ಕನ್ನಡ ಕವನ ಸಂಕಲನ ಒಬ್ಬಂಟೀಕರಣ ಕೃತಿ ಲೋಕಾರ್ಪಣೆ
ಹೈದರಾಬಾದ್: ಮನುಷ್ಯ ತುಂಬಾ ಸ್ವಯಂ ಕೇಂದ್ರಿತನಾಗುತ್ತಿದ್ದಾನೆ. ಈ ರೀತಿಯ ವರ್ತನೆಯಿಂದ ವ್ಯಕ್ತಿ ಸಮಾಜದಿಂದ ದೂರವಾಗುತ್ತಿದ್ದಾನೆ ಎಂದು ಸ್ಥಾನಿಕ ಆಂಗ್ಲ ಮತ್ತು ವಿದೇಶಿ ಭಾಷಾ ವಿಶ್ವವಿದ್ಯಾಲಯದ ಅನುವಾದ ವಿಭಾಗದ ಮುಖ್ಯಸ್ಥ ಪ್ರೊ. ವಿ.ಬಿ. ತಾರಕೇಶ್ವರ್ ಕಳವಳ ವ್ಯಕ್ತಪಡಿಸಿದರು.
ಹೈದರಾಬಾದ್ ನ ರವೀಂದ್ರ ಭಾರತಿ ಸಭಾ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತೆಲಂಗಾಣ ಗಡಿನಾಡ ಘಟಕ ಏರ್ಪಡಿಸಿದ್ದ ಮೂಲ ಲೇಖಕ ಡಾ. ಮಾಮಿಡಿ ಹರಿಕೃಷ್ಣ ಅವರ ರಚಿತ ಚಂದ ಕಚರ್ಲ ರಮೇಶಬಾಬು ಅವರ ಅನುವಾದ ಕೃತಿ “ಒಬ್ಬಂಟೀಕರಣ”ದ ಲೋಕಾರ್ಪಣೆಯ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡ ಮತ್ತು ತೆಲುಗಿನ ಬಾಂಧವ್ಯ ತುಂಬಾ ಹಳೆಯದು, ಅದನ್ನು ರಮೇಶಬಾಬು ಅವರು ಮುಂದುವರೆಸಿದ್ದಾರೆ. ಅನು ವಾದ ಪ್ರಕ್ರಿಯೆಯನ್ನು ಪ್ರಾರಂಭಿಸಿದ ಭೀಮಕವಿಯನ್ನು ಅವರು ನೆನೆದರು. ಈ ಎರಡು ಭಾಷೆಗಳ ನಡುವೆಯೇ ಜಾಸ್ತಿ ನೇರ ಅನುವಾದಗಳು ಆಗುತ್ತಿವೆ. ಇದಕ್ಕೆ ಇತರ ರಾಜ್ಯಗಳಿಗಿಂತ ಜಾಸ್ತಿ ಗಡಿಪ್ರದೇಶವನ್ನು ಹಂಚಿಕೊಂಡಿರುವಂತ ಭೌಗೋಳಿಕ ವಿಷಯಗಳು ಸಹ ನೆರವಾಗಿವೆ ಎಂದು ಅಭಿಪ್ರಾಯಪಟ್ಟರು.
ಎರಡೂ ಭಾಷೆಗಳ ಸೇವೆಯಲ್ಲಿ ತುಂಬಾ ಬರಹಗಾರರು ತೊಡಗಿಸಿಕೊಂಡಿದ್ದಾರೆ. ಎರಡೂ ಭಾಷೆಗಳಲ್ಲಿ ಸಿಗುವ ಒಂದೇ ತರದ ಪದಗಳ ಬಳಕೆಯಲ್ಲಿ “ಫಾಲ್ಸ್ ಫ್ರೆಂಡ್ಸ್” ಎಂಬ ಪ್ರಯೋಗದ ಬಗ್ಗೆ ಸಭಿಕರಿಗೆ ತಿಳಿಸಿದರು. ನಂತರ ಕೃತಿಯಲ್ಲಿಯ ಕವನಗಳ ಬಗ್ಗೆ ಮಾತನಾಡುತ್ತ, ತಾವು ಈ ರೀತಿ ಹೊರನಾಡಿನಲ್ಲಿ ಕನ್ನಡ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರ ನಡುವೆ ಈ ಕೃತಿ ಲೋಕಾರ್ಪಣೆಗೊಳ್ಳುತ್ತಿರುವ ಸಂದರ್ಭದಲ್ಲಿ ಸಾಕ್ಷಿಯಾಗಿರಲು ಹೆಮ್ಮೆ ಪಡುತ್ತೇನೆಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕೃತಿಯನ್ನು ಬಿಡುಗಡೆ ಮಾಡಿದ ತಾರಕೇಶ್ವರ್ ಅವರ ಮಾತುಗಳನ್ನು ಶ್ಲಾಘಿಸಿದರು.
ಪ್ರಸ್ತುತ ಮನುಷ್ಯರು ಒಬ್ಬಂಟಿಗರಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿ, ಮೊಬೈಲುಗಳು ಸಾಮಾಜಿಕ ಸಂಬಂಧಗಳಿಗೆ ಎಷ್ಟು ಧಕ್ಕೆ ತರುತ್ತಿವೆ ಎನ್ನುವುದರ ಬಗ್ಗೆ ಬೆಳಕು ಚೆಲ್ಲಿದರು. ಕೃತಿಯ ಶೀರ್ಷಿಕೆ “ಒಬ್ಬಂಟೀಕರಣ” ಈಗೀಗ ಆಗುತ್ತಿರುವ ಮನುಷ್ಯನ ಏಕಾಂಗಿತನದ ಪ್ರತೀಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಕವಿತೆಗಳ ಮುದ್ರಣ ತುಂಬಾ ಕಷ್ಟವಾಗುತ್ತಿದೆ. ಕವಿತೆ ಅಥವಾ ಕತೆಗಳನ್ನು ಬರಹಗಾರರೇ ಅಚ್ಚು ಹಾಕಿಸಿಕೊಂಡು ಹಂಚುವ ಪರಿಪಾಠ ಆಗಿಬಿಟ್ಟಿದೆ ಎಂದರು. ಪುಸ್ತಕದ ಖರೀದಿಯಲ್ಲಿ ಸರಕಾರದಿಂದ ನೆರವು ಕಮ್ಮಿಯಾಗಿದೆ ಎಂದರು.
ಭಾಷೆ ಮತ್ತು ಸಂಸ್ಕೃತಿಯನ್ನು ವಿಸ್ತಾರವಾಗಿಸುವುದರಲ್ಲಿ ಅನುವಾದ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ, ಅನುವಾದ ವೆಂದರೆ ಒಂದು ಆತ್ಮವನ್ನು ಮತ್ತೊಂದು ಆತ್ಮಕ್ಕೆ ಜೋಡಿಸುವುದು ಎನ್ನುವ ಹೆಚ್. ಎಸ್. ವೆಂಕಟೇಶ ಮೂರ್ತಿಯವರ ಮತ್ತು ಕವಿತೆಯ ಅನುವಾದದ ಬಗೆಗಿನ ಯು.ಆರ್. ಅನಂತ ಮೂರ್ತಿಯವರ ಹೇಳಿಕೆಗಳನ್ನು ಸ್ಮರಿಸಿದರು.
ಅನುವಾದಗಳಲ್ಲಿ ಹಲವಾರು ಅಚಾತುರ್ಯಗಳು ಆಗುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ, ಪ್ರಶಸ್ತಿಗಳು ಬಂದವರ ಬಗ್ಗೆ ಸಹ ಸಂಶಯಗಳು ವ್ಯಕ್ತವಾಗುತ್ತಿವೆ ಎಂದು ವ್ಯಥೆ ಪಟ್ಟರು. ತಮ್ಮ ಒಂದು ಕವನವನ್ನು ವಾಚಿಸಿದರು. ನಂತರ ಎಲ್ಲರೂ ಕಸಾಪದ ಸದಸ್ಯತ್ವ ಪಡೆಯಬೇಕು ಎಂದು ತಿಳಿಸಿದರು.
“ಒಬ್ಬಂಟೀಕರಣ” ಪುಸ್ತಕಕ್ಕೆ ಮುನ್ನುಡಿ ಬರೆದ ವಿಜಯ ದಾರಿಹೋಕರು ಆಂಗ್ಲದಲ್ಲಿ ಮಾತನಾಡುತ್ತ, ಐನ್ ಸ್ಟೈನ್ ನ ಸಾಪೇಕ್ಷ ಸಿದ್ಧಾಂತವು ಕವಿಗೂ ಮತ್ತು ಓದುಗನಿಗೂ ಸಹ ಅನ್ವಯವಾಗುತ್ತದೆ ಎಂದರು. ಪ್ರತಿ ಕವಿತೆಯನ್ನು ಓದುವಾಗ ಓದುಗ ತನ್ನದೇ ಜಗತ್ತನ್ನು ಸೃಷ್ಟಿಸಿಕೊಳ್ಳುತ್ತಾನೆ ಎಂದರು.
ಒಬ್ಬಂಟೀಕರಣದ ಫಲಿತಾಂಶ ಸಮೂಹೀಕರಣ ಆಗಿ, ಸಮಾಜಕ್ಕೆ ಉಪಕಾರವಾಗುತ್ತದೆ. ಈ ಕವಿತೆಗಳಲ್ಲಿ ಒಂದು ಚಿರಂತನತ್ವವಿದೆ ಎಂದರು. ಹಾಗೇ ಈ ಸಂಕಲನದ ಬಗ್ಗೆ ಕರ್ನಾಟಕದಲ್ಲಿ ಒಂದೆರಡು ಕೇಂದ್ರಗಳಲ್ಲಿ ಗೋಷ್ಠಿಗಳನ್ನು ನಡೆಸಬೇಕೆನ್ನುವ ಸಲಹೆ ನೀಡಿದರು. ಓದುಗರು ಕವಿತೆಗಳನ್ನು ಓದಲು ಕರೆ ನೀಡಿದರು.
ತೆಲಂಗಾಣ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ಹರೀಶ್ ಪಸ್ಪುಲ ಅವರು ಕೃತಿಕರ್ತರಾದ ರಮೇಶಬಾಬು ಅವರ ಪರಿಚಯ ಮಾಡಿದರು.
ರಮೇಶಬಾಬು ಅವರು, ಕೃತಿಯನ್ನು ಲೋಕಾರ್ಪಣೆ ಮಾಡಲು ನೆರವಾದ ಮಾಮಿಡಿ ಹರಿಕೃಷ್ಣ, ನಿರ್ದೇಶಕರು, ಭಾಷಾ ಮತ್ತು ಸಂಸ್ಕೃತಿ ಇಲಾಖೆ, ಕ.ಸಾ.ಪ ತೆಲಂಗಾಣ, ಘಟಕದ ಅಧ್ಯಕ್ಷ ಡಾ. ಗುಡುಗುಂಟಿ ವಿಠ್ಠಲ್ ಜೋಶಿ ಮತ್ತು ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಕೃತಿಯನ್ನು ಬರೆಯುವಾಗಿನ ತಮ್ಮ ಅನುಭವವನ್ನು ಹಂಚಿಕೊಂಡರು. ಕೇಂದ್ರ ಸಾಹಿತ್ಯ ಪರಿಷತ್ತು ಇಲ್ಲಿಯ ಕನ್ನಡಿಗರ ಬರಹಗಳನ್ನು ಮುದ್ರಣಕ್ಕೆ ತರುವಲ್ಲಿ ಸಹಾಯ ಮಾಡಲು ಅವಕಾಶ ಮಾಡಿಕೊಡಲು ಡಾ.ಪದ್ಮಿನಿ ನಾಗರಾಜು ಅವರಿಗೆ ಮನವಿ ಮಾಡಿದರು.
ತೆಲಂಗಾಣ ಕನ್ನಡ ಸಾಧಕರಾದ ಪ್ರವೀಣಾ ದೇಶಪಾಂಡೆ, ಡಿ.ಬಿ.ರಾಘವೇಂದ್ರರಾವ್ ಅವರನ್ನು ಕ.ಸಾ.ಪ ವತಿಯಿಂದ ಸತ್ಕಾರ ಮಾಡಲಾಯಿತು. ಇವರಿಬ್ಬರೂ ತಮ್ಮ ತಮ್ಮ ನಿವಾಸ ಪ್ರದೇಶಗಳಲ್ಲಿ “ಕನ್ನಡ ಕಲಿ” ಯೋಜನೆಯಲ್ಲಿ ಮಕ್ಕಳಿಗೆ ಮತ್ತು ವಯೋಜನರಿಗೆ ಕನ್ನಡ ಕಲಿಸುವುದರಲ್ಲಿ, ಕಸಾಪದಿಂದ ಪರೀಕ್ಷೆಗಳನ್ನು ಬರೆಸುವಲ್ಲಿ ನೆರವಾಗಿದ್ದಾರೆ ಎಂದು ವಿವರಿಸಿ,
ಕನ್ನಡ ಸಾಹಿತ್ಯ ಪರಿಷತ್ತು ತೆಲಂಗಾಣ ಘಟಕವು ಆಯೋಜಿಸಿದ ಒಬ್ಬಂಟೀಕರಣ ಪುಸ್ತಕ ಬಿಡುಗಡೆಗೆ ಆಗಮಿಸಿದ ಕಸಾಪ ಕಾರ್ಯದರ್ಶಿ ಪದ್ಮೀನಿ ನಾಗರಾಜ ಅವರಿಗೆ ತೆಲಂಗಾಣ ಘಟಕವು ಗೌರವಿಸಿ ಸತ್ಕಾರ ಮಾಡಲಾಯಿತು. ಪ್ರೋ.ವಿ.ಬಿ ತಾರಕೇಶ್ವ, ವಿಠಲ ಜೋಶಿ, ಧರ್ಮೇಂದ್ರ ಪೂಜಾರಿ ಬಗ್ದೂರಿ, ಸುಮತಿ ನಿರಂಜನ, ಡಾ. ವಿ.ಎಂ ಪ್ರಕಾಶ. ಎಂ.ಕೆ ಬಲಾಳ, ರಮೇಶಬಾಬು ಇದ್ದರು.
ಘಟಕದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಪೂಜಾರಿ ಸಾಧಕರ ಪರಿಚಯ ಮಾಡಿದರು.
ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ತೆಲಂಗಾಣ ಗಡಿನಾಡು ಘಟಕದ ಸ್ಥಾಪಕ ಅಧ್ಯಕ್ಷ ಡಾ. ಗುಡುಗುಂಟಿ ವಿಠ್ಠಲ್ ಜೋಶಿ ಮಾತನಾಡಿ, ತಮ್ಮ ಕುಟುಂಬದ ಕನ್ನಡ ಸಾಹಿತ್ಯದ ಜೊತೆಗಿನ ನಂಟನ್ನು, ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ತಮ್ಮ ಸಾಹಿತ್ಯ ಸೇವೆಯ, ಸಂಘಟನೆಯ ಬಗ್ಗೆ ಪ್ರಸ್ತಾಪಿಸಿದರು.
ಈ ಸಂದರ್ಭದಲ್ಲಿ ಕನ್ನಡದ ಸೇವೆ ಮಾಡಿದ್ದ ದಿ. ಕೆರೋಡಿ ಗುಂಡೂರಾಯರ ಮತ್ತು ಪ್ರಸ್ತುತ ಧರ್ಮೇಂದ್ರ ಪೂಜಾರಿಯವರ ಸೇವೆಗಳನ್ನು ಸ್ಮರಿಸಿದರು. ಕರ್ನಾಟಕ ಸಾಹಿತ್ಯ ಮಂದಿರದಿಂದ ಹೊರಬರುವ “ಪರಿಚಯ” ಪತ್ರಿಕೆ ಮತ್ತು ಅಲ್ಲಿ ನಡೆಯುತ್ತಿದ್ದ “ಸಾಹಿತ್ಯ ಸಂಜೆ” ಕಾರ್ಯಕ್ರಮಗಳ ಬಗ್ಗೆ ಸಭೆಗೆ ತಿಳಿಸಿದರು. ಕು. ಬೊಜ್ಜಿ ಆಶ್ರಿತ ಮತ್ತು ಸಂಗಡಿಗರು ನಾಡಗೀತೆ ಹಾಡಿದರು.
ಕೃತಿಯ ಮೂಲ ಲೇಖಕ ಡಾ. ಮಾಮಿಡಿ ಹರಿಕೃಷ್ಣ ಅವರು ತೆಲಂಗಾಣ ಸರಕಾರದ ಭಾಷಾ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದಾರೆ. ಅನುವಾದಿತ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ಮೂಲ ಕವಿತಾ ಸಂಕಲನವನ್ನು ತಾವು ಪದವಿಪೂರ್ವ ಕಾಲೇಜಿನಲ್ಲಿ ಓದುವ ಸಮಯ 1993-94 ರಲ್ಲಿ ರಚಿಸಿದ್ದು ಎಂದು ತಿಳಿಸಿ, ಒಂದು ಕವಿತೆಯನ್ನು ತೆಲುಗಿನಲ್ಲಿ ಓದಿ ಎಲ್ಲರಿಗೂ ಶುಭಾಶಯ ತಿಳಿಸಿ ಕರ್ತವ್ಯದ ಕರೆಯ ಮೇರೆಗೆ ಹೊರಟರು.