ಪಟ್ಟಣದ ಪ್ರೌಢ ಶಾಲೆಗೆ ಭೇಟಿ | ವಿದ್ಯಾರ್ಥಿಗಳೊಂದಿಗೆ ಸಂವಾದ | ಪರಿಶ್ರಮದಿಂದ ಟಾಪ್ ಫಲಿತಾಂಶ ತರಲು ಕರೆ

ಗುರುಮಠಕಲ್ : ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧಗೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಶಾಸಕ ಶರಣಗೌಡ ಕಂದಕೂರ್ ಅವರು ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆಯುತ್ತಿರುವ ರಾತ್ರಿ ವಿಶೇಷ ತರಗತಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಅಧ್ಯಯನದ ಪ್ರಗತಿಯನ್ನು ವಿಚಾರಿಸಿದ ಅವರು, ಆತ್ಮವಿಶ್ವಾಸ ಹಾಗೂ ನಿರಂತರ ಪರಿಶ್ರಮದಿಂದ ಪರೀಕ್ಷೆಯನ್ನು ಎದುರಿಸಿ ಉತ್ತಮ ಫಲಿತಾಂಶ ಸಾಧಿಸಬೇಕು ಎಂದು ಕರೆ ನೀಡಿದರು.

ಶ್ರಮಪಟ್ಟು ಓದಿದರೆ ಯಾವುದೇ ಗುರಿ ಸಾಧಿಸುವುದು ಅಸಾಧ್ಯವಲ್ಲ. ನಿಮ್ಮ ಯಶಸ್ಸೇ ಕುಟುಂಬದ ಹೆಮ್ಮೆ ಮಾತ್ರವಲ್ಲ, ಸಮಾಜದ ಗೌರವವನ್ನೂ ಹೆಚ್ಚಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಎಸ್. ಎಸ್. ಎಲ್. ಸಿ ನೋಡಲ್ ಅಧಿಕಾರಿ ರವೀಂದ್ರ ಚೌಹಣ ಮಾತನಾಡಿ, ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಉತ್ತಮಗೊಳಿಸುವ ಉದ್ದೇಶದಿಂದ ಹಲವಾರು ಶಾಲೆಗಳಲ್ಲಿ ರಾತ್ರಿ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಸಾಧನೆ ಮಾಡಬೇಕು. ಶಿಕ್ಷಕರ ಸಮರ್ಪಣೆ ಹಾಗೂ ಪೋಷಕರ ಸಹಕಾರದಿಂದ ಉತ್ತಮ ಫಲಿತಾಂಶ ಸಾಧ್ಯವಾಗುತ್ತದೆ ಎಂದು ಹೇಳಿದರು.

ಶಾಲೆಯಲ್ಲಿ ಜಾರಿಯಲ್ಲಿರುವ ಈ ರಾತ್ರಿ ಶಾಲೆ ಯೋಜನೆ ವಿದ್ಯಾರ್ಥಿಗಳಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿದ್ದು, ಪರೀಕ್ಷೆಗೆ ತಯಾರಾಗುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಶಿಕ್ಷಕರ ಸಮರ್ಪಣೆ ಹಾಗೂ ವಿದ್ಯಾರ್ಥಿಗಳ ಪರಿಶ್ರಮದಿಂದ ಈ ಬಾರಿ ಶಾಲೆ ಉತ್ತಮ ಫಲಿತಾಂಶ ಸಾಧಿಸುವ ನಿರೀಕ್ಷೆ ವ್ಯಕ್ತವಾಗಿದೆ.

ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಉತ್ತಮಗೊಳಿಸುವ ಉದ್ದೇಶದಿಂದ ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ರಾತ್ರಿ ವೇಳೆ ವಿಶೇಷ ತರಗತಿಗಳನ್ನು ಆಯೋಜಿಸಲಾಗಿದೆ. ಶಿಕ್ಷಕರು ತಮ್ಮ ವೈಯಕ್ತಿಕ ಸಮಯವನ್ನೇ ಮೀಸಲಿಟ್ಟು ವಿದ್ಯಾರ್ಥಿಗಳಿಗೆ ಪಾಠಗಳನ್ನು ಪುನರವಲೋಕನ ಮಾಡಿಸಿ, ಕಠಿಣ ವಿಷಯಗಳನ್ನು ಸರಳವಾಗಿ ವಿವರಿಸುತ್ತಿದ್ದಾರೆ. ಜೊತೆಗೆ ಮಾದರಿ ಪ್ರಶ್ನೆಪತ್ರಿಕೆಗಳ ಮೂಲಕ ಅಭ್ಯಾಸ ಮಾಡಿಸಿ ಪರೀಕ್ಷೆಗೆ ಸಮರ್ಪಕವಾಗಿ ಸಿದ್ಧಗೊಳಿಸುವ ಕಾರ್ಯವನ್ನು ಕೈಗೊಂಡಿದ್ದಾರೆ.

ಶಾಸಕ ಶರಣಗೌಡ ಕಂದಕೂರ್ ಅವರು ಶಿಕ್ಷಕರ ಸಮರ್ಪಣಾ ಮನೋಭಾವವನ್ನು ಮೆಚ್ಚಿ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕಾಗಿ ಕೈಗೊಂಡಿರುವ ಈ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ಹೇಳಿದರು. ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಕೃಷ್ಣರೆಡ್ಡಿ ಮುಖ್ಯಗುರುಗಳು, ಸಿ. ಆರ್. ಸಿ.ಬಾಲಪ್ಪ ಸಿರಿಗೆಮ್, ಲಕ್ಷ್ಮಿಕಾಂತ ರೆಡ್ಡಿ, ವೆಂಕಟರಾಮುಲು, ರಾಜಕುಮಾರ, ಶರಣಗೌಡ, ಕೆ. ರವಿಕಾಂತ್, ನರಸಪ್ಪ, ಶರಣಪ್ಪ ಪಾಟೀಲ್, ಎಸ್. ಎಮ್. ಭೂತಾಳ, ಶರಣಪ್ಪ ಪಾಂಚಳ್, ನರಸಪ್ಪ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!