾತೆ ಯನ್ನು ಮನೆಯಲ್ಲಿ ಸಾಕಲು ಸಲಹೆ ನೀಡಿದರು.
ಕೆಲದಿನಗಳಲ್ಲಿ ನವರಾತ್ರಿ ಉತ್ಸವ ಬರುತ್ತಿದೆ. ತಾಯಿ ರಾಕ್ಷಸರ ಸಂಹಾರ ಮಾಡಿದ್ದಾಳೆ. ಕುಂಕುಮ ಹಚ್ಚುವುದರಿಂದ ಸರ್ವ ದಾರಿದ್ರ್ಯ ದೂರವಾಗುತ್ತದೆ. ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ತಾಯಂದಿರಿಗೆ ಕರೆ ನೀಡಿದರು.
ನಾವು ಮಾಡಿದ ಕರ್ಮದ ಫಲ ನಾವೇ ಅನುಭವಿಸಬೇಕಿದೆ. ಸಂಸ್ಕಾರದಿಂದ ದೂರವಾದರೆ ವಿನಾಶಕ್ಕೆ ನಾಂದಿ. ಜೀವನ ಶಾಶ್ವತವಲ್ಲ ಹಾಗಾಗಿ ಒಳ್ಳೆಯ ಕಾರ್ಯ ಮಾಡಿ ಸಾರ್ಥಕ ಪಡಿಸಿಕೊಳ್ಳಲು ಹೇಳಿದರು. ಒಳ್ಳೆಯ ಆಲೋಚನೆ, ಆಚಾರ, ವಿಚಾರಗಳು ದಿನ ಆರಂಭಿಸಬೇಕು ಎಂದು ಕಿವಿಮಾತು ಹೇಳಿದರು.
ಸ್ಥಳೀಯರಾದ ಸಾಯಬಣ್ಣ, ಬಾಲಪ್ಪ ಸಿರಿಗೆಂ, ಅನೀಲ ಹಬೀಬ್ ದಂಪತಿಗಳು ವಿಶೇಷ ಪೂಜೆ ನೆರವೇರಿಸಿದರು. ಈ ವೇಳೆ ಗಣೇಶ ನಗರದ ಸಮಿತಿ ಅಧ್ಯಕ್ಷ ಜಗದೀಶ ಆವುಂಟಿ, ಪ್ರಮುಖರಾದ ಶ್ರೀಕಾಂತ ಢಗೆ, ಶ್ರೀನಿವಾಸ ಎಲ್ಐಸಿ, ಪಿತಂಬರ ಕಲ್ಯಾಣಕರ್, ಬಸಪ್ಪ ಮೇದಾ ಸೇರಿದಂತೆ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು. ಇಲ್ಲಿನ ವಿದ್ಯುತ್ ಪ್ರಸರಣ ಕೇಂದ್ರದಲ್ಲಿ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಉದ್ಯಮಿ ನರೇಂದ್ರ ರಾಠೋಡ, ಅಧಿಕಾರಿ ನರಸಿಂಹಲು, ಮಾನಪ್ಪ, ಸತೀಶ ತಿವಾರಿ ಹಾಗೂ ಸಿಬ್ಬಂದಿಗಳು ಇದ್ದರು.
