ಕಲಬುರಗಿ: ಶ್ರೀ ಶರಣ ಬಸವೇಶ್ವರ ಸಂಸ್ಥಾನ ಮಠದ ಮಹದಾಸೋಹ ಪೀಠಾಧಿಪತಿಗಳಾದ ಪೂಜ್ಯ ಡಾ. ಶರಣಬಸಪ್ಪ ಅಪ್ಪ ರವರು ಲಿಂಗೈಕ್ಯರಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕಾಗಿ ಹಾಗೂ ಸುಗಮ ಸಂಚಾರಕ್ಕಾಗಿ ಸಂಚಾರಿ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿದೆ.
ಪಾರ್ಕಿಂಗ್ ಸ್ಥಳಗಳು: ಎನ್ ವಿ ಕಾಲೇಜು ಮೈದಾನ, ಶ್ರೀ ಶರಣಬಸವೇಶ್ವರ ಕಾಲೇಜು ಆವರಣ, ವೀರಶೈವ ಕಲ್ಯಾಣ ಮಂಟಪ, ರೋಟರಿ ಕ್ಲಬ್ ಹಾಗೂ ಕೋಟೆ ಎದುರುಗಡೆ.
ಇವುಗಳನ್ನು ಪಾಲಿಸಲು ಪೊಲೀಸರ ಸೂಚನೆ: ಆನಂದ ಓ.ಪಿ ಯಿಂದ ಶ್ರೀ ಶರಣಬಸವೇಶ್ವರ ದೇವಸ್ಥಾನದ ವರೆಗೆ ಎಲ್ಲಾ ರೀತಿಯ ವಾಹನಗಳ ಓಡಾಟ ನಿರ್ಬಂಧಿಸಲಾಗಿರುತ್ತದೆ.
ಶ್ರೀ ಶರಣಬಸವೇಶ್ವರ ದೇವಸ್ಥಾನದ ಹಿಂದಿನ ರಸ್ತೆ ಗಂಟೋಜಿ ಕ್ರಾಸ್ ದಿಂದ ಧನಗರ ಗಲ್ಲಿವರೆಗೆ ಎಲ್ಲಾ ರೀತಿಯ ವಾಹನಗಳ ಓಡಾಟ ನಿಷೇಧಿಸಲಾಗಿರುತ್ತದೆ, ಸಿಟಿ ಬಸ್ ಸ್ಟಾಂಡ್ ದಿಂದ ಶ್ರೀ ಶರಣಬಸವೇಶ್ವರ ದೇವಸ್ಥಾನದವರೆಗೆ ಯಾವುದೇ ರೀತಿಯ ವಾಹನಗಳ ಓಡಾಟ ನಿಷೇಧಿಸಲಾಗಿರುತ್ತದೆ ಮತ್ತು ಸಿಟಿ ಬಸ್ ಸ್ಟಾಂಡ್ ಕಡೆಯಿಂದ ಬರುವ ಸಾರ್ವಜನಿಕರು ಕೋಟೆ ಎದುರುಗಡೆ ಹಾಗೂ ಸಂಗೋಳ್ಳಿ ರಾಯಣ್ಣ ಮೂರ್ತಿ ಎದುರುಗಡೆ ಸ್ಥಳದಲ್ಲಿ ಪಾರ್ಕಿಂಗ್ ಮಾಡಿ ಅಲ್ಲಿಂದ ನಡೆದುಕೊಂಡು ಬರಬೇಕಿದೆ.
ಸರ್ದಾರ್ ವಲ್ಲಭ ಬಾಯಿ ಪಟೇಲ್ ವೃತ್ತದಿಂದ ಆನಂದ ಓ.ಪಿ ಯ ಮಾರ್ಗವಾಗಿ ಬರುವಂತ ವಾಹನಗಳು ಎನ್.ವಿ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ಮಾಡಿ ಆನಂದ್ ಓ.ಪಿ ಇಂದ ಸಾರ್ವಜನಿಕರು ನಡೆದುಕೊಂಡು ಬರುವುದು. ಜೇವರ್ಗಿ ಹಾಗೂ ಅಫ್ಜಲ್ಪುರ್ ಕಡೆಯಿಂದ ಬರುವ ವಾಹನಗಳು ಕೇಂದ್ರ ಬಸ್ ನಿಲ್ದಾಣದ ಎದುರುಗಡೆಯಿಂದ ಬಸ್ ಡಿಪೋ ಮಾರ್ಗವಾಗಿ ಶ್ರೀ ಶರಣಬಸವೇಶ್ವರ ಕಾಲೇಜು ಮೈದಾನದ ಆವರಣದಲ್ಲಿ ಪಾರ್ಕಿಂಗ್ ಮಾಡುವುದು. ಅಲ್ಲಿಂದ ಸಾರ್ವಜನಿಕರು ನಡೆದುಕೊಂಡು ಬರುವುದು.
ಆಳಂದ ರಿಂಗ್ ರೋಡ ರಸ್ತೆಯಿಂದ ಬರುವಂತಹ ವಾಹನಗಳು ಶಹಬಜಾರ್ ನಾಕಾ ಮೂಲಕವಾಗಿ ಅಗ್ನಿಶಾಮಕ ದಳದ ಹತ್ತಿರದಿಂದ ಕೋಟೆ ಎದುರುಗಡೆಯ ಆವರಣದಲ್ಲಿ ಪಾರ್ಕಿಂಗ್ ಮಾಡಿ ಅಲ್ಲಿಂದ ನಡೆದುಕೊಂಡು ಬರುವುದು. ಜಗತ್ ವೃತ್ತದಿಂದ ಬರುವ ವಾಹನಗಳು ಪಬ್ಲಿಕ್ ಗಾರ್ಡನ್ ವರೆಗೆ ಬಂದು ವೀರಶೈವ ಕಲ್ಯಾಣ ಮಂಟಪ ಹಾಗೂ ರೋಟರಿ ಕ್ಲಬ್ ಹತ್ತಿರ ಪಾರ್ಕಿಂಗ್ ಮಾಡಿ ಅಲ್ಲಿಂದ ನಡೆದುಕೊಂಡು ಬರುವುದು.
ಅಂತಿಮ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸದರಿ ಮಾರ್ಗಗಳಲ್ಲಿ ತಮ್ಮ ವಾಹನಗಳನ್ನು ಚಲಾಯಿಸದೆ ಪರ್ಯಾಯ ರಸ್ತೆಗಳಲ್ಲಿ ಚಲಿಸಲು ನಗರ ಪೊಲೀಸರು ಸೂಚಿಸಿದ್ದಾರೆ.
