ಜೆಸಿಬಿ ಮೂಲಕ ಹೂಮಳೆಗೈದು ಶಾಸಕ ಶರಣಗೌಡ ಕಂದಕೂರನ್ನು ಸ್ವಾಗತಿಸಿದ ಜನ | ಧಾರ್ಮಿಕ ಕಾರ್ಯದಿಂದ ದೈವಿಕೃಪೆ ಸಾಧ್ಯ ಕಂದಕೂರ ಅಭಿಪ್ರಾಯ
ಗುರುಮಠಕಲ್ : ಪಾಶ್ಚಾತ್ಯ ಸಂಸ್ಕೃತಿಯ ಭರಾಟೆಯಲ್ಲಿ ಬಂಜಾರ ಸಮಾಜದವರು ಇಂದಿಗೂ ತಮ್ಮ ಸಂಪ್ರದಾಯ, ಸಂಸ್ಕೃತಿ ಹಾಗೂ ಆಚರಣೆಗಳನ್ನು ಮರೆಯದೇ ಮುಂದುವರೆಸುತ್ತಿರುವುದು ಭವ್ಯ ಸನಾತನ ಪರಂಪರೆಯ ಹೆಮ್ಮೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.
ತಾಲೂಕಿನ ಕಮಲನಗರ ತಾಂಡಾದಲ್ಲಿ ಸೇವಾಲಾಲ್ ಹಾಗೂ ಮರೆಮ್ಮ ದೇವಿ ಜಾತ್ರೆ ಹಿನ್ನೆಲೆ ಪಲ್ಲಕ್ಕಿ ಉತ್ಸವದ ಬಳಿಕ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು ಮಾತನಾಡಿದರು. ವರ್ಷಕ್ಕೊಮ್ಮೆ ತಾಂಡಾಗಳಲ್ಲಿ ಸೇವಾಲಾಲ್ ಮಹಾರಾಜ್ ಮತ್ತು ಜಗದಂಬಾ ದೇವಿ ಪೂಜೆ, ಜಾತ್ರೆಗಳು ನಡೆಯುವುದು ಸಾಮಾನ್ಯವಾಗಿದೆ. ಶ್ರದ್ಧಾ -ಭಕ್ತಿಯಿಂದ ಮನಪೂರ್ವಕವಾಗಿ ಜನರು ಧಾರ್ಮಿಕ ಕಾರ್ಯದಲ್ಲಿ ತೊಡಗುವುದರಿಂದ ಆ ಭಗವಂತ ಸರ್ವರಿಗೂ ಒಳಿತನ್ನು ಮಾಡಲಿ ಎಂದು ಹಾರೈಸಿದರು.
ಬಳಿಕ ನೈವೇದ್ಯ ಅರ್ಪಿಸಿ, ಸರ್ವರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಇದಕ್ಕು ಮೊದಲು ಬಂಜಾರ ಸಮಾಜಯ ಯುವಕರು, ಮಹಿಳೆಯರು ಅವರ ಸಾಂಕಾದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದರು. ಬೆಳಿಗ್ಗೆಯಿಂದಲೇ ತಾಂಡದಲ್ಲಿ ವಿಶೇಷ ಪೂಜೆ ನಡೆಯಿತು. ಬಳಿಕ ಶಾಸಕ ಶರಣಗೌಡ ಕಂದಕೂರ ಅವರನ್ನು ಭವ್ಯವಾಗಿ ಮೆರವಣಿಗೆ ಮೂಲಕ ಜೆಸಿಬಿಯಿಂದ ಹೂಮಳೆಗೈದು ಸ್ವಾಗತಿಸಲಾಯಿತು.
ಶರಣು ಆವುಂಟಿ, ಬಾಲಪ್ಪ ದಾಸರಿ, ಕರ್ನಾಟಕ ಪದೇಶ ಬಂಜಾರ ಸೇವಾ ಸಂಘದ ಯುವ ಅಧ್ಯಕ್ಷ ಜಗದೀಶ ಪವಾರ್, ಸುರೇಶ ಚಿನ್ನ ರಾಠೋಡ, ಈಶ್ವರ ನಾಯಕ, ವಕೀಲರಾದ ಶಾಂತು ಜಾಧವ, ಮೋಹನ ಪವಾರ್, ವೆಂಕಟೇಶ ರಾಠೋಡ, ಕಿಷ್ಟಾ ನಾಯಕ, ಶಂಕರ್ ನಾಯಕ, ಶಾಣ್ಯಾ ನಾಯಕ, ಹಣಮಂತ ನಾಯಕ ಇತರರು ಇದ್ದರು.
