ಗಡಿ ಭಾಗದಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮ | ಪ್ರಚಾರ ಕೊರತೆ, ಒಬ್ಬ ಗ್ರಾಮಸ್ಥರು ಭಾಗಿಯಾಗಿಲ್ಲ, ಕಾಟಾಚಾರದ ಕಾರ್ಯಕ್ರಮ ಎನ್ನುವ ಅಸಮಾಧಾನ

ಗುರುಮಠಕಲ್: ನಶಿಸುತ್ತಿರುವ ಜಾನಪದ ಕಲೆ, ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗಡಿ ಭಾಗದಲ್ಲಿ ಜಿಲ್ಲಾ ಮಟ್ಟದ ಸಂಗೀತ ಕಲರವ ಆಯೋಜಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ ಹೇಳಿದರು.

ಗಡಿ ಗ್ರಾಮ ಪುಟಪಾಕ ಪ್ರೌಢ ಶಾಲೆ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಹಾಡಿರೇ ರಾಗಗಳ ತೂಗಿರೆ ದೀಪಗಳ ಧ್ಯೇಯದ ಜಿಲ್ಲಾ ಮಟ್ಟದ ಸಂಗೀತ ಕಲರವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟನೆ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಆಧುನಿಕ ಭರಾಟೆಯಲ್ಲಿ ಸಾಹಿತ್ಯ, ಕಲೆಯನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ  ಕಲೆ, ಕಲಾವಿದರು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಅತಿಥಿಗಳಾಗಿ ಭಾಗವಹಿಸಿ ಮುಖ್ಯ ಶಿಕ್ಷಕಿ ಹೇಮಲತಾ ಶೆಟ್ಟಿ, ಯಾಂತ್ರಿಕ ಜೀವನ ಸಾಗಿಸುವ ದಾರಿಯಲ್ಲಿ ಜಾನಪದ ಸಾಹಿತ್ಯ ಮರೆಯಾಗುತ್ತಿದೆ. ಜನಪದ ಸಾಹಿತ್ಯದ ಮೇಲೆಯೇ ಎಲ್ಲಾ ಸಾಹಿತ್ಯಗಳು ಅಡಗಿದೆ. ನಮ್ಮ ಕೈ ಯಲ್ಲಿರುವ  ಮೊಬೈಲ್ ಎಲ್ಲಾ ಸಾಹಿತ್ಯವನ್ನು ಕೀಳಿಕೊಂಡಿದೆ.  ಸಾಹಿತ್ಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ರಾಮಲಿಂಗಮ್ಮ, ಮೌಲಾಲಿ ನಿಜಾಮುದ್ದೀನ್ ಇದ್ದರು.ವಿಳಂಬ : 11 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ 12:40ಕ್ಕೆ ಆರಂಭವಾಯಿತು. ತಡವಾಗಿದ್ದಕ್ಕೆ ಅಧಿಕಾರಿಗಳು ಕ್ಷಮೆ ಕೇಳಿದ ಪ್ರಸಂಗ ನಡೆಯಿತು.

ಸ್ಥಳದಲ್ಲಿಯೇ ಪ್ರಶಸ್ತಿ: ದೇವಿಂದ್ರಪ್ಪ ಕೊಳಲು ವಾದ, ಮಾಲಾಶ್ರೀ ಸಾಂಪ್ರದಾಯ ಗೀತೆ, ತತ್ವಪದ ಶರಣು ನಾಟೇಕರ್ ಹಾಡಿದರು. ವಿವಿಧ ಕಲಾ ಪ್ರದರ್ಶನ ನೀಡಿದ ತಂಡಗಳಿಗೆ ಸ್ಥಳದಲ್ಲಿಯೇ ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು.

ಗ್ರಾಮಸ್ಥರಿಗೆ ಮಾಹಿತಿಯೇ ಇಲ್ಲ : ರಾಜ್ಯದ ಗಡಿ ಗ್ರಾಮದಲ್ಲಿ ನಡೆದ ಜಿಲ್ಲಾಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜನಗಳೇ ಇರಲಿಲ್ಲ. ಕೇವಲ ಪ್ರೌಢ ಶಾಲೆ ಮಕ್ಕಳು ಹೊರತು ಪಡಿಸಿ ಬೇರಾರು ಇಲ್ಲದಿರುವ ಕುರಿತು ವಿಚಾರಿಸಿದಾಗ ಈ ಬಗ್ಗೆ ಗ್ರಾಮದ ಜನರಿಗೆ ಮಾಹಿತಿಯೇ ಇಲ್ಲ ಎನ್ನುವ ಅಸಮಾಧಾನ ಕೇಳಿ ಬಂತು. ಗ್ರಾಮದ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರೆ ಸಾಂಸ್ಕೃತಿಕ ಕಾರ್ಯಕ್ರಮ ಆಲಿಸುತ್ತಿದ್ದರು ಎನ್ನುವ ಕೊರಗು ವ್ಯಕ್ತವಾಯಿತು.

Spread the love

Leave a Reply

Your email address will not be published. Required fields are marked *

error: Content is protected !!