ಬೀದರನಲ್ಲಿ ಸಚಿವ ಈಶ್ವರ ಬಿ. ಖಂಡ್ರೆ ಅವರಿಂದ ಧ್ವಜಾರೋಹಣ..
ನಾರಾಯಣಪೂರ ಡ್ಯಾಂನಿಂದ ಬಸವಲ್ಯಾಣದ 500 ಹಳ್ಳಿಗಳಿಗೆ ಪೈಪಲೈನ ಮೂಲಕ ಶಾಸ್ವತ ಕುಡಿಯುವ ನೀರು ಪೂರೈಕೆಗೆ 1600 ಕೋಟಿ ರೂ. ಯೋಜನೆಗೆ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ..
ಬೀದರ: ಕನ್ನಡ ನಮ್ಮೆಲ್ಲರನ್ನು ಒಗ್ಗೂಡಿಸುತ್ತದೆ. ಎಲ್ಲರೂ ಕನ್ನಡ ಮಾತನಾಡಲಿ, ಕನ್ನಡಿಗರೆಲ್ಲರೂ ಒಗ್ಗಟ್ಟಾಗಲಿ, ಕನ್ನಡವೇ ನಮ್ಮ ಆಸ್ಮಿತೆ, ಕನ್ನಡದ ಬಗ್ಗೆ ಸ್ವಾಭಿಮಾನವಿರಲಿ, ಕನ್ನಡ ನಾಡು, ನುಡಿ, ನೆಲ, ಜಲ ಉಳಿಸಿ ಬೆಳೆಸಲು ನಾವೆಲ್ಲರೂ ಬದ್ಧರೋಗೋಣ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಹೇಳಿದರು.
ಬೀದರ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ನ.1ರಂದು 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕನ್ನಡನಾಡಿನ ಇತಿಹಾಸ, ಪರಂಪರೆ, ಸಾಂಸ್ಕೃತಿಕ, ಆಧ್ಯಾತ್ಮಿಕ ಹಿರಿಮೆಯು ತುಂಬಾ ವೈಶಿಷ್ಟತೆಗಳಿಂದ ಕೂಡಿದೆ. ರಾಜ-ಮಹಾರಾಜರು ಸಹ ತಮ್ಮ ಆಡಳಿತದ ಕಾಲಾವಧಿಯಲ್ಲಿ ಕನ್ನಡ ನಾಡು-ನುಡಿ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರು ಹೇಳುವಂತೆ ಕರ್ನಾಟಕವು ಸರ್ವಜನಾಂಗದ ಶಾಂತಿಯ ತೋಟವಾಗಿದೆ.
ಇದು ಬೀದರ್ ಜಿಲ್ಲೆಗೆ ಅತ್ಯಂತ ಹೆಚ್ಚು ಒಪ್ಪುತ್ತದೆ. ಬೀದರ್ ಜಿಲ್ಲೆಯಲ್ಲಿ ಬಸವಾದಿ ಶರಣರ ಪಾದಸ್ಪರ್ಶದಿಂದ ಪುನೀತವಾದ ಪುಣ್ಯಭೂಮಿ ಬಸವಕಲ್ಯಾಣವೂ ಇದೆ, ನಾನಕ್ಝೀರಾ ಗುರುದ್ವಾರವೂ ಇದೆ, ಮಹಮದ್ಗವಾನರ ಮದರಸಾ ಇದೆ, ಸಂತ ಪಾಲರಇಗರ್ಜಿಯೂ ಇದೆ, ಝರಣಿ ನರಸಿಂಹ ಸ್ವಾಮಿ, ಪಾಪನಾಶಿ ದೇವಾಲಯವೂ ಇದೆ, ಇಲ್ಲಿ ಹಿಂದು, ಮುಸ್ಲಿಂ, ಸಿಖ್, ಇಸಾಯಿ ಎಲ್ಲರೂ ಅಣ್ಣ ತಮ್ಮಂದಿರಂತೆ ಬಾಳುತ್ತಿದ್ದಾರೆ.
ನಿತ್ಯ ವ್ಯವಹಾರದಲ್ಲಿ, ಹಿಂದಿ ಭಾಷೆಯ ಬಳಕೆ ಇದ್ದರೂ ನಮ್ಮೆಲ್ಲರ ಮನಸ್ಸು ಕನ್ನಡವೇ ಆಗಿದೆ. ಹೀಗಾಗಿಯೇ ಅನ್ಯ ಭಾಷೆಯ ಪ್ರಭಾವದ ನಡುವೆಯೂ ಗಡಿ ಜಿಲ್ಲೆಯಾದ ಬೀದರ್ ನಲ್ಲಿ ಕನ್ನಡ ಉಳಿದಿದೆ, ಬೆಳೆದಿದೆ, ಬೆಳಗುತ್ತಿದೆ ಎಂದು ಸಂತೋಷದಿAದ ಹೇಳಲು ಇಚ್ಛಿಸುತ್ತೇನೆ ಎಂದು ಹೇಳಿದರು.
ಕರ್ನಾಟಕದಲ್ಲಿ ವೈವಿಧ್ಯಮಯವಾದ ಸಂಸ್ಕೃತಿ, ಜೀವನ ಪದ್ಧತಿ ಇದೆ. ಭಾವೈಕ್ಯತೆಯ ನಾಡಾಗಿರುವ ಕರ್ನಾಟಕದಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕುತ್ತಿದ್ದೇವೆ. ಸರ್ವಧರ್ಮಗಳ ಸಮನ್ವಯತೆ, ಸೌಹಾರ್ದತೆ ಇಲ್ಲಿ ಮನೆ ಮಾಡಿದೆ. ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಒಗ್ಗೂಡಿಸಲು ಏಕೀಕರಣ ಚಳವಳಿಯಲ್ಲಿ ರಾಜ್ಯದ ಹಲವಾರು ಶ್ರಮಿಸಿದ್ದಾರೆ ಎಂದರು.
ಕನ್ನಡ ನಾಡಿನ ಏಳ್ಗೆಯಲ್ಲಿ ಸಾಹಿತಿಗಳು, ವಚನಕಾರರು ಹಾಗೂ ದಾಸ ವರೇಣ್ಯರ ಪಾತ್ರವು ಅತೀ ಮಹತ್ವದ್ದಾಗಿದೆ. ಈ ನಾಡಿನ ಸಾಹಿತ್ಯ ಶ್ರೀಮಂತಿಕೆಯನ್ನು ಹೆಚ್ಚಿಸುವಲ್ಲಿ, ಸಮಾಜ ಸುಧಾರಣೆಗೆ ಅನೇಕರು ಅಪಾರ ಕೊಡುಗೆ ನೀಡಿದ್ದಾರೆ. ವಿಶ್ವಗುರು ಅಣ್ಣ ಬಸವಣ್ಣನವರು ಜಗತ್ತಿನ ಜ್ಯೋತಿಯಾಗಿ 12ನೇ ಶತಮಾನದಲ್ಲಿಯೇ ತಮ್ಮ ವಚನಗಳ ಮೂಲಕ ಸಾಮಾಜಿಕ ಪರಿವರ್ತನೆ ನಾಂದಿ ಹಾಡಿದ್ದರು ಎಂದರು.
ನಮ್ಮ ಬೀದರ್ ಜಿಲ್ಲೆಗೆ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಇದೆ. ನಾವು ಈ ಕಳಂಕವನ್ನು ತೊಡೆದು ಹಾಕಿ ಕರುನಾಡ ಕಿರೀಟ ಬೀದರ್ ಮುಂದುವರಿದ ಜಿಲ್ಲೆ. ನಾವು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಸಾಧಿಸಿ ತೋರಿಸಬೇಕು. ಅದಕ್ಕೆ ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಶ್ರಮಿಸಬೇಕು ಎಂದರು.
ಕನ್ನಡಿಗರು ಆಕ್ರಮಣಕಾರಿಗಳಲ್ಲ, ಹೀಗಾಗಿ ಅನೇಕ ವಿಷಯಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಕಾವೇರಿ ನದಿ ನೀರು ಹಂಚಿಕೆ, ಕಳಸಾ ಬಂಡೂರಿ, ಗೋಧಾವರಿ ಅಲ್ಲದೇ ಗಡಿ ವಿವಾದವನ್ನು ಕೆಲವರು ಸ್ವಾಥಕ್ಕಾಗಿ ಜೀವಂತ ಇಟ್ಟಿದ್ದಾರೆ ಎಂದರಲ್ಲದೇ ನಾಡು, ನುಡಿ, ನೆಲ, ಜಲ ಭಾಷೆ ಬೆಳೆಸಲು ನಾವೆಲ್ಲರೂ ಬದ್ಧರಾಗಬೇಕೆಂದರು.
ಶೀಘ್ರವೇ ಬೀದರದಿಂದ ವಿಮಾನಯಾನ ಆರಂಭಗೊಳ್ಳಲಿದೆ. 18ಕೋಟಿ ವೆಚ್ಚದಲ್ಲಿ ಡಿಸೆಂಬರ್.15 ರೊಳಗಾಗಿ ಸೇವೆ ಆರಂಭವಾಗುವುದೆಂದರು. ನಾರಾಯಣಪೂರ ಡ್ಯಾಂನಿಂದ ಬಸವಲ್ಯಾಣದ 500 ಹಳ್ಳಿಗಳಿಗೆ ಪೈಪಲೈನ ಮೂಲಕ ಶಾಸ್ವತ ಕುಡಿಯುವ ನೀರು ಪೂರೈಕೆಗೆ 1600 ಕೋಟಿ ರೂ. ಯೋಜನೆಗೆ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದ್ದು, ವಿಸ್ತೃತ ಯೋಜನಾ ವರದಿ ಸಿದ್ಧಗೊಳ್ಳುತ್ತಿದ್ದು ಶೀಘ್ರವೇ ಕಾರ್ಯಗತಗೊಳಿಸ ಲಾಗುವು.
ಬೀದರ ಜಿಲ್ಲಾಡಳಿತ ಸಂಕೀರ್ಣ ಕಟ್ಟಡ ನಿರ್ಮಾಣಕ್ಕೆ 59 ಕೋಟಿ ರೂ.ಗಳಿಗೆ ಅನುಮೋದನೆ ದೊರೆತಿದ್ದು 15 ದಿನದೊಳಗೆ ಟೆಂಡರ ಕರೆಯುವುದು. ಕಲ್ಯಾಣ ಕರ್ನಾಟಕಕ್ಕೆ ಪ್ರಸಕ್ತ ವರ್ಷ 5 ಸಾವಿರ ಕೋಟಿ ರೂ. ಘೋಷಣೆಯಾಗಿದ್ದು ಈ ಪೈಕಿ ಬೀದರ ಜಿಲ್ಲೆಗೆ 550 ಕೋಟಿ ರೂ. ಬರಲಿದೆ ಎಂದರು.
ಬೀದರನ ನಗರದಲ್ಲಿ ಒಳಚರಂಡಿ ನಿರ್ಮಾಣ, ರಾಜ ಕಾಲುವೆ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಾಗುವುದು. ಉದ್ಯಾವವನ ನಿರ್ಮಾಣಕ್ಕೂ ಆದ್ಯತೆ ನೀಡಲಾಗಿದೆ ಎಂದರು. ಡಿಸೆಂಬರ್.31 ರೊಳಗಾಗಿ ಜಿಲ್ಲೆಯ ಎಲ್ಲಾ ರಸ್ತೆಗಳನ್ನು ರಿಪೇರಿ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ನಮ್ಮ ಜಿಲ್ಲೆಯ ಹಸಿರು ಹೊದಿಕೆಯ ಪ್ರಮಾಣ ಹೆಚ್ಚಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 15 ಲಕ್ಷ ಸಸಿ ನೆಡಲಾಗಿದೆ. ಹಾಗೂ 1 ಕೋಟಿ ಸಸಿ ನೆಡುವ ಗುರಿ ಹೊಂದಾಗಿದೆ.
ಟ್ರೀ ಪಾರ್ಕ ಹಾಗೂ ಪಕ್ಷಿದಾಮ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಆಗಿದೆ. ಮನೆಯ ಮುಂದೆ ಒಂದು ಸಸಿ ನೆಟ್ಟು ಅದರ ಪಾಲನೆ ಪೋಷಣೆಯ ಹೊಣೆ ಹೊರಬೇಕು. ನಭೂತೋ, ನಭವಿಷ್ಯತಿ ಎಂಬಂತೆ ಬೀದರ್ ಜಿಲ್ಲೆ ಅಷ್ಟೇ ಅಲ್ಲ ಕಲ್ಯಾಣ ಕರ್ನಾಟಕದಲ್ಲಿಯೇ ಒಂದು ಹಸಿರು ಕ್ರಾಂತಿಯನ್ನು ಮಾಡಲು ಮುಂದಾಗಿದ್ದೇನೆಂದರು.
ಪ್ರಸಕ್ತ ಸಾಲಿಗೆ 585ವ ಮಿ.ಮಿ ಉತ್ತಮ ಮಳೆಯಾಗಿರುತ್ತದೆ. ಹವಾಮಾನ ವೈಪರಿತ್ಯದಿಂದ ಹೆಚ್ಚಿನ ಮಳೆಯಾಗಿ ಬೆಳೆ ನಷ್ಟ ಆಗಿದ್ದು, ಪರಿಹಾರ ನೀಡಲು ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಬೀಜ ಗೊಬ್ಬರದ ಯಾವುದೇ ಕೊರತೆ ಇರುವುದಿಲ್ಲ. ಬೆಳೆ ಸಮೀಕ್ಷೆ ಕಾರ್ಯವು ಜಿಲ್ಲೆಯಲ್ಲಿ ಚಾಲನೆಯಲಿದ್ದು, ಸಮೀಕ್ಷೆ ಮಾಡಿ ಪರಿಹಾರ ನೀಡಲು ಕ್ರಮ ವಹಿಸಲಾಗುವುದು ಎಂದರು.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಒಟ್ಟು ರೂ.287.00 ಲಕ್ಷ ಅನುದಾನನಿಗದಿ ಪಡಿಸಿದ್ದು, ಅದರಡಿಯಲ್ಲಿ ಪ್ರಮುಖವಾಗಿ ಹೂ, ಹಣ್ಣು ಮತ್ತು ತರಕಾರಿ ತೋಟಗಾರಿಕೆ ಪ್ರದೇಶ ವಿಸ್ತರಣೆ 84 ಹೆಕ್ಟೇರ್, ನೀರು ಸಂಗ್ರಹಣ ಘಟಕಗಳಡಿ 11 ಜನ ರೈತರಿಗೆ ಸಹಾಯಧನ ನೀಡಲಾಗಿದೆ ಎಂದರು.
ಶಾಲಾ ಶಿಕ್ಷಣದಡಿಯಲ್ಲಿ ವಿವೇಕ ಶಾಲಾ ಯೋಜನೆಯಡಿಯಲ್ಲಿ 165 ಹೊಸ ಕೋಠಡಿಗಳ ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗಿದೆ. 2023-24ನೇ ಸಾಲಿನ ಮೆಗಾಮ್ಯಾಕ್ರೋ ಯೋಜನೆ ಅಡಿಯಲ್ಲಿ 10 ಕೋಟಿ ರೂ. ಮೊತ್ತದಲ್ಲಿ ಬೀದರ ನಗರದಲ್ಲಿ ಮಹಿಳಾ ಪದವಿ ಕಾಲೇಜಿನ ಕಟ್ಟಡದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿ ಕೆಲಸ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. 2024-25ನೇ ಸಾಲಿನಲ್ಲಿ ಮೈಕ್ರೊ ಯೋಜನೆ ಅಡಿಯಲ್ಲಿ 311.18 ಕೋಟಿ ರೂ. ಹಾಗೂ ಮ್ಯಾಕ್ರೊ ಯೋಜನೆ ಅಡಿಯಲ್ಲಿ 167.55 ಕೋಟಿ ರೂ. ಅನುದಾನಬೀದರ ಜಿಲ್ಲೆಯ ಅಭಿವೃದ್ಧಿಗಾಗಿ ನಿಗದಿಪಡಿಸಲಾಗಿದೆ ಎಂದರು.
ಆರೋಗ್ಯವೇ ಭಾಗ್ಯ, ಜಿಲ್ಲೆಯ ಜನರು ಆರೋಗ್ಯವಂತರಾಗಿ ಬದುಕಬೇಕೆಂಬ ಆಶಯವಾಗಿದೆ. ಜಿಲ್ಲೆಯಲ್ಲಿ ಶಿಶು ಮರಣ, ತಾಯಿ ಮರಣ ಕಡಿಮೆಯಾಗಿದೆ. ಸಾಂಕ್ರಾಮಿಕ ರೋಗ ತಡೆ ಕ್ರಮ ವಹಿಸಲಾಗಿದೆ. ಮತ್ತು ವಿವಿಧ ಲಸಿಕೆಗಳನ್ನು ಹಾಕಲಾಗಿದೆ. ಗ್ರಾಮ, ಹೋಬಳಿ, ಜಿಲ್ಲಾ ಕೇಂದ್ರಗಳಲ್ಲಿ ಉತ್ತಮ ಆರೋಗ್ಯ ಸೇವೆ ನೀಡಲು ಕ್ರಮಕೈಗೊಳ್ಳಾಗಿದೆ.
ರೋಗಿಗಳಿಗೆ ತೀವ್ರ ನಿಗಾ ಘಟಕಗಳನ್ನು ಹೆಚ್ಚಿಸಲಾಗುವುದು. ಹೃದಯ ಸಂಬಂಧಿತ ಸಮಸ್ಯೆಗಳ ನಿವಾರಣೆಗೆ ಅಗತ್ಯ ವಹಿಸಲಾಗುವುದು. ಕ್ಯಾಥ್ ಲ್ಯಾಬ್ 2 ತಿಂಗಳಲ್ಲಿ ಆರಂಭಗೊಳಿಸಲಾಗುವುದು. ಬ್ರಿಮ್ಸ್ ವಿದ್ಯಾರ್ಥಿಗಳ ಪ್ರವೇಶಾತಿಗೆ ತಕ್ಕಂತೆ ಬೋಧಕರ ನೇಮಕಾತಿ, ಹೊರಗುತ್ತಿಗೆ ವೈದ್ಯರ ಹಾಗೂ ಸಿಬ್ಬಂದಿಗಳ ವೇತನ ಪಾವತಿ, ಕಟ್ಟಡ ದುರಸ್ತಿ, ಸುರಕ್ಷತೆ ಹಾಗೂ ಭದ್ರತೆ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.
ಸರ್ಕಾರ ನೀಡಿರುವ 5 ಗ್ಯಾರಂಟಿಗಳು ಯಶಸ್ವಿಯಾಗಿ ನಡೆಯುತ್ತಿವೆ. 2023-24ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ದಿ ಯೋಜನೆಯಡಿಯಲ್ಲಿ ಭಾಲ್ಕಿ ಮತ್ತು ಬೀದರ ಮತ್ತು ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಮಂಜೂರಾಗಿದ್ದು, ಕಾಮಗಾರಿಗಳು ಪ್ರಗತಿಯ ಲ್ಲಿರುತ್ತವೆ.
ಶಾಲಾ ಶಿಕ್ಷಣ ಇಲಾಖೆಯಡಿ 2024-25ನೇ ಸಾಲಿಗೆ ಬೀದರ ಜಿಲ್ಲೆಯ 98 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು (ಎಲ್‌ಕೆಜಿ ಮತ್ತು ಯುಕೆಜಿ) ಸರಕಾರದಿಂದ ಮಂಜೂರಾತಿ ನೀಡಿ ಶಾಲೆಗಳು ಪ್ರಾರಂಭಿ ಸಲಾಗಿದೆ. ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಒಟ್ಟಾರೆ 1008 ಇಸಿಸಿಇ ವರ್ಗಗಳನ್ನು ಪ್ರಾರಂಭಿಸಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಇದರಿಂದ ಈ ಜಿಲ್ಲೆಯ 98 ಶಾಲೆಗಳಲ್ಲಿನ 2302 ಮಕ್ಕಳಿಗೆ ಅನುಕೂಲವಾಗಿರುತ್ತದೆ ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಯಾದ ಜಲ ಜೀವನ ಮಿಷನ್ ಯೋಜನೆಯು ರಾಜ್ಯದಲ್ಲಿ ಮನೆ ಮನೆಗೆ ಗಂಗೆ ಎಂಬ ಹೆಸರಿನಲ್ಲಿ ಅನುಷ್ಠಾನಗೊಳಿಸಲಾಗಿದೆ. ಬೀದರ ಜಿಲ್ಲೆಯಲ್ಲಿ ಒಟ್ಟು 883 ಜನ ವಸತಿಗಳಿಗೆ ಅಂದಾಜು ರೂ. 892.22 ಕೋಟಿಗಳ ಯೋಜನೆಯಲ್ಲಿ ಓಟ್ಟು 3.14 ಲಕ್ಷ ಕಾರ್ಯಾತ್ಮಕ ನಳ ನೀರು ಸಂಪರ್ಕ ಕಲ್ಪಿಸುವ ಕಾಮಗಾರಿ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಸನ್ಮಾನಿಸಲಾಯಿತು. ವಿವಿಧ ಇಲಾಖೆಗಳಿಂದ ಸ್ತಬ್ಧ ಚಿತ್ರ ಪ್ರದರ್ಶಿಸಲಾಯಿತು. ಹಾಗೂ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್, ಲೋಕಸಭಾ ಸದಸ್ಯರಾದ ಸಾಗರ ಈಶ್ವರ ಖಂಡ್ರೆ, ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯರಾದ ಭೀಮರಾವ ಪಾಟೀಲ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ, ನಗರಸಭೆ ಅಧ್ಯಕ್ಷರಾದ ಮಹ್ಮದ ಗೌಸ, ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಡಾ.ಗಿರೀಶ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿಗಳಾದ ಎಂ.ಎ.ವಾನತಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.