ಶಹಾಪುರ ತಾಲೂಕಿನ ಮಹಲರೋಜದ ಮಲ್ಲಿಕಾರ್ಜುನ ಮುತ್ಯಾ | ಕಡಿಮೆ ವಯಸ್ಸಿನಲ್ಲಿ ಹೆಚ್ಚು ಖ್ಯಾತಿಗಳಿಸಿರುವ ಮುತ್ಯಾ | ಭಕ್ತರನ್ನು ತಾಯಿ ಹೃದಯದಿಂದ ಕಾಣುವ ವ್ಯಕ್ತಿತ್ವ ಎಂದ ಮುಖಂಡರು
ಗುರುಮಠಕಲ್: ಸರ್ವ ಭಕ್ತರನ್ನು ತನ್ನ ಮಕ್ಕಳಂತೆ ತಾಯಿ ಹೃದಯದಿಂದ ಕಾಣುವ ವ್ಯಕ್ತಿತ್ವ ಹೊಂದಿರುವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಷಡ್ಯಂತ್ರ ರಚಿಸಲಾಗಿದೆ ಎಂದು ಕೋಲಿ ಸಮಾಜದ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುರುಮಠಕಲ್ ಪಟ್ಟಣದ ಕಾಕಲವಾರ ಬೇಸ್ ಆಂಜನೇಯ ದೇವಸ್ಥಾನ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮುತ್ಯಾ ಅವರ ಬೆಳವಣಿಗೆ ಸಹಿಸದವರು ಕುತಂತ್ರ ಮಾಡಿ, ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಇದನ್ನು ಎಂದಿಗೂ ಸಹಿಸುವುದಿಲ್ಲ. ಮುತ್ಯಾ (ಸ್ವಾಮಿ)ಗಳು ಮಕ್ಕಳನ್ನು ಪ್ರೀತಿಯಿಂದ ಕಾಣುತ್ತಾರೆ, ಅಲ್ಲಿಗೆ ಬರುವ ಭಕ್ತರೊಂದಿಗೆ ಕುಟುಂಬದವರಂತೆ ಕಾಣುವ ಮುತ್ಯಾ ಅವರ ತೋಜೊವಧೆ ಮಾಡಲಾಗುತ್ತಿದೆ ಎಂದು ಮುಖಂಡ ಅನಂತಪ್ಪ ಯದ್ಲಾಪೂರ ಹೇಳಿದರು.
ಪ್ರಕರಣದ ಹಿಂದೆ ಕಾಣದ ಕೈಗಳು ಇರುವ ಶಂಕೆ ವ್ಯಕ್ತವಾಗಿದೆ. ಸತ್ಯಾಸತ್ಯತೆ ತಿಳಿಯಬೇಕಿದ್ದ ಅಧಿಕಾರಿಗಳು ಆತುರದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸಮಾಜದ ಅಧ್ಯಕ್ಷ ಅಶೋಕ ಸಂಜನೋಳ ಮಾತನಾಡಿ, ಈ ಪ್ರಕರಣ ಬಗ್ಗೆ ಸತ್ಯ ಹೊರಬರಬೇಕು. ಅಧಿಕಾರಿಗಳ ತಂಡ ರಚಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಹಿಂದು ಮುಖಂಡ ಸೂರ್ಯ ನಾರಾಯಣ ನೀರೆಟಿ ಮಾತನಾಡಿ, ಹಿಂದು ಧರ್ಮಗುರುಗಳು, ಧಾರ್ಮಿಕ ಕೇಂದ್ರಗಳ ವಿರುದ್ಧ ಷಡ್ಯಂತ್ರ ಮಾಡುವ ಗುಂಪುಗಳು ಕೆಲಸ ಮಾಡುತ್ತಿವೆ. ಹಿಂದು ಸಮಾಜ ಜಾಗೃತವಾಗಬೇಕು ಎಂದು ಕರೆ ನೀಡಿದರು. ಭಕ್ತರ ಮನಸ್ಸು ಘಾಸಿ ಮಾಡುವ ಪ್ರಯತ್ನವಾಗುತ್ತಿದ್ದು, ಇದನ್ನು ಸೂಕ್ಷ್ಮವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಅಮೃತಾ ಬೋರಬಂಡ ಮಾತನಾಡಿದರು. ಈ ವೇಳೆ ತಿಮ್ಮಪ್ಪ ,ರಾಮುಲು ಕೆ, ಬಸಣ್ಣ ಅರಬಿಂಜರ್, ಕನ್ನಯ್ಯ ಪಡಿಗೆ, ಶರಣು, ವೆಂಕಟೇಶ, ನರಸಿಂಹ ಗಂಗನೋಳ್ ಸೇರಿದಂತೆ ಹಲವರು ಇದ್ದರು.
