ಗುರುಮಠಕಲ್ ಮತಕ್ಷೇತ್ರದಲ್ಲಿ ವಿವಿಧ ಇಲಾಖೆಗಳ 42 ಕಾಮಗಾರಿಗೆ ಚಾಲನೆ, ಉದ್ಘಾಟನೆ | ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸಿದ ಶಾಸಕರು | 2026ರ ಬಳಿಕ ಅಭಿವೃದ್ಧಿಯ ಪಿಕ್ಚರ್ ಬಿಡುಗಡೆ ಮಾಡುವೆ | ಶರಣಗೌಡ ಕಂದಕೂರ ಹೇಳಿಕೆ
ಯಾರಿಗೂ ವೈಯಕ್ತಿಕ ಟೀಕೆ ಮಾಡಿಲ್ಲ. ಸರ್ಕಾರದ ಹಂತದಲ್ಲಿ ನನ್ನ ಕ್ಷೇತ್ರದ ಅಭಿವೃದ್ಧಿಗೆ ಮಾತನಾಡುವುದು ನನ್ನ ಜವಾಬ್ದಾರಿ, 113 ಕೋಟಿ ರೂಪಾಯಿ ಸಚಿವರು ಕೇಳಲಾರದೆ ಕೊಟ್ಟಿದ್ದಾರೆ. ಅಭಿವೃದ್ಧಿ ಗೆ ಸಹಕರಿಸಿದ್ದಾರೆ – ಶರಣಗೌಡ ಕಂದಕೂರ ಶಾಸಕರು, ಗುರುಮಠಕಲ್.
ಗುರುಮಠಕಲ್: ನನ್ನನ್ನು ನಂಬಿದ ಕ್ಷೇತ್ರದ ಜನರಿಗಾಗಿ ಅಧಿಕಾರದಲ್ಲಿರಬೇಕಿದೆ. ಹೊರತು ತನಗಾಗಿ ಅಲ್ಲ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅಭಿಪ್ರಾಯಪಟ್ಟರು. ಅಧಿಕಾರ ಇರಲಿ, ಬಿಡಲಿ ಸಾಯುವವರೆಗೂ ಕ್ಷೇತ್ರದ ಜನರ ಕಷ್ಟ, ಸುಖಗಳಲ್ಲಿ ಭಾಗಿಯಾಗುತ್ತೆನೆ. ಇದು ಟ್ರೈಲರ್ 2026ರಲ್ಲಿ ಅಭಿವೃದ್ಧಿಯ ಪಿಕ್ಚರ್ ಬಿಡುಗಡೆ ಮಾಡುವೆ ಎಂದರು.
ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಮಟ್ಟದ ಒಟ್ಟು 112.54 ಕೋಟಿ ರೂ. ವೆಚ್ಚದ 42 ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಉದ್ಘಾಟನೆ ಸಮಾರಂಭ ನೆರವೇರಿಸಿ ಮಾತನಾಡಿದ ಅವರು, ನನ್ನ ಸ್ಪೀಡಿಗೆ ತಕ್ಕಂತೆ ಅಧಿಕಾರಿಗಳು ನಡೆಯುತ್ತಿರುವುದರಿಂದ ಇಂದು ಈ ಅಭಿವೃದ್ಧಿ ಕಾರ್ಯಗಳು ಸಾಗುತ್ತಿವೆ ಎಂದರು.
ಗುರುಮಠಕಲ್ ಕ್ಷೇತ್ರದ ಜನರು ಕಂದಕೂರ ಕುಟುಂಬಕ್ಕೆ ಎರಡನೇ ಸಲ ಅವಕಾಶ ನೀಡಿದ್ದಿರಿ. ಈ ಏಳುವರೇ ವರ್ಷದಲ್ಲಿ ನಾನು ಒಂದೇ ಒಂದು ರೂಪಾಯಿಯ ಭ್ರಷ್ಟಾಚಾರ ಮಾಡಿಲ್ಲ, ಯಾವ ಅಧಿಕಾರಿಯಿಂದಲ್ಲೂ ಹತ್ತು ರೂಪಾಯಿ ಪಡೆದಿಲ್ಲ. ವಿರೋಧಿಗಳು ಸುಳ್ಳು ಹೇಳುವುದು ಬಿಟ್ಟು ಸಾಬೀತು ಮಾಡಿ ತೊರಿಸಲಿ. ಆಗ ನಾನು ಈ ಗುರುಮಠಕಲ್ ನ ಗುಡ್ಡ ಹತ್ತುವುದೇ ಇಲ್ಲ ಎಂದು ಶಾಸಕರು ಸವಾಲ್ ಹಾಕಿದರು.
ನಮ್ಮನ್ನು ನಂಬಿ ಜತೆಗಿದ್ದರವರಿಗೆ ಕೆಲವರಿಗೆ ಏನು ಒಳ್ಳೆಯದು ಮಾಡಲೂ ಆಗದಿದ್ದರೂ ಕ್ಷೇತ್ರದ ಹೆಸರಿಗೆ ಮಸಿ ಬಳೆಯುವ ಕೆಲಸ ಮಾಡುವುದಿಲ್ಲ ಎಂಬ ಭರವಸೆಯ ಮಾತುಗಳನ್ನು ಶಾಸಕರು ನುಡಿದರು. ಇಲಾಖಾವಾರು ಕಾಮಗಾರಿಗಳ ಚಾಲನೆ ಮತ್ತು ಉದ್ಘಾಟನೆ ಬಗ್ಗೆ ಶಾಸಕರು ವಿವರವಾಗಿ ತಿಳಿಸಿದರು.
ಈ ಸರ್ಕಾರ ಇರಬೇಕೆಂಬುವುದು ನನ್ನ ವೈಯಕ್ತಿಕ ವಿಚಾರ. ಇನ್ನೂ ಸರ್ಕಾರ ಬದಲಾದರಂತೂ ಕ್ಷೇತ್ರಕ್ಕೆ ಈಗಿನಕ್ಕಿಂತ ಅತಿಹೆಚ್ಚು ಅನುದಾನ ಸಿಗುವುದು ಗ್ಯಾರಂಟಿ. ನಾನು ಎಂಎಲ್ ಎ ಆಗಬೇಕೆಂದು ಅಂದುಕೊಂಡಿರಲಿಲ್ಲ. ವಿರೋಧಿಗಳು ನಮ್ಮ ಬಗ್ಗೆ ಆಗ ಆಡಿದ ಮಾತುಗಳನ್ನೇ ಚಾಲೆಂಜ್ ಆಗಿ ತೆಗೆದುಕೊಂಡೆ, ಅವರ ಅಪ್ಪನಿಗೆ ಅನುಕಂಪದಿಂದ ಆಯ್ಕೆ ಮಾಡಲಾಗಿದೆ. ಈ ಹುಡುಗನಿಗೆ ಯಾರು ಓಟ್ ಹಾಕುತ್ತಾರೆಂಬ ರಾಜಕೀಯ ವಿರೋಧಿಗಳನ್ನು ಕೇಳಿದಾಗ ಜಿದ್ದಿನಿಂದ ಕಣಕ್ಕೆ ಇಳಿದೆ. ತಾವು ಆರ್ಶಿವಾದ ಮಾಡಿದ್ದಿರಿ. ಈಗ ಕೆಲಸ ಮಾಡುತ್ತಿರುವೆ ಎಂದು ಶಾಸಕ ಶರಣಗೌಡ ಕಂದಕೂರ ಹಳೆಯ ನೆನಪುಗಳನ್ನು ಬಿಚ್ಚಿಟ್ಟರು. ಇದರ ಮಧ್ಯೆಯೇ ವಿರೋಧಿಗಳಿಗೆ ಟಾಂಗ್ ಕೊಡುವುದು ಮರೆಯದೇ ಇಂದಿನ ಈ ಬಹುದೊಡ್ಡ ಮಟ್ಟದ ಕಾರ್ಯಕ್ರಮಕ್ಕೇ ಕೆಲವು ವಿರೋಧಿಗಳು ಅಡಚಣೆ ಮಾಡಿದ್ದರು. ಆದರೇ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರ ಸಹಕಾರ ಮತ್ತು ಎಲ್ಲಾ ಇಲಾಖೆಗಳ ಅಧಿಕಾರಿಗಳ ಪ್ರಯತ್ನದಿಂದ ಯಶಸ್ಸಿಯಾಗಿದೆ ಎಂದು ಸಚಿವರ ಸಹಕಾರವನ್ನು ನೆನದರು.
ಜನಸಾಗರದ ನಡುವೆ ಕಾಮಗಾರಿಗಳಿಗೆ ಚಾಲನೆ : ಸೋಮವಾರ ಪಟ್ಟಣ ಜನಸಾಗರದಿಂದ ತುಂಬಿತ್ತು. ಬೃಹತ್ ಮಟ್ಟದ ಕಾರ್ಯಕ್ರಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ, ಉದ್ಘಾಟನೆ ಹಿನ್ನೆಲೆ ಭಾಗವಹಿಸಲು ಆಗಮಿಸಿದ್ದ ಕ್ಷೇತ್ರದ ಅಪಾರ ಹಳ್ಳಿಯ ಜನರು ಭಾಗವಹಿಸಿದ್ದರು. ಊರ ತುಂಬೆಲ್ಲಾ ಸ್ವಾಗತ ಕಮಾನಗಳು, ಬೃಹತ ಪ್ರಮಾಣದ ವೇದಿಕೆ, ಎಲ್ಲೆಂದರಲ್ಲಿ ಪೊಲೀಸ್ ಸರ್ಪಗಾವಲು, ವಿವಿಧ ಇಲಾಖೆಗಳ ಅಧಿಕಾರಿಗಳು, ಜೆಡಿಎಸ್ ಪಕ್ಷದ ಕಾರ್ಯಕರ್ತರು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು. ಕಾರ್ಯಕ್ರಮಗಳಿಗೆ ಸಿಎಂ, ಕೇಂದ್ರ ಸಚಿವ, ನಾಯಕರು ಬರುವಾಗ ಇರುವ ವ್ಯವಸ್ಥೆಯೇ ಇಲ್ಲಿ ಮಾಡಲಾಗಿತು. ವಾಹನಗಳ ಪಾರ್ಕಿಂಗ ವ್ಯವಸ್ಥೆ ಹಿಡಿದು ಪ್ರತಿಯೊಂದು ದೊಡ್ಡಮಟ್ಟದ ಮಾಡುವ ಮೂಲಕ ನೊಡುವ ಜನರು ಬೆರಗಾಗುವಂತೆಯೇ ಎಲ್ಲವೂ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿದರು.
ಒಬ್ಬ ಶಾಸಕ – ನೂರು ಅಧಿಕಾರಿಗಳು: ಇದೊಂದು ಅತ್ಯಂತ ವಿಶೇಷ ಕಾರ್ಯಕ್ರಮವಾಗಿ ನೋಡುಗರಿಗೆ ಅನಿಸಿತು. ಕಾರಣ, 122 ಕೋಟಿ ರೂ. ಮೌಲ್ಯದ 12 ಇಲಾಖೆಗಳ 28 ಕಾಮಗಾರಿಗಳಿಗೆ ಚಾಲನೆ ಮತ್ತು ಉದ್ಘಾಟನೆ ಮಾಡಿದ್ದು, ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ. ಇದಕ್ಕೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಸುಮಾರು ನೂರು ಅಧಿಕಾರಿಗಳ ತಂಡ ಸಾಥ್ ನೀಡಿದರು. ಬಹುತೇಕ ಕಾರ್ಯಕ್ರಮಗಳಲ್ಲಿ ವಿವಿಧ ತರಹದ ಜನಪ್ರತಿನಿಧಿಗಳೇ ವೇದಿಕೆಯಲ್ಲಿ ಇರುವುದು ಕಾಣುತ್ತಿರುವುದು ಸಹಜ. ಆದರೆ ಇಲ್ಲಿ ಒಬ್ಬ ಶಾಸಕ, ಐವತ್ತುಕ್ಕೂ ಹೆಚ್ಚು ಅಧಿಕಾರಿಗಳು ವೇದಿಕೆಯಲ್ಲಿ ಆಸಿನರಾಗುವ ಮೂಲಕ ಮತ್ತು ಕಾರ್ಯಕ್ರಮದ ಅಕ್ಕಪಕ್ಕದಲ್ಲಿ ಐವತ್ತು ಹೆಚ್ಚು ಅಧಿಕಾರಿಗಳು ಇದ್ದು ಯಶಸ್ಸಿ ಮಾಡಿದ್ದು ನೋಡುಗರಿಗೆ ಖುಷಿ ನೀಡಿತು.
ವಿವಿಧ ಇಲಾಖೆಯ ₹112.54 ಕೋಟಿ ರೂಪಾಯಿಯ ಕಾಮಗಾರಿ: 2023-24 ನೇ ಸಾಲಿನ ಕೆಕೆಆರ್ ಡಿಬಿ ಯೋಜನೆಯಡಿ ಒಟ್ಟು 3.10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿತಿ ಕೇಂದ್ರದಿಂದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳು ಗುರುಮಠಕಲ್ ಮತಕ್ಷೇತ್ರದ ಯಲಸತ್ತಿ, ಬಾಡಿಯಾಳ, ಆಶನಾಳ , ಬೆಳಿಗೇರಾ,ಚಪೇಟ್ಲಾ ಮತ್ತು ಮೀನಾಸಪೂರ ಗ್ರಾಮಗಳಲ್ಲಿ ಆರಂಭಗೊಳ್ಳಲಿವೆ.
50 ಲಕ್ಷ ರೂ.ವೆಚ್ಚದಲ್ಲಿ ಗುರುಮಠಕಲ್ ಪಟ್ಟಣದಲ್ಲಿ ನೂತನ ಕಲ್ಯಾಣ ವಾಚನಾಲಯ ಗ್ರಂಥಾಲಯ ಕಟ್ಟಡ ನಿರ್ಮಾಣ ಹಾಗೂ ಪುಸ್ತಕ, ಪೀಠೋಪಕರಣ ಒದಗಿಸುವ ಕಾಮಗಾರಿಗೆ ಚಾಲನೆ ನೀಡಲಾಯಿತು.
ಆರೋಗ್ಯ ಇಲಾಖೆ ಕಾಮಗಾರಿಗಳು: 3.50 ಕೋಟಿ ರೂ. ಅನುದಾನದಲ್ಲಿ ಹತ್ತಿಕುಣಿ ಗ್ರಾಮದಲ್ಲಿ 24×7 ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಿಬ್ಬಂದಿ ವಸತಿ ಗೃಹ ನಿರ್ಮಾಣ. 6.45 ಕೋಟಿ ರೂ. ವೆಚ್ಚದಲ್ಲಿ ಗುರುಮಠಕಲ್ ಪಟ್ಟಣದಲ್ಲಿ 30 ಹಾಸಿಗೆಯಿಂದ 50 ಹಾಸಿಗೆಯ ಮೇಲ್ದರ್ಜೆಗೇರಿಸುವ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ 5.85 ಕೋಟಿ ರೂ.ಅನುದಾನದಲ್ಲಿ ತಲಾ 65 ಲಕ್ಷ ರೂ.ಗಳಂತೆಯೇ ಮತಕ್ಷೇತ್ರದ 9 ಗ್ರಾಮಗಳಾದ ಅಚ್ಚೋಲ, ಅಜಲಾಪೂರ, ಬಂದಳ್ಳಿ, ಸೈದಾಪೂರ, ಬೆಳಗುಂದಿ,ಮಾದ್ವಾರ್, ಗುಂಜನೂರ, ಕಂದಕೂರ ಮತ್ತು ವಂಕಸಂಬ್ರ ಗ್ರಾಮಗಳಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.141 ಲಕ್ಷ ರೂ.ವೆಚ್ಚದಲ್ಲಿ ಸೈದಾಪುರ ಸ್ಟೇಷನ್ ಸಮುದಾಯ ಆರೋಗ್ಯ ಕೇಂದ್ರ ಆವರಣದಲ್ಲಿ ಎಎನ್ ಎಂ ಕ್ವಾಟ್ರಸ್ ಕಟ್ಟಡ ಕಾಮಗಾರಿ ಉದ್ಘಾಟನೆ ಮಾಡಲಾಯಿತು.
ಭೂಮಿ ಪೂಜೆ : ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಹಾಗೂ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ, ನಿಯಮಿತ ಇವರ ಸಂಯುಕ್ತಾಶ್ರಯದಲ್ಲಿ 2.16 ಕೋಟಿ ರೂ.ವೆಚ್ಚದ ಗುರುಮಿಠಕಲ್ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ಕೊಡಲಾಯಿತು.
ಬ್ಯಾರೇಜ್ ಕಂ ಬ್ರೀಜ್ ಗಳ ಉದ್ಘಾಟನೆ : ಸಣ್ಣ ನೀರಾವರಿ ಇಲಾಖೆಯಿಂದ 16 .60 ಕೋಟಿ ರೂ.ವೆಚ್ಚದಲ್ಲಿ ತಾಲೂಕಿನ ಇಡ್ಲೂರ ಗ್ರಾಮದ ಹತ್ತಿರ 10 ಕೋಟಿ. ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬ್ಯಾರೇಜ ಕಂ ಬ್ರಿಡ್ಜ್ ನಿರ್ಮಾಣದ ಉದ್ಘಾಟನೆ ಮಾಡಲಾಯಿತು. 2 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪಟ್ಟಣದಲ್ಲಿನ ಬ್ಯಾರೇಜ ಕಂ ಬ್ರಿಡ್ಜ್ ನಿರ್ಮಾಣದ ಉದ್ಘಾಟನೆ, 2 ಕೋಟಿ ರೂ.ಅನುದಾನ ಯರಗೋಳ ಗ್ರಾಮದ ಹತ್ತಿರದ ಸ್ಥಳೀಯ ನಾಲಾಕ್ಕೆ ಬಿಸಿಬಿ ನಿರ್ಮಾಣದ ಉದ್ಘಾಟನೆ ಹಾಗೂ 2.60 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮೋಟ್ನಳಿ ಸಣ್ಣ ಅಣೆಕಟ್ಟಿನ ಉದ್ಘಾಟನೆಯನ್ನು ಶಾಸಕರು ಮಾಡಿದರು.
ಹಕ್ಕುಪತ್ರ ವಿತರಣೆ : ಕೊಳಗೇರಿ ಇಲಾಖೆಯಿಂದ 200 ಮನೆಗಳ ಪೈಕಿ ಸಾಂಕೇತಿಕವಾಗಿ ಐವರಿಗೆ ಮನೆಗಳ ಹಕ್ಕುಪತ್ರ ವಿತರಣೆ. ಕಾರ್ಮಿಕ ಇಲಾಖೆಯಿಂದ ವಿವಿಧ ತರಹದ ಮಷಿನಗಳ ವಿತರಣೆ. ಅಲ್ಪಸಂಖ್ಯಾತರ ಇಲಾಖೆಯಿಂದ ಪಂಪಸೆಟ್ ವಿತರಿಸಿದರು.
ಅಡಿಗಲ್ಲು ಸಮಾರಂಭ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 2024-25ನೇ ಸಾಲಿನ ಪಿಎಂಜೆವಿಕೆ ಯೋಜನೆ ಅಡಿಯಲ್ಲಿ 9.90 ಕೋಟಿ.ರೂ.ವೆಚ್ಚದಲ್ಲಿ ಬಾಲಛೇಡ್ ಗ್ರಾಮದಲ್ಲಿವ ನವೋದಯ ಮಾದರಿ ವಸತಿ ಶಾಲೆ ಕಟ್ಟಡದ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು.
ಕ್ಷೇತ್ರಕ್ಕೆ ಬೆಳಕು ನೀಡಿದ ನಾಯಕ : ಹೆಬಿಟೇಟ್ ಇಲಾಖೆ ಯಿಂದ 26.60 ಕೋಟಿ ರೂ.ದಲ್ಲಿ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳು, ತಾಂಡಗಳು ಮತ್ತು ಪಟ್ಟಣದ ವಿವಿಧ ವಾರ್ಡಗಳಲ್ಲಿ ಸೋಲಾರ ಹೈ-ಮಾಸ್ಟ ದೀಪ ಕಾಮಗಾರಿಗೆ ಚಾಲನೆ ಸಿಗಲಿದೆ. ಹೀಗೆ ಒಟ್ಟು 112 .54 ಕೋಟಿ.ರೂ.ಅನುದಾನದ ವಿವಿಧ ಕಾಮಗಾರಿಗಳಿಗೆ ಚಾಲನೆ, ಉದ್ಘಾಟನೆ ನಡೆಯಿತು.

ಯಾರಿಗೂ ವೈಯಕ್ತಿಕ ಟೀಕೆ ಮಾಡಿಲ್ಲ. ಸರ್ಕಾರದ ಹಂತದಲ್ಲಿ ನನ್ನ ಕ್ಷೇತ್ರದ ಅಭಿವೃದ್ಧಿಗೆ ಮಾತನಾಡುವುದು ನನ್ನ ಜವಾಬ್ದಾರಿ, 113 ಕೋಟಿ ರೂಪಾಯಿ ಸಚಿವರು ಕೇಳಲಾರದೆ ಕೊಟ್ಟಿದ್ದಾರೆ. ಅಭಿವೃದ್ಧಿ ಗೆ ಸಹಕರಿಸಿದ್ದಾರೆ – ಶರಣಗೌಡ ಕಂದಕೂರ ಶಾಸಕರು, ಗುರುಮಠಕಲ್.