ಸರಕಾರ ಜನರ ಹೋರಾಟವನ್ನು ಎದುರಿಸಲು ಸಿದ್ದವಾಗಲಿ – ನಿಂಗಪ್ಪ | ಶಾಲೆ ಮುಚ್ಚದಂತೆ ಪಸಪೂಲ್ ತಾಂಡಾ ಜನರ ಪ್ರತಿಭಟನೆ
ಗುರಮಠಕಲ್: ತಾಲೂಕಿನಲ್ಲಿ KPS- ಮ್ಯಾಗ್ನೆಟ್ ಹೆಸರಿನಲ್ಲಿ ಪಸಪೂಲ್ ಸರ್ಕಾರಿ ಶಾಲೆ ಮುಚ್ಚುವ ಕ್ರಮವನ್ನು ಖಂಡಿಸಿ ತಾಂಡಾದ ಪೋಷಕರು ಮತ್ತು ಮಕ್ಕಳು AIDSO ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ AIDSO ರಾಜ್ಯ ಸಮಿತಿ ಸದಸ್ಯೆ ಪ್ರೀತಿ ದೊಡ್ಡಮನಿ, KPS – ಮ್ಯಾಗ್ನೆಟ್ ಯೋಜನೆಯ ಹೆಸರಿನಲ್ಲಿ 40,000 ಕ್ಕೂ ಅಧಿಕ ಶಾಲೆಗಳನ್ನು ರಾಜ್ಯ ಸರ್ಕಾರ ಮುಚ್ಚಲು ಮುಂದಾಗಿದೆ. ಈ ಯೋಜನೆಯಿಂದ ಸರ್ಕಾರವು ಬಡ, ರೈತ – ಕಾರ್ಮಿಕರ ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರದ ಯೋಜನೆಯ ಅನುಷ್ಠಾನಕ್ಕೆ ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಸಭೆ ಬಳಿಕ ಮಾತನಾಡಿರುವ ಸಚಿವ
ಎಚ್. ಕೆ. ಪಾಟೀಲ್ ಅವರು ಯೋಜನೆಯ ಜಾರಿಗಾಗಿ ಕೆಲವು ಸರ್ಕಾರಿ ಶಾಲೆಗಳನ್ನು ಮುಚ್ಚಬೇಕಾಗುತ್ತದೆ ಎಂದಿದ್ದಾರೆ. ಇದರಿಂದ ಬಡವರು, ರೈತರು, ಕೂಲಿ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ದೂರ ಉಳಿಯಲಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಇನ್ನೋರ್ವ AIDSO ರಾಜ್ಯ ಸಮಿತಿ ಸದಸ್ಯ ನಾಗರಾಜ್ ಮಾತನಾಡಿ, ಸಮುದಾಯದ ನಡುವೆ ಇರುವ ಊರಿನ ಶಾಲೆಗಳನ್ನು ಮುಚ್ಚಿ, ಮಕ್ಕಳನ್ನು ದೂರದ ಶಾಲೆಗೆ ಹೋಗಲು ಉಚಿತ ಬಸ್ ಸೌಲಭ್ಯ ಕಲ್ಪಿಸುವುದಾಗಿ ಹೇಳುತ್ತಿರುವ ಸರಕಾರವು, ಸಾರಿಗೆ ವ್ಯವಸ್ಥೆಯ ಹೊರೆಯನ್ನು ಎಸ್ ಡಿ ಎಂ ಸಿ ತಲೆಯ ಮೇಲೆ ಹೊರಿಸುತ್ತಿದೆ. ಮ್ಯಾಗ್ನೆಟ್ ಶಾಲೆಯ ನಿರ್ವಹಣೆಯನ್ನು ಹೊರಗುತ್ತಿಗೆ ಕೊಡಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಇದು ಕ್ರಮೇಣವಾಗಿ ಸರ್ಕಾರಿ ಶಾಲೆಗಳನ್ನು ಖಾಸಗೀಕರಣಗೊಳಿಸಿ ಬಡ ಮಕ್ಕಳನ್ನು ಶಾಶ್ವತವಾಗಿ ಶಿಕ್ಷಣದಿಂದ ದೂರ ತಳ್ಳುವ ಹುನ್ನಾರವಾಗಿದೆ ಎಂದು ಆರೋಪಿಸಿದರು.
ಹೋರಾಟ ಸಮಿತಿಯ ಅಧ್ಯಕ್ಷ ನಿಂಗಪ್ಪ ಮಾತನಾಡಿ, ಬಡವರ ಮಕ್ಕಳು ಓದುವ ಗ್ರಾಮೀಣ ಭಾಗದ ಶಾಲೆಗಳಿಗೆ ಸೌಲಭ್ಯ ಒದಗಿಸಿ ಅಭಿವೃದ್ಧಿ ಪಡಿಸಬೇಕಾದ ಸರ್ಕಾರವೇ ಇಂದು ಶಾಲೆಗಳನ್ನು ಮುಚ್ಚುತ್ತಿದೆ. ಬದಲಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಭಕ್ಕಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಿ ಹಣವಂತರಿಗೆ ಮಾತ್ರ ಶಿಕ್ಷಣ ಎಂಬ ಷಡ್ಯಂತ್ರವನ್ನು ರಚಿಸಿದೆ.
ಪಸಪೂಲ್ ತಾಂಡಾದ ನಿವಾಸಿಗಳೆಲ್ಲಾ ಒಂದಾಗಿ ಹೋರಾಡುತ್ತೇವೆ. ಸರಕಾರ ಜನರ ಹೋರಾಟವನ್ನು ಎದುರಿಸಲು ಸಿದ್ದವಾಗಲಿ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ AIDSO ಯಾದಗಿರಿ ಜಿಲ್ಲಾ ಸಂಚಾಲಕರಾದ ಶಿಲ್ಪಾ ಬಿ ಕೆ, ತಾಂಡಾ ನಿವಾಸಿಗಳಾದ ಅನೀಲ್, ದೇವ್ಯಾ, ದಶರಥ, ರೇಣುಕಮ್ಮ ಸೇರಿದಂತೆ 80 ಕ್ಕೂ ಹೆಚ್ಚು ಜನ ಇದ್ದರು.
