ಗುರುಮಠಕಲ್ ತಾಲೂಕು ಅಭಿವೃದ್ಧಿ ಕಾರ್ಯಗಳ ಪರಿಶೀಲನೆ |ವಾರ್ಷಿಕ ಮಾನವ ದಿನ ಸೃಷ್ಟಿಯಲ್ಲಿ ಚಿನ್ನಾಕಾರ ಸಾಧನೆ | ಅನಪೂರ, ಅಜಲಾಪೂರ ಕಡೆ | ಆಡಳಿತಾಧಿಕಾರಿ ಸಿ.ಬಿ.ದೇವರಮನಿ ನೇತೃತ್ವದಲ್ಲಿ ಸಭೆ | ಕರೆ ವಸೂಲಿ ಸಾಧನೆ ಮಾಡಿದವರಿಗೆ ಸನ್ಮಾನ
ಗುರುಮಠಕಲ್: ಗುರುಮಠಕಲ್ ತಾಪಂ ಅಭಿವೃದ್ದಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆ, ತಾಲೂಕು ಮಟ್ಟದ ಮನರೇಗಾ, ಎಸ್ ಬಿ ಎಂ, ಎನ್ ಆರ್ ಎಲ್ ಎಮ್ ತೆರಿಗೆ ಸಂಗ್ರಹದ ಪ್ರಗತಿ ಪರಿಶೀಲನಾ ಸಭೆಯು ಆಡಳಿತಾಧಿಕಾರಿ ಸಿ ಬಿ ದೇವರಮನಿ ನೇತೃತ್ವದಲ್ಲಿ ಜರುಗಿತು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಗ್ರಾಮ ಪಂಚಾಯಿತಿಗಳ ಮನರೇಗಾ, ಸ್ವಚ್ಛ ಭಾರತ್ ಮಿಷನ್, ಎನ್ ಆರ್ ಎಲ್ ಎಮ್ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತೆರಿಗೆ ಸಂಗ್ರಹದ ಪ್ರಗತಿ ಕುರಿತು ವಿವರ ಪಡೆದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಲಭ್ಯವಿರುವ ಮನರೇಗಾದ ಕೂಲಿ ಆಧಾರಿತ ಕಾಮಗಾರಿಗಳಲ್ಲಿ ಜನರಿಗೆ ಅಗತ್ಯ ಕೂಲಿ ಕೆಲಸವನ್ನು ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಿಯಮಾನುಸಾರ ಒದಗಿಸಲು ತಿಳಿಸಿದರು.
ಚಿನ್ನಕಾರ ಗ್ರಾಮ ಪಂಚಾಯಿತಿಯು ವಾರ್ಷಿಕ ಮಾನವ ದಿನಗಳ ಗುರಿಯ ಪೈಕಿ 141.27 ಪ್ರತಿಶತ ಜನರಿಗೆ ಕೂಲಿ ಒದಗಿಸುವುದರ ಮೂಲಕ ತಾಲೂಕಿನಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಿದ ಗ್ರಾಮ ಪಂಚಾಯಿತಿ ಆದರೆ, ಅನಪೂರ 22.68 ಪ್ರತಿಶತ ಅಜಲಾಪುರ 23.10 ಪ್ರತಿಶತ ಕಾಳಬೆಳಗುಂದಿ 30.51 ಪ್ರತಿಶತ ಮಾನವ ದಿನಗಳನ್ನು ಸೃಜಿಸುವ ಮೂಲಕ ತಾಲೂಕಿನಲ್ಲಿ ಕಡಿಮೆ ಪ್ರಗತಿ ಸಾಧಿಸಿವೆ.
ಪಿಡಿಓ ಅವರು ಜನರಿಗೆ ಕೂಲಿ ಕೆಲಸ ನೀಡುವುದು. ಸ್ವಚ್ಛ ಭಾರತ ಮಿಷನ್ ನಲ್ಲಿ ವಾರ್ಷಿಕ ಗುರಿ ಐಎಚ್ ಎಚ್ ಎಲ್ ನಲ್ಲಿ ನಲ್ಲಿ 628 ಗುರಿಯ ಪೈಕಿ 636 ಶೌಚಾಲಯಗಳನ್ನು ನಿರ್ಮಿಸಿ ವಾರ್ಷಿಕ ಗುರಿ ಸಾಧಿಸಲಾಗಿದೆ. ಇದರಲ್ಲಿ ಚಂಡ್ರಿಕಿ ವಾರ್ಷಿಕ ಗುರಿ 44ಕ್ಕೆ 64 ಶೌಚಾಲಯಗಳನ್ನು ನಿರ್ಮಿಸಿದೆ. ಚಪೆಟ್ಲಾದಲ್ಲಿ 6, ಕಾಳಬೆಳಗುಂ ದಿ 5, ಗಾಜರಕೋಟ 4, ಮಾಧವಾರ 3, ಯಲ್ಹೇರಿ 2 ವೈಯಕ್ತಿಕ ಶೌಚಾಲಯ ನಿರ್ಮಾಣ ಬಾಕಿ ಉಳಿದಿದ್ದು ಮಾರ್ಚ್ ಅಂತ್ಯದ ವೇಳೆಗೆ ಕಡ್ಡಾಯವಾಗಿ ಗುರಿ ಸಾಧಿಸಲು ಸೂಚಿಸಿದರು.
ಮಹಿಳಾ ಸ್ವಸಹಾಯ ಸಂಘಗಳಿಗೆ ಬಲವರ್ಧನೆ ಮಾಡುವ ಮೂಲಕ ಮಹಿಳಾ ಸಬಲೀಕರಣವನ್ನು ಸಾಧಿಸುವ ಅಗತ್ಯವಿದೆ ಎಂದು ಹೇಳಿದರು. ಗ್ರಾಮ ಪಂಚಾಯಿತಿಗಳಲ್ಲಿ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಂಪನ್ಮೂಲಗಳು ಅಗತ್ಯವಾಗಿದ್ದು ಇದಕ್ಕೆ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವಾರ್ಷಿಕ ತೆರಿಗೆಯನ್ನು ಎಲ್ಲಾ ಜನರಿಂದ ಸಂಗ್ರಹಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ತೆರಿಗೆ ಅಭಿಯಾನದಲ್ಲಿ ಉತ್ತಮ ಸಾಧನೆಗೈದ ಚಪೆಟ್ಲಾ, ಅಜಲಪುರ, ಕಂದಕೂರ, ಕಾಕಲವಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕರ ವಸೂಲಿಗಾರರು, ಡಿ ಇ ಓ, ಎನ್ ಆರ್ ಎಲ್ ಎಮ್ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು.
2025-26 ನೇ ಸಾಲಿನ ವಾರ್ಷಿಕ ತೆರಿಗೆ ಬೇಡಿಕೆಯ 100 ಪ್ರತಿಶತ ತೆರಿಗೆ ಸಂಗ್ರಹಿಸಿದ ಅನಪುರ, ಚಂಡ್ರಿಕಿ, ಯಂಪಾಡ, ಕೊಂಕಲ್, ಮೀನಾಸಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಕರ ವಸೂಲಿಗಾರರಿಗೆ ಸನ್ಮಾನಿಸಲಾಯಿತು.
ಗುರುಮಠಕಲ್ ತಾಲೂಕಿನಲ್ಲಿ 18 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರವಸೂಲಾತಿ ಬಾಕಿ 8,19,28,522 ರೂಪಾಯಿ ಇದ್ದು, ಹಲವು ವರ್ಷಗಳಿಂದ ಸದರಿ ತೆರಿಗೆಯನ್ನು ತೆರಿಗೆದಾರರು ಪಾವತಿಸದೆ ಉಳಿಸಿಕೊಂಡಿರುತ್ತಾರೆ. ತೆರಿಗೆದಾರರ ಮನೆ ಮನೆಗೆ ತೆರಳಿ ಅವರ ಮನ ಒಲಿಸುವುದರ ಮೂಲಕ ತೆರಿಗೆ ಸಂಗ್ರಹಿಸಲು ತಿಳಿಸಿದರು. ಯಾವುದೇ ರೀತಿಯ ನಿಯಮಬಾಹಿರವಾಗಿ ವರ್ತಿಸುವುದು ಕಂಡು ಬಂದರೆ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಕಾರ್ಯನಿರ್ವಾಹಕ ಅಧಿಕಾರಿ ಅಂಬರೀಶ್ ಪಾಟೀಲ್ ಮಾತನಾಡಿ, ಮನರೇಗಾ, ಸ್ವಚ್ಛ ಭಾರತ ಮಿಷನ್, ಎನ್ ಆರ್ ಎಲ್ ಎಂ ತೆರಿಗೆ ಸಂಗ್ರಹ ಕಾರ್ಯವನ್ನು ಉತ್ತಮ ರೀತಿಯಲ್ಲಿ ನಿರ್ಮಿಸುವುದರ ಮೂಲಕ ತಾಲೂಕಿನ ಗ್ರಾಮ ಪಂಚಾಯಿತಿಯ ಪ್ರತಿಯೊಬ್ಬ ವ್ಯಕ್ತಿಗೂ ಯೋಜನೆಯ ಲಾಭ ಸಿಗುವಂತೆ ಮಾಡಿ, ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ನಾವೆಲ್ಲರೂ ಒಟ್ಟಾಗಿ ಸೇರಿ ಸಾಧಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಸಹಾಯಕ ನಿರ್ದೇಶಕ ರಾಮಚಂದ್ರ ಬಸೂದೆ, ತಾಲೂಕು ಯೋಜನಾಧಿಕಾರಿ ಶ್ರೀಮತಿ ಭಾರತೀ ಸಜ್ಜನ್ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ತಾಲೂಕು ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.
