ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಆಶೀರ್ವಚನ | ವಿಜಯ ಹಿರೇಮಠ ಪುತ್ರನ ನಾಮಕರಣ, ಧರ್ಮ ಸಭೆ |ಶಾಸಕ ಶರಣಗೌಡ ಕಂದಕೂರ ಭಾಗಿ
ಗುರುಮಠಕಲ್: ಯೌವನ, ಸಂಪತ್ತು, ಆಯುಷ್ಯ ಶಾಶ್ವತವಲ್ಲ, ಧರ್ಮ ದೇವರು ಮನಸ್ಸನ್ನು ಅರಳಿಸಲು ಬೇಕು. ಕಣ್ಣು ಒಳ್ಳೆಯದನ್ನು ಕಾಣಲಿ. ಕಿವಿ ಒಳ್ಳೆಯದನ್ನು ಕೇಳಲಿ. ನಾಲಿಗೆಯಿಂದ ಒಳ್ಳೆಯದನ್ನು ನುಡಿಯುವಂತಾದರೆ ಜೀವನ ಪಾವನ, ಸತ್ಕಾರ್ಯಗಳ ಮೂಲಕ ಮಾನವ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಶುಕ್ರವಾರ ನಗರದ ವಿ.ಎನ್.ಆರ್. ಕಲ್ಯಾಣ ಮಂಟಪದಲ್ಲಿ ಮಣ್ಣಿನಿಂದ ಮುಕ್ತಿಗೆ-ಆಧ್ಯಾತ್ಮಿಕ ಚಿಂತನ ಮಂಥನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಬದುಕು ಭಗವಂತ ಕೊಟ್ಟ ಅಮೂಲ್ಯ ಕೊಡುಗೆ. ಆದರ್ಶ ಮೌಲ್ಯಗಳ ಪರಿಪಾಲನೆಯಿಂದ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು. ಮನಕ್ಕೆ ಶಾಂತಿ ಆತ್ಮಕ್ಕೆ ಆನಂದ ಕೊಡುವುದೇ ಧರ್ಮ ಎಂದು ನುಡಿದರು.
ಸಮಾಜದ ಕಷ್ಟ ಸುಖಗಳನ್ನು ಚಿಂತಿಸಿ ಅವುಗಳಿಗೆ ಪರಿಹಾರ ಹುಡುಕಿ ಕಾರ್ಯ ಪ್ರವೃತ್ತರಾಗುವುದೇ ನಿಜವಾದ ಧರ್ಮವಾಗಿದೆ. ಮನುಷ್ಯ ಧರ್ಮಕ್ಕೆ ತಲೆಬಾಗಬೇಕೇ ಹೊರತು ಅವಿವೇಕಿಗಳಿಗಲ್ಲ, ಸಂಬಂಧವೆಂದರೆ ವಯಸ್ಸು ದೂರ ಸಂಪರ್ಕಗಳನ್ನು ಮೀರಿದ ಸ್ಥಿತಿ. ವಿಶ್ವಾಸ ನಿಷ್ಠೆಗಳಿಂದ ಮಾತ್ರ ನಿಜ ಸಂಬಂಧ ಉಳಿಯಲು ಸಾಧ್ಯ. ಬೀಜದಂತೆ ಮನುಷ್ಯನಲ್ಲಿಯೂ ಸಹ ಅದ್ಭುತ ಶಕ್ತಿ ಸಾಮರ್ಥ್ಯವಿದೆ.
ಮನುಷ್ಯನಲ್ಲಿರುವ ಸಾಮರ್ಥ್ಯವನ್ನು ಸದ್ಬಳಕೆ ಮಾಡಿಕೊಂಡು ಬಾಳಿದರೆ ಜೀವನ ಉತ್ತುಂಗಕ್ಕೇರುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮಗ್ರಂಥದಲ್ಲಿ ಬೋಧಿಸಿದ್ದಾರೆ. ಅರಿತು ಆಚರಿಸಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಲು ಕರೆ ನೀಡಿದರು.
ಸಗರ ನಾಗಠಾಣ ಹಿರೇಮಠದ ಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಮಳಖೇಡ ಮೂಲಾಧಾರ ಹಿರೇಮಠದ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ ಸ್ವಾಮಿಗಳು. ಮಳಖೇಡ ಬಂಗಿಮಠದ ಕೊಟ್ಟೂರೇಶ್ವರ ಶಿವಾಚಾರ್ಯ ಸ್ವಾಮಿಗಳು, ಕೆಂಭಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಶಾಸಕ ಶರಣಗೌಡ ಕಂದಕೂರು ಮಾತನಾಡಿ, ಜೀವನಾಧಾರಕ್ಕೆ ನೀರು ಅನ್ನ ಗಾಳಿ ಬೆಳಕು ಮತ್ತು ಒಳ್ಳೆಯ ಮಾತು ಬಹಳ ಮುಖ್ಯ. ಮಾನವೀಯತೆಯೇ ಭಾರತೀಯ ಸಂಸ್ಕೃತಿಯ ತಳಹದಿ ಎಂದರು.
ಬಾಯಾರಿದವನಿಗೆ ನೀರು ಹಸಿದವನಿಗೆ ಅನ್ನ ಕೊಡುವುದೇ ನಿಜವಾದ ಧರ್ಮ. ಪಂಚ ಭೂತಗಳಿಂದ ನಿರ್ಮಾಣಗೊಂಡ ಈ ಜೀವ ಜಗತ್ತು ಕೊನೆಗೆ ಒಂದು ದಿನ ಮಣ್ಣಿನಲ್ಲಿ ಮಣ್ಣಾಗಿ ಹೋಗುತ್ತದೆ. ಅರಿವುಳ್ಳ ಜನ್ಮದಲ್ಲಿ ಹುಟ್ಟಿದ ಮೇಲೆ ಹುಟ್ಟಿದ ಮೇಲೆ ಒಂದಿಷ್ಟಾದರೂ ಶಿವಜ್ಞಾನ ಪಡೆದು ಗುರು ಕಾರುಣ್ಯಕ್ಕೆ ಒಳಗಾದರೆ ಜೀವನ ಸಾರ್ಥಕಗೊಳ್ಳುವುದು ಎಂದರು.
ರೇವಣಸಿದ್ದಯ್ಯ ಡೆಂಗಿಮಠ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಿಸಿದ ವಿಜಯಕುಮಾರ ಹಿರೇಮಠ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು. ಬಾಳೆಹೊನ್ನೂರು ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ಜರುಗಿತು. ವೀರಣ್ಣ ಭಾಗೋಜಿ ಸ್ವಾಗತಿಸಿದರು. ಮಡಿವಾಳಯ್ಯ ಶಾಸ್ತ್ರಿ ಜೇರಟಗಿ ನಿರೂಪಿಸಿದರು.
