ಗುರುಮಠಕಲ್ ನಲ್ಲಿ ಲೋಕಾಯುಕ್ತ ನ್ಯಾಯಧೀಶ ರಮಾಕಾಂತ ಚವ್ಹಾಣ ಮಿಂಚಿನ ಸಂಚಾರ | ಪುರಸಭೆ, ತಾ.ಪಂ., ತಹಸೀಲ್ದಾರ್ ಕಚೇರಿ, ಅಂಗನವಾಡಿಗೆ ಭೇಟಿ

ಗುರುಮಠಕಲ್: ಕರ್ನಾಟಕ ಲೋಕಾಯುಕ್ತ ನ್ಯಾಯಾಧೀಶರು ಗುರುಮಠಕಲ್ ತಾಲೂಕು ಕೇಂದ್ರದ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.

ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿದ ವೇಳೆ ಶಿರಸ್ತೇದಾರ ಮೊಬೈಲ್ ಪಡೆದು ಡಿಜಿಟಲ್ ವಹಿವಾಟು ಪರಿಶೀಲನೆ ಮಾಡಿದರು. ಶಿವಕುಮಾರ ಸ್ವಾಮಿ ಕಳೆದ 20 ದಿನದಿಂದ ಗುರುಮಠಕಲ್‌ ನಲ್ಲಿ ಕರ್ತವ್ಯಕ್ಕೆ ನಿಯೋಜನೆ ಗೊಂಡಿರುವ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.

ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿ, ಪುರಸಭೆ ವ್ಯಾಪ್ತಿಯಲ್ಲಿ ನಿವೇಶನಗಳ ಗೊಂದಲ, ಮುಟೇಶನ್ ಸಂಬಂಧಪಟ್ಟಂತೆ ಸಾರ್ವಜನಿಕರ ಸಮಸ್ಯೆ ಆಲಿಸಿದರು. 10 ಗುಂಟೆ ಜಮೀನು ಇರುವವರು, ಅರಣ್ಯ ಇಲಾಖೆಯ ಸ್ಥಳವನ್ನು ಅತಿಕ್ರಮಿಸಿರುವುದು ಈ ಬಗ್ಗೆ ಸಾಮಾಜಿಕ ಹೋರಾಟ ಸಂಜು ಅಳೆಗಾರ ನ್ಯಾಯಾಧೀಶರ ಗಮನಕ್ಕೆ ತಂದರು. ಸಂಬಂಧಿಸಿದ ಇಲಾಖೆ ಜೊತೆಗೆ ಪತ್ರ ವ್ಯವಹಾರ ನಡೆಸಲು ಸಲಹೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿಯಿಂದ ಪಟ್ಟಣದ ಸ್ವಚ್ಛತೆ, ಕಸ ಉತ್ಪಾದನೆ, ಘನತ್ಯಾಜ್ಯ ನಿರ್ವಹಣೆ ಘಟಕ ಇತರೆ ಮಾಹಿತಿ ಪಡೆದರು. ಆವರಣದಲ್ಲಿರುವ ತ್ಯಾಜ್ಯ ಘಟಕದ ವಾಹನ ನಿರುಪಯುಕ್ತವಾಗಿದ್ದರೆ, ಮೇಲಾಧಿಕಾರಿಗಳಿಗೆ ತಿಳಿಸಿ ತೆಗೆಯಲು ಹೇಳಿದರು.ಪಟ್ಟಣಕ್ಕೆ ಭೀಮಾನದಿಯಿಂದ ಕುಡಿಯುವ ನೀರು ಸರಬರಾಜು ಆಗುತ್ತಿದ್ದು, ವೈಜ್ಞಾನಿಕವಾಗಿ ನೀರು ಶುದ್ಧಿಕರಣ, ಉದ್ಯಾನವನಗಳ ವ್ಯವಸ್ಥೆ, ಬಸ್ ನಿಲ್ದಾಣ ತಿರುವಿನಲ್ಲಿ ತರಕಾರಿ ಮಾರಾಟ ಮಾಡುವುದರಿಂದ ಸಂಚಾರಕ್ಕೆ ಅಡೆತಡೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಕ್ರಮವಹಿಸಲು ಸೂಚಿಸಿದರು. ನಿವೇಶನಗಳ ಕುರಿತ ವ್ಯಾಜ್ಯಗಳ ಗೊಂದಲಗಳ ದೂರು ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದರು.

ಇಲ್ಲಿನ ತಾಲೂಕು ಪಂಚಾಯಿತಿ ಕಚೇರಿಗೆ ಭೇಟಿ ನೀಡಿದ ವೇಳೆ ಸಾಮಾಜಿಕ ಹೋರಾಟಗಾರ ನಾಗೇಶ ಗದ್ದಿಗೆ ಅವರು ಮಾಹಿತಿ ನೀಡಿ, ಮಧ್ಯಾಹ್ನ 12 ಗಂಟೆಯಾದರೇ ಗ್ರಾಮೀಣ ಭಾಗದಲ್ಲಿ ಪಿಡಿಓಗಳು ಗ್ರಾ.ಪಂ.ಗಳಲ್ಲಿ ಸಿಗಲ್ಲ. ಇದರಿಂದ ಅಭಿವೃದ್ಧಿ ಮತ್ತು ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ತೊಂದರೆಯಾಗುತ್ತಿದೆ ಎಂದು ಲೋಕಾಯುಕ್ತ ನ್ಯಾಯಾಧೀಶ ರಮಾಕಾಂತ ಅವರ ಗಮನಕ್ಕೆ ತಂದರು. ಇದನ್ನು ಮೌಖಿಕ ದೂರು ಎಂದು ಪರಿಗಣಿಸಿ ಸ್ವೀಕರಿಸಿದರು.

ತಾಲೂಕು ಪಂಚಾಯಿತಿ ರಸ್ತೆಯೇ ಸರಿಯಿಲ್ಲ. ಜನ ಹೇಗೆ ಬರುವರು ಒಂದು ವಾರದಲ್ಲಿ ಸರಿಪಡಿಸಿ, ಸಕಾಲ ಸೇವೆಗಳು, ಯಾವ ಸೇವೆ ಲಭ್ಯವಿದೆ ಯಾವುದೇ ನಾಮಫಲಕ ಇಲ್ಲ. 2025ನೇ ಸಾಲಿನ ನಗದು ಘೋಷಣವಹಿ ನಿರ್ವಹಣೆ ಇಲ್ಲ. ಸರ್ಕಾರದ ನಿಯಮದಂತೆ ಎಲ್ಲಾ ದಾಖಲೆಗಳು ಕಡ್ಡಾಯವಾಗಿರಿಸಿ, ನಿರ್ವಹಣೆ ಮಾಡಿ. ಸೇವೆಯಲ್ಲಿದ್ದು ವರ್ಷಗಳೇ ಕಳೆದರು ಏನು ದಾಖಲೆಗಳಿರಬೇಕು ಎಂದು ಗೊತ್ತಿಲ್ಲವೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು, ಮೂಲಸೌಕರ್ಯ, ಸ್ವಚ್ಛತೆಗೆ ಆದ್ಯತೆ ನೀಡದಿರವ ಕುರಿತು ದೂರುಗಳ ಕುರಿತು ಸಮರ್ಪಕ ಕ್ರಮವಹಿಸಿ ವರದಿ ಸಲ್ಲಿಸುವಂತೆ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕು ಪಂಚಾಯಿತಿಯಲ್ಲಿ ಚಲನವಲನ ನಮೂದಿಸದಿರುವುದು, ಪುಟಪಾಕ್ ಗ್ರಾ.ಪಂ. ಗುತ್ತಿಗೆ ಕಂಪ್ಯೂಟರ್ ಆಪರೇಟರ್ ಸಂಬಳ, ಕಾಕಲವಾರ ಗ್ರಾ.ಪಂ. 15 ನೇ ಹಣಕಾಸು ಯೋಜನೆ ಅನುದಾನ ದುರುಪಯೋಗ ಇತರೆ ವಿಷಯಗಳ ಕುರಿತು ಪರಿಶೀಲಿಸಿದರು.

ತಹಸೀಲ್ದಾರ ಕಚೇರಿಗೆ ಭೇಟಿ ನೀಡಿ, ಕಚೇರಿಗೆ ಬರಲು ಸರಿಯಾದ ರಸ್ತೆಯಿಲ್ಲ. ಸಂಪರ್ಕ ರಸ್ತೆ ಇಲ್ಲದಿದ್ದರೇ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಹಸೀಲ್ದಾರ್ ಕಚೇರಿಯಲ್ಲಿ ಗೋಡೆಗೆ ಬೋರ್ಡ್ ಸರಿಯಾಗಿ ಅಂಟಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಶೌಚಾಲಯ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ, ನೌಸರ್ಗಿಕ ವಿಕೋಪ ಪರಿಹಾರ, ರೈತರ ಬೆಳೆಹಾನಿ ಅರ್ಜಿ ಎಷ್ಟು ಇತ್ಯರ್ಥವಾಗಿದೆ ಎಂದು ಮಾಹಿತಿ ಪಡೆದರು.2023ರಲ್ಲಿ ಮಳೆ ಹಾನಿಯಿಂದ ಪರಿಹಾರ ನೀಡಿಲ್ಲ. 10 ಹಳ್ಳಿಯ 47 ಫಲಾನುಭವಿಗಳಿಗೆ ಫಲಾನುಭವಿಗಳಿಗೆ ಪರಿಹಾರ ಸಿಕ್ಕಿಲ್ಲ ಎಂದು ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ನಾಗೇಶ ಗದ್ದಿಗೆ ಗಮನಕ್ಕೆ ತಂದರು. ಸರ್ಕಾರದ ನಿಯಮದಂತೆ ಪರಿಹಾರ ನೀಡಲು ಸೂಚಿಸಿದರು. ಯಾವುದೇ ದೂರು ಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಕರ್ತವ್ಯ ಲೋಪವಾಗುತ್ತೆ ಎಂದು ಎಚ್ಚರಿಸಿದರು.

ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಧೀಶರು: ಸಾರ್ವಜನಿಕ ವಿವಿಧ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ, ಕುಡಿಯುವ ನೀರು, ಬಸ್ ನಿಲ್ದಾಣದಲ್ಲಿ ತಾಯಿ ಗೃಹ ಇಲ್ಲದಿರುವುದು ಇತರೆ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು. ಬಸ್ ನಿಲ್ದಾಣದಲ್ಲಿ ಈ ಹಿಂದೆ ಇದ್ದ ಉದ್ಯಾನವನ ಅತಿಕ್ರಮಿಸಲಾಗಿದೆ. ಬಸ್ ನಿಲ್ದಾಣ ಸುತ್ತಲು ಅಕ್ರಮ ಡಬ್ಬಿ ಇಟ್ಟಿರುವುದು ಗಮನಿಸಿ 1 ವಾರದಲ್ಲಿ ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅಂಗನವಾಡಿಗೆ ಭೇಟಿ: ಪಟ್ಟಣದ ಗಡಿ ಮೊಹಲ್ಲಾದಲ್ಲಿರುವ ಅಂಗನವಾಡಿ ಕೇಂಧ್ರಕ್ಕೆ ನ್ಯಾಯಧೀಶ ರಮಾಕಾಂತ ಅವರು ಭೇಟಿ ನೀಡಿದರು. ಈ ವೇಳೆ ಮಕ್ಕಳ ದಾಖಲಾತಿ, ಹಾಜರಾತಿ ಹಾಗೂ ಪೌಷ್ಠಿಕ ಆಹಾರ ವಿತರಣೆ ಕುರಿತು ಮಾಹಿತಿ ಪಡೆದರು. ಲೋಕಾಯುಕ್ತ ಡಿವೈಎಸ್ಪಿ ಜೆ.ಹೆಚ್ ಇನಾಂದಾರ್, ಪಿಐ ವೀರಣ್ಣ ದೊಡ್ಡಮನಿ ಸೇರಿದಂತೆ ಸಿಬ್ಬಂದಿಗಳು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!