ಡಿ.7, 8 ರಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕನ್ನಡ ಭಾಷಾ-ಸ್ಪರ್ದಾತ್ಮಕ ಪರೀಕ್ಷೆ | ಜಿಲ್ಲೆಯ 41 ಪರೀಕ್ಷಾ ಕೇಂದ್ರ
ಯಾದಗಿರಿ: ಕರ್ನಾಟಕ ಲೋಕಸೇವಾ ಆಯೋಗದಿಂದ ಇದೇ ಡಿಸೆಂಬರ್ 7 ಹಾಗೂ 8 ರಂದು ನಡೆಸಲ್ಪಡುವ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಗ್ರೂಪ್ ಸಿ ಉಳಿದ ಮೂಲ ವೃಂದದ- 150 ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಕನ್ನಡ ಭಾಷಾ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯು ಶಿಸ್ತುಬದ್ದ, ಪಾರದರ್ಶಕವ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಡಾ.ಸುಶೀಲಾ. ಬಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು “ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಕನ್ನಡ ಭಾಷಾ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ಸಿದ್ಧತಾ” ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಇದೇ ದಿನಾಂಕ 7-12-24 ರಂದು ನಡೆಯಲಿರುವ ಪರೀಕ್ಷೆಯಲ್ಲಿ ಯಾದಗಿರಿ ಮತ್ತು ಶಹಾಪುರ ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 9199 ನೋಂದಣಿಯಾದ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಡಿಸೆಂಬರ್ 8 ರಂದು ಯಾದಗಿರಿ, ಶಹಾಪುರ, ಗುರಮಠಕಲ್ ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 13128 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಈ ಎರಡು ದಿನ ಜಿಲ್ಲೆಯ 41 ಪರೀಕ್ಷಾ ಕೇಂದ್ರಗಳಲ್ಲಿ ಅವಶ್ಯಕ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ಮಾಡಿಕೊಳ್ಳುವಂತೆ ಅವರು ಸೂಚಿಸಿದರು.
ಪರೀಕ್ಷಾ ಕೇಂದ್ರಗಳಿಗೆ ಹಾಜರಾಗುವ ಅಭ್ಯರ್ಥಿಗಳನ್ನು ಕಟ್ಟುನಿಟ್ಟಾಗಿ ತಪಾಸಣೆಗೆ ಒಳಪಡಿಸಬೇಕು. ವಿಶೇಷವಾಗಿ ಅಭ್ಯರ್ಥಿಗಳ ಕಿವಿಯಲ್ಲಿ ಯಾವುದೇ ಎಲೆಕ್ಟ್ರಾನಿಕ್ ಡಿವೈಸ್ ಮತ್ತು ಮೈಕ್ರೋಫೋನ್ ಬಳಸದಿರುವ ಬಗ್ಗೆ ತಪಾಸಣೆ ನಡೆಸಬೇಕು.
ಅಭ್ಯರ್ಥಿಗಳನ್ನು ಪ್ರಿಸ್ಕಿಂಗ್ ಮಾಡುವ ಸಂದರ್ಭದಲ್ಲಿ ಮೈಕ್ರೋ ಚಿಪ್ ಅಥವಾ ಇನ್ನಿತರ ಸೂಕ್ಷ್ಮ ಉಪಕರಣಗಳನ್ನು ಅಳವಡಿಸಿ ಕೊಂಡಿಲ್ಲದ ಬಗ್ಗೆ ತಪಾಸಣೆ ನಡೆಸಿ ಪರೀಕ್ಷಾ ಕೇಂದ್ರಗಳಲ್ಲಿ ಬಿಡುವಂತೆ ಪೋಲಿಸ್ ಸಿಬ್ಬಂದಿಗಳಿಗೆ ಸೂಚಿಸಲು ಅವರು ತಿಳಿಸಿ ಮೊಬೈಲ್ ಸಹ ಬಳಸುವುದನ್ನು ನಿಷೇಧಿಸಲಾಗಿದೆ.
ಅದರಂತೆ ಪರೀಕ್ಷಾ ಉಪಕೇಂದ್ರಕ್ಕೆ ಇಬ್ಬರು ಪುರುಷ ಹಾಗೂ ಒಬ್ಬರು ಮಹಿಳಾ ಪೋಲಿಸ್ ಸಿಬ್ಬಂದಿಗಳನ್ನು ನಿಯೋಜಿ ಸಬೇಕು. ಅಭ್ಯರ್ಥಿಗಳ ತಪಾಸಣೆ ಗೆ ಥರ್ಮಲ್ ಸ್ಕ್ಯಾನರ್ ದೊಂದಿಗೆ ಆರೋಗ್ಯ ಸಿಬ್ಬಂದಿಗಳು ಇರುವಂತೆ ನೋಡಿಕೊಳ್ಳ ಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿಟಿವಿ ಸುಸ್ಥಿತಿ ಇರುವ ಬಗ್ಗೆ, ಸಮರ್ಪಕವಾಗಿ ವಿದ್ಯುತ್ ಪೂರೈಕೆ, ಪ್ರತಿ ಕೊಠಡಿಯಲ್ಲಿ ವಾಲ್ ಕ್ಲಾಕ್ ಇರುವಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಆಯೋಗದ ಮಾರ್ಗಸೂಚಿ ಅನ್ವಯ ಸಕಲ ಸಿದ್ಧತೆ ಗಳನ್ನು ಮಾಡಿಕೊಳ್ಳಬೇಕು. ಐಐಟಿ ಮತ್ತು ನೀಟ್ ಪರೀಕ್ಷೆ ಗಳ ಮಾದರಿಯಲ್ಲಿ ಕಿವಿಯಲ್ಲಿ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಡಿವೈಸ್ ಇರದಂತೆ ತಪಾಸಣೆ ನಡೆಸಬೇಕು.ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆಗಳಿಗಾಗಿ ಆಯೋಗ ನೀಡಿದ ಮಾರ್ಗಸೂಚಿ ಅನುಸರಿ ಸಬೇಕು. ಸೂಕ್ತ ಪೋಲಿಸ್ ಬಂದೋಬಸ್ತ ಮಾಡಬೇಕು.ಪರೀಕ್ಷೆ ಗೌಪ್ಯತೆಯಿಂದಲೂ,ನಿಯಮಬದ್ದವಾಗಿ ನಿರ್ವಹಣೆಯಿಂದ ನಡೆಸಿ ಪರೀಕ್ಷಾ ದಕ್ಷತೆ ಕಾಪಾಡಲು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ, ಪರೀಕ್ಷಾ ಕೇಂದ್ರಗಳ ಸುತ್ತಲೂ ಕಾನೂನಿನ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕೇಂದ್ರಗಳ ಸಮೀಪ ಎಲ್ಲ ಝರಾಕ್ಸ ಅಂಗಡಿ ಬಂದ್ ಮಾಡಲು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ವ್ಯವಸ್ಥಿತವಾಗಿ ಪರೀಕ್ಷೆ ನಡೆಸುವ ಬಗ್ಗೆ ಸಮಗ್ರ ಮಾಹಿತಿ ನೀಡಿ, ಈ ಪರೀಕ್ಷೆ ಗೆ ಪೋಲಿಸ್ ಬಂದೋಬಸ್ತ ಜೊತೆಗೆ ಆಯೋಗ ದಿಂದಲೂ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಪರೀಕ್ಷೆಗೆ ನಿಯೋಜಿಸಿರುವ ಅಧಿಕಾರಿ, ಸಿಬ್ಬಂದಿಗಳು ತಮ್ಮ ಜವಾಬ್ದಾರಿಗಳ ಬಗ್ಗೆ ಆಯೋಗದ ಮಾರ್ಗಸೂಚಿಗಳನ್ನು ತಪ್ಪದೇ ಓದಿಕೊಳ್ಳಲು ಮತ್ತು ತಿಳಿದುಕೊಳ್ಳಲು ಸೂಚಿಸಿದರು.
ಈ ಪರೀಕ್ಷೆಗಾಗಿ 41 ಮೇಲ್ವಚಾರಕರು, 41 ನಿರೀಕ್ಷಣಾಧಿ ಕಾರಿಗಳು, 8 ಮಾರ್ಗಾಧಿಕಾರಿ ಹಾಗೂ 8 ವೀಕ್ಷಕರನ್ನು ನೇಮಿಸಲಾಗಿದೆ.
ಡಿಸೆಂಬರ್ 7 ರಂದು ಮಧ್ಯಾಹ್ನ 2ರಿಂದ 4 ಗಂಟೆಯವರೆಗೆ ಕನ್ನಡ ಭಾಷಾ ಹಾಗೂ ಡಿಸೆಂಬರ್ 8 ರಂದು ಬೆಳಿಗ್ಗೆ 10 ರಿಂದ 11-30 ವರೆಗೆ (ಸಾಮಾನ್ಯ ಜ್ಞಾನ ) ವಿಷಯ ಮತ್ತು ಮಧ್ಯಾಹ್ನ 2 ರಿಂದ 4 ರವರೆಗೆ ಸಾಮಾನ್ಯ ಜ್ಞಾನ ವಿಷಯದ ಪರೀಕ್ಷೆ ನಡೆಯಲಿದೆ. ಸಭೆಯಲ್ಲಿ ಜಿಲ್ಲಾ ಖಜಾನೆ ಅಧಿಕಾರಿ ಮಾಳಿಂಗರಾಯ, ಸಿಪಿಐ ಶ್ರೀದೇವಿ, ನೋಡಲ್ ಅಧಿಕಾರಿ ಬಸವನಗೌಡ ಆಲದಾಳ ಉಪಸ್ಥಿತರಿದ್ದರು.