ಗುರುಮಠಕಲ್ ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆ | ನಜರಾಪೂರ ಸೇರಿದಂತೆ ಹಲವೆಡೆ ಬೆಳೆ ಹಾನಿ | ಪರಿಹಾರಕ್ಕೆ ಆಗ್ರಹ
ಗುರುಮಠಕಲ್: ಗುರುಮಠಕಲ್ ತಾಲೂಕಿನ ರವಿವಾರ ಮಧ್ಯಾಹ್ನ ಸುರಿದ ಭಾರಿ ಗಾಳಿ ಸಮೇತ ಆಲಿಕಲ್ಲು ಮಳೆ ಅವಾಂತರ ಸೃಷ್ಟಿಸಿದ್ದು, ಅಕಾಲಿಕ ಮಳೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ತಾಲೂಕುನಲ್ಲಿ ಕಷ್ಟ ಪಟ್ಟು ಭತ್ತ ನಾಟಿ ಮಾಡಿದ್ದು ರೈತರು ಇನ್ನೇನು ಕಟಾವು ಮಾಡಲು ಸಿದ್ಧತೆಯಲ್ಲಿರುವಾಗಲೇ ಮಳೆ ಆಘಾತ ನೀಡಿದೆ.
ಬೆಳೆದ ಭತ್ತದ ಬೆಳೆ ಕಷ್ಟದ ಫಲ ನೀಡಬಹುದು ಎಂದುಕೊಂಡಿದ್ದ ರೈತರಿಗೆ ಅಕಾಲಿಕ ಮಳೆ ಮರ್ಮಾಘಾತ ನೀಡಿದೆ. ಸಾವಿರಾರು ಎಕರೆಯಲ್ಲಿ ಬೆಳೆದ ಭತ್ತ ರೈತನ ತುತ್ತು ಕುಸಿದಿದೆ.
ಕಂದಾಯ ಅಧಿಕಾರಿಗಳು ಸಮರ್ಪಕವಾಗಿ ಪರಿಶೀಲನೆ ನಡೆಸಿ ಹಾನಿಯ ಬಗ್ಗೆ ರೈತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಲು ರೈತರು ಒತ್ತಾಯಿಸಿದ್ದಾರೆ.
ರೈತರಿಗೆ ತಕ್ಷಣ ಪರಿಹಾರ ಒದಗಿಸಲು ಒತ್ತಾಯ:
ಗುರುಮಠಕಲ್ ತಾಲೂಕಿನಲ್ಲಿ ಆಲಿಕಲ್ಲು ಮಳೆಯಿಂದ ರೈತರ ಭತ್ತದ ಬೆಳೆ ಸಂಪೂರ್ಣ ನಾಶವಾಗಿವೆ ತಕ್ಷಣ ಪರಿಹಾರ ಒದಗಿಸಲು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಉಪಾಧ್ಯಕ್ಷ ಕೆ.ಬಿ. ವಾಸು ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಧ್ಯಾಹ್ನ ಗುರುಮಠಕಲ್ ತಾಲೂಕು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಿದ ಭಾರಿ ಆಲಿಕಲ್ಲು ಮಳೆಯಿಂದಾಗಿ ರೈತರು ಶ್ರಮಪಟ್ಟು ಬೆಳೆದ ಬೆಳೆ ಸಂಪೂರ್ಣವಾಗಿ ನಾಶವಾಗಿರುವುದು ದುರಂತಕರ ಸಂಗತಿಯಾಗಿದೆ. ರೈತರ ಆರ್ಥಿಕ ಸ್ಥಿತಿಗೆ ಇದರಿಂದ ಭಾರಿ ಹಾನಿ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ತಕ್ಷಣವೇ ಭದ್ರಪೂರ್ಣ ಸಮೀಕ್ಷೆ ನಡೆಸಿ, ಹಾನಿಗೊಳಗಾದ ರೈತರಿಗೆ ತುರ್ತು ಪರಿಹಾರ ಘೋಷಣೆ ಮಾಡಿ, ಅವರ ಬದುಕಿಗೆ ಸಹಾಯ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
