ಹಿಂದೂ ಸಮ್ಮೇಳನ ಆಯೋಜನ ಸಮಿತಿಯಿಂದ ಕಾರ್ಯಕ್ರಮ | ನೋಡುಗರ ಗಮನ ಸೆಳೆದ ಶೋಭಾಯಾತ್ರೆ | ಹಿಂದು ಸಮಾಜ ಒಗ್ಗೂಡಿಸುವ ಕಾರ್ಯ
ಗುರುಮಠಕಲ್: ಬ್ರಿಟಿಷರು, ಮೊಘಲರು ಸೇರಿ ಹಲವು ಪ್ರಾಂತ್ಯಗಳ ವಿವಿಧ ಮೂಲೆಗಳಲ್ಲಿ ಆಕ್ರಮಣ, ದಬ್ಬಾಳಿಕೆಗಳನ್ನು ಮೆಟ್ಟಿನಿಂತು ಭಾರತ ವಿಶ್ವಗುರುವಾಗುತ್ತಿದೆ ಎಂದು ಮುಖ್ಯ ವಕ್ತಾರ ಮಲ್ಲಿಕಾರ್ಜುನ ಬಾಳಿಕಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.
ಯಾದಗಿರಿ ಜಿಲ್ಲೆಯ ಗುರುಮಠಕಲ್ ನಲ್ಲಿ ಹಿಂದೂ ಸಮ್ಮೇಳನ ಆಯೋಜನ ಸಮಿತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಶ್ವದ ಇತರೆ ಬಲಿಷ್ಟ ದೇಶಗಳು ದಾಳಿಗಳಿಗೆ ಒಳಗಾಗಿ ಮೇಲೇಳಲು ಆಗದೆ ಪರಿಸ್ಥಿತಿಯಲ್ಲಿವೆ. ಆದರೇ, ಭಾರತ ಎಲ್ಲವನ್ನೂ ಮೆಟ್ಟಿನಿಂತು ಸದೃಢವಾಗುತ್ತಿದೆ ಎಂದು ದೇಶದ ನಾಯಕತ್ವವನ್ನು ಹೊಗಳಿದರು.
ವಿಶ್ವದ ತಾಯಿ ಹಿಂದೂ ಧರ್ಮ ಎಂದು ಸಾರಿದ ಅವರು, ಐತಿಹಾಸಿಕ ಹಿನ್ನೆಲೆಯುಳ್ಳ ಧರ್ಮದ ನಾವು ಭವ್ಯ ಭವಿಷ್ಯ ನಿರ್ಮಾಣ ಮಾಡುವ ಜವಾಬ್ದಾರಿಯನ್ನು ಮರೆತು ಕೂಡದು ಎಂದರು. ನೈಜ ಇತಿಹಾಸ ಅಧ್ಯಯನ ಮಾಡಿ, ನಮ್ಮ ಗುರಿ ತಲುಪುವ ನಿಟ್ಟಿನಲ್ಲಿ ಮುನ್ನಡೆಯಲು ನೆನಪಿಸಲು ಈ ಸಮ್ಮೇಳನ ನಡೆಯುತ್ತಿದೆ ಎಂದು ಹಿಂದು ಸಮಾಜ ಒಗ್ಗಟ್ಟಾಗುವ ನಿಟ್ಟಿನಲ್ಲಿ ಸಂದೇಶ ನೀಡಿದರು. ನಾವು ಸೋತಿರುವುದು ದುರ್ಬಲತೆಯಿಂದ ಅಲ್ಲ… ನಮ್ಮಲ್ಲಿನ ಒಡಕಿನಿಂದ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿ ಡಾ.ಜೀ ಅವರು ಸಂಘವನ್ನು ಕಟ್ಟಿದರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುರಿತು ಉಲ್ಲೇಖಿಸಿದರು.
ವಸುದೈವ ಕುಟುಂಬಕಂ ಎಂಬ ಮಾತಿನಂತೆ ಬದುಕುವ ದೇಶ ನಮ್ಮದು. ಭಾರತ ಕೇವಲ ಶಸ್ತ್ರದ ಮೇಲೆ ನಂಬಿಕೆಯಿಟ್ಟಿಲ್ಲ, ಶಾಸ್ತ್ರದ ಮೇಲೆಯೂ ನಂಬಿಕೆಯಿಟ್ಟಿದೆ. ಶಾಸ್ತ್ರ ರಕ್ಷಣೆಗೆ ಶಸ್ತ್ರ ಎತ್ತಲೂ ತಯಾರಿದ್ದೇವೆ. ನಮ್ಮ ದೇವರ ಒಂದು ಕೈಯಲ್ಲಿ ಅಸ್ತ್ರವೂ ಇದೆ ಎಂಬುದನ್ನು ನೆನಪಿಸಿದರು.
ಕಲ್ಯಾಣ ಕರ್ನಾಟಕ ಪವಿತ್ರ ನೆಲ. ಬಸವಣ್ಣ, ಅಲ್ಲಮಪ್ರಭು ಸೇರಿದಂತೆ ಮಹನೀಯರ ಭೂಮಿ. ಹಿಂದು ಧರ್ಮ ನಿರ್ನಾಮ ಮಾಡುತ್ತೇವೆ ಎಂದವರ ಹುಟ್ಟಡಗಿಸಿದ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಗಾಥೆ ವಿವರಿಸಿದರು. ಸಾಂಬಾಜಿ ಮಹಾರಾಜರ ಮಾತು ಕೇಳಿ ಔರಂಗಜೇಬನು ಸಹ ಇಂತಹ ಮಗ ನನಗೆ ಹುಟ್ಟಲಿಲ್ಲ ಎಂದು ವ್ಯಥೆಪಟ್ಟದ್ದನ್ನು ಮಾರ್ಮಿಕವಾಗಿ ನುಡಿದರು.
ಭವ್ಯ ಶೋಭಾಯಾತ್ರೆ: ಗುರುಮಠಕಲ್ ನಲ್ಲಿ ಜರುಗಿದ ಭವ್ಯ ಶೋಭಾಯಾತ್ರೆಯು ನಗರೇಶ್ವರ ದೇವಸ್ಥಾನ ಬಳಿಯಿಂದ ಆರಂಭಗೊಂಡ ಯಾತ್ರೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಮನಗರ ತಲುಪಿತು. ಈ ಮಧ್ಯೆ ಮಕ್ಕಳ ಸಾಂಸ್ಕೃತಿಕ ನೃತ್ಯ, ಗೊಂಬೆಯಾಟ, ಡೊಳ್ಳು ಕುಣಿತ ಜನರನ್ನು ಆಕರ್ಷಿಸಿದವು. ಅತ್ಯಂತ ಮುಖ್ಯವಾಗಿ ಮಹನೀಯರು,ಸಂತರು, ಸಮಾಜ ಸುಧಾರಕರು, ಐತಿಹಾಸಿಕ ಹಿನ್ನೆಲೆಯುಳ್ಳ ರಾಜರು, ದಾರ್ಶನಿಕರ ಸ್ತಬ್ದ ಚಿತ್ರಗಳ ಮೆರವಣಿಗೆ ಎಲ್ಲಾ ಹಿಂದೂಗಳನ್ನು ಒಗ್ಗೂಡಿಸುವ ಕಹಳೆ ಊದಿದವು.
ಮಾತಾ ಮಾಣಿಕೇಶ್ವರಿ ವೇದ ಪಾಠಶಾಲೆಯ ಮಲ್ಲಿಕಾರ್ಜುನ ಸ್ವಾಮಿ ಅವರು ದಿವ್ಯ ಸಾನಿಧ್ಯವಹಿಸಿ, ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಯುವ ಪೀಳಿಗೆ ಎಂದಿಗೂ ಮರೆಯಬಾರದು ಎಂದು ಕರೆ ನೀಡಿದರು.
ಆಯೋಜನ ಸಮಿತಿ ಅಧ್ಯಕ್ಷ ಪನ್ನಾಲಾಲ ಪಟೇಲ್ ವೇದಿಕೆಯಲ್ಲಿ ಇದ್ದರು. ಪ್ರಮುಖರಾದ ಪ್ರವೀಣಜಿ ಕುಲಕರ್ಣಿ, ಬಿಜೆಪಿ ಜಿಲ್ಲಾಧ್ಯಕ್ಷ ಶಶಿಧರ, ಜಿಲ್ಲಾ ಕಾರ್ಯದರ್ಶಿ ಚಂದುಲಾಲ ಚೌದರಿ, ಸತೀಶ ತಿವಾರಿ, ಶಿವಾನಂದ ಬೂದಿ, ನರಸರೆಡ್ಡಿ ಪಾಟೀಲ್ ಗಡ್ಡೆಸುಗೂರ, ಸೂರ್ಯನಾರಾಯಣ ನೀರೆಟಿ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು, ಯುವಕರು, ಮಾತೆಯರು ಭಾಗವಹಿಸಿದ್ದರು. ಗುರು ಜೋಶಿ ಸ್ವಾಗತಿಸಿದರು. ಬಸಪ್ಪ ಸಂಜನೋಳ ವಂದಿಸಿದರು. ಶ್ರೀನಿವಾಸ ಯಾದವ ಶಾಂತಿ ಮಂತ್ರ ಪಠಿಸಿದರು. ಸ್ಪೂರ್ತಿ ಡ್ಯಾನ್ಸ್ ಅಕಾಡೆಮಿಯ ಮಕ್ಕಳು ಭರತನಾಟ್ಯ ಪ್ರದರ್ಶಿಸಿದರು. ವಿವಿಧ ಸಮಾಜದ ಮಕ್ಕಳು ಸಾಂಸ್ಕೃತಿಕ ನೃತ್ಯ ಪ್ರದರ್ಶನ ನೀಡಿದರು.
