ಸದನದಲ್ಲಿ ಗುಡುಗಿದ ಶಾಸಕ ಶರಣಗೌಡ ಕಂದಕೂರ | ಅಕ್ರಮ ಮದ್ಯ ಮಾರಾಟಕ್ಕೆ ಕೆಲ ಅಬಕಾರಿ ಅಧಿಕಾರಿಗಳೇ ಶಾಮಿಲು |ಕೆಎಸ್ ಆರ್ ಪಿ ಬಟಾಲಿನ್ ಮಂಜೂರು ಮಾಡಿ : ಕಂದಕೂರ
ಯಾದಗಿರಿ: ಜಿಲ್ಲೆಯ ತಮ್ಮ ಮತಕ್ಷೇತ್ರ ಗುರುಮಠಕಲ್ ಸೇರಿದಂತೆ ವಿವಿಧಡೆ ಇರುವ 5 ಸಿಎಚ್ ಸಿ ಆಸ್ಪತ್ರೆಗಳನ್ನು ಮುಚ್ಚುವ ನಿರ್ಧಾರವನ್ನು ಸರ್ಕಾರ ಪರಿಶೀಲಿಸಬೇಕೆಂದು ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಒತ್ತಾಯಿಸಿದರು.
ಅಧಿವೇಶನದಲ್ಲಿ ಮಂಗಳವಾರ ಆರೋಗ್ಯ, ಅಬಕಾರಿ ಮತ್ತು ಪೊಲೀಸ್ ಇಲಾಖೆಗಳು ಜಿಲ್ಲೆಗೆ ಸಂಬಂಧಪಟ್ಟಂತೆಯೇ ಕೈಗೊಳ್ಳಬೇಕಾದ ಪ್ರಮುಖ ವಿಷಯಗಳನ್ನು ಸವಿಸ್ತಾರವಾಗಿ ಮಾತನಾಡಿ ಗಮನ ಸೆಳೆದರು.
ಮೊದಲೇ ನಮ್ಮ ಜಿಲ್ಲೆಯಲ್ಲಿ ಗುಳೆ ಹೋಗುವ ಜನರು ಹೆಚ್ಚು. ಅದರಲ್ಲೂ ಆರೋಗ್ಯ ಸಂಬಂಧಿತ ವಿವಿಧ ರೋಗಗಳಿಂದ ಬಳಲುವವರು ಹೆಚ್ಚು. ಹೀಗಿರಬೇಕಾದರೇ ಗ್ರಾಮೀಣ ಪ್ರದೇಶದಲ್ಲಿರುವ ಸಿಎಚ್ ಸಿ, ಪಿಎಚ್ ಸಿ ಆಸ್ಪತ್ರೆಗಳು ಬಂದ್ ಮಾಡಲು ಮುಂದಾದರೇ ನಮ್ಮ ಜನರ ಆರೋಗ್ಯದ ಗತಿ ಏನಾಗಬೇಡ. ಹಳ್ಳಿ ಬಿಟ್ಟು ಗುರುಮಠಕಲ್ ಬಂದು ಚಿಕಿತ್ಸೆ ಪಡೆಯರಿ ಎಂದರೆ ಜನರಿಗೆ ಆಗುವುದಿಲ್ಲ ಎಂದರು.
ಹಿಂದೇ ಡಾ.ಎ.ಬಿ.ಮಲಕರೆಡ್ಡಿ ಅವರು ಆರೋಗ್ಯ ಮಂತ್ರಿಗಳಿದ್ದಾಗ, ನಮ್ಮ ತಂದೆ ನಾಗನಗೌಡರು ಜಿಪಂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಿದ್ದಾಗ ಕೆಲವು ಊರುಗಳಿಗೆ ಸಿಎಚ್ ಸಿ ಮತ್ತು ಪಿಎಚ್ ಸಿ ಆಸ್ಪತ್ರೆಗಳು ಮಂಜೂರು ಮಾಡಿಸಿದ್ದರು. ಅವುಗಳನ್ನು ನೀವು ಬಂದ್ ಮಾಡಿದರೇ ಜನರು ಸುಮ್ಮನ್ನೆ ಇರುವುದಿಲ್ಲ. ಅವರು ತಂದರು, ಇವರು ಬಂದ್ ಮಾಡಿದರೆಂದು ನಮಗ ಮೇಲೆ ತಪ್ಪು ತಿಳಿದುಕೊಳ್ಳುತ್ತಾರೆ. ಅದಕ್ಕೆ ಅದನ್ನು ಪರಿಶೀಲನೆ ಮಾಡಿರಿ, ಇಲ್ಲವೆಂದರೇ ಬರುವ ಸೋಮವಾರ ಓಟಿಂಗ್ ಗೆ ಹಾಕಿ ಎಂದು ಶಾಸಕ ಕಂದಕೂರ ಅವರು, ಸರ್ಕಾರದ ನಡೆಯನ್ನು ತರಾಟೆಗೆ ತೆಗೆದುಕೊಂಡರು.
ಮೂವತ್ತು ಹೆರಿಗೆ ಮಾಡಬೇಕೆಂಬ ಕಂಡಿಷನ್ ಹಾಕಿದ್ದಿರಿ, ಅಷ್ಟು ಹೆರಿಗೆ ಮಾಡಿಸಲು ಸೌಲಭ್ಯಗಳೇ ನೀಡಿಲ್ಲ. ಮೊದಲು ಹೆರಿಗೆಗಾಗಿ ಬೇಕಾಗುವ ಸೌಲತ್ತು ನೀಡಿ ಎಂದು ಆರೋಗ್ಯ ಸಚಿವರಿಗೆ ಆಗ್ರಹಿಸಿದರು. ಗುರುಮಠಕಲ್ ಸೇರಿದಂತೆ ಜಿಲ್ಲೆಗೆ ಇಂದಿಗೂ ಔಷಧಿಗಳ ಸರಬರಾಜು ಆಗಿಲ್ಲ. ನೀವು ನೀಡಿದ ಮಾಹಿತಿ ಸುಳ್ಳು ಇದೆ ಎಂದು ಶಾಸಕ ಕಂದಕೂರ ತಿರುಗೆಟು ನೀಡಿದರು. ಈ ವೇಳೆ ಮಾತನಾಡಿದ ಆರೋಗ್ಯ ಸಚಿವ ದಿನೇಶ ಗುಂಡುರಾವ್ ಅವರು ಈ ಎಲ್ಲ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಹೇಳಿದರು.
ಕೆಲ ಅಬಕಾರಿ ಅಧಿಕಾರಿಗಳೇ ಶಾಮಿಲು: ಜಿಲ್ಲೆಯ ಕೆಲವು ಅಬಕಾರಿಗಳು ನೇರವಾಗಿ ವೈನ್ ಶಾಪ್‌ಗಳಿಂದ ಹಳ್ಳಿಗಳಿಗೆ ಮದ್ಯ ಸಾಗಿಸುವ ಕೆಲಸ ಮಾಡುತ್ತಿದ್ದಾರೆ.ಕೂಡಲೇ ಇದು ನಿಲ್ಲಿಸುವತ್ತ ಅಬಕಾರಿ ಸಚಿವರು ಗಮನ ಹರಿಸಬೇಕೆಂದು ಶಾಸಕ ಕಂದಕೂರ ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆಎಸ್ ಆರ್ ಪಿ ಬಟಾಲಿನ್ ನ ಸ್ಥಾಪನೆ ಅವಶ್ಯಕತೆ: ರಾಯಚೂರಿನಲ್ಲಿ ಸ್ಥಾಪಿಸಲು ಈಗಾಗಲೇ 30 ಜನ ಶಾಸಕರು ಪತ್ರ ಕೊಟ್ಟಿದ್ದೆವೆ. 175 ಎಕರೆ ಜಾಗವೂ ನೀಡುವುದಾಗಿ ಹೇಳಿದ್ದೇವೆ. ಕಳೆದ ಅಧಿವೇಶನದಲ್ಲೂ ಈ ಬಗ್ಗೆ ಪ್ರಸ್ತಾವಿಸಿದ್ದೆ, ಗೃಹ ಸಚಿವರಿಗೂ ಭೇಟಿ ಮಾಡಿ ವಿಷಯ ತಿಳಿಸಿದ್ದೆವೆ. ಅನುದಾನ ಬೇಕಿದ್ದರೇ ಕೆಕೆಆರ್ ಡಿಬಿ ಮೈಕ್ರೋ ಯೋಜನೆಯಡಿ ನೀಡಲು ಸಿದ್ದರಿದ್ದವೆಂದು ಹೇಳಿದ ಶಾಸಕರಿಗೆ ಉತ್ತರಿಸಿದ ಗೃಹ ಸಚಿವ ಡಾ. ಪರಮೇಶ್ವರ ಅವರು, ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಆರ್ಥಕ ಇಲಾಖೆಯಿಂದ ಅನುಮೋದನೆ ಸಿಕ್ಕ ಕೂಡಲೇ ಅದನ್ನು ಕಾರ್ಯಗತ ಮಾಡುವುದಾಗಿ ಹೇಳಿದರು.
