ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಯಲಕಪಳ್ಳಿ ಗ್ರಾಮದ ಅಮರೇಶ್ವರ ಮಹಾಮಠದ ಒಡೆಯರಾದ ಶ್ರೀ ವೇದಮೂರ್ತಿ ಶಂಭುಲಿಂಗಯ್ಯ ಮಹಾಸ್ವಾಮೀಜಿ (78) ಸೋಮವಾರ ನಸುಕಿನ ಜಾವ ಲಿಂಗೈಕ್ಯರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆದು ಅವರು ಶ್ರೀಮಠದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಇಂದು ನಸುಕಿನ ಜಾವ ಅವರು ಲಿಂಗೈಕ್ಯರಾಗಿದ್ದಾರೆ.
ಶಿಕ್ಷಣ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆಗೈದು ನಿವೃತ್ತ ಜೀವನ ನಡೆಸುತ್ತಿದ್ದ ಶ್ರೀಗಳು ಶರಣರ ತತ್ವ ಆದರ್ಶಗಳನ್ನು ಜೀವನದಲ್ಲಿ ಪಾಲಿಸಿಕೊಂಡು ಬಂದಿದ್ದರು. ಶ್ರೀಗಳ ಸಾನಿಧ್ಯದಲ್ಲಿ ಪ್ರತಿವರ್ಷ ಶ್ರೀ ಶಾಂತಲಿಂಗೇಶ್ವರ ಪುಣ್ಯಸ್ಮರಣೋತ್ಸವ ನಿಮಿತ್ತ ಸಾಧಕರಿಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿತ್ತು. ಶ್ರೀಗಳ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಕೂಡ ನಡೆಸಿಕೊಂಡು ಬಂದಿದ್ದಾರೆ.
ಮೃತರಿಗೆ ಪತ್ನಿ, 4 ಜನ ಮಕ್ಕಳು, ಓರ್ವ ಪುತ್ರಿ ಇದ್ದಾರೆ. ಅಪಾರ ಶಿಷ್ಯ ಬಳಗ ಹಾಗೂ ಭಕ್ತರ ಬಳಗವನ್ನು ಬಿಟ್ಟು ಅಗಲಿದ್ದಾರೆ.
ಸೋಮವಾರ ಸಂಜೆ 4 ಗಂಟೆಗೆ ಅಮರೇಶ್ವರ ಮಠದ ಆವರಣದಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.