ಡಿಸೆಂಬರ್ 12, ಬಾಬು ಗೇನೂ ಹುತಾತ್ಮ ದಿನ (ಸ್ವದೇಶಿ ದಿನ) ಹಿನ್ನೆಲೆಯಲ್ಲಿ ಯಾದಗಿರಿಧ್ವನಿ.ಕಾಮ್ ಸ್ವದೇಶಿ ಚಿಂತಕ ಶ್ರೀ ಮಹಾದೇವಯ್ಯ ಕರದಳ್ಳಿ ಅವರ ವಿಶೇಷ ಲೇಖನ ಪ್ರಕಟಿಸಿದೆ.

ಬೆಂಗಳೂರು: ಭಾರತದಲ್ಲಿ ಬ್ರಿಟಿಷರ ಆರ್ಥಿಕ ನೀತಿ ವಿರೋಧಿಸಿಲು ತಿಲಕರು ಮತ್ತು ಮಹತ್ಮಾಗಾಂಧಿ ಒಂದು ನಾಣ್ಯದ ಎರಡು ಮುಖಗಳಂತಿರುವ ಸ್ವದೇಶಿ ಸ್ವೀಕಾರ, ವಿದೇಶಿ ಬಹಿಷ್ಕಾರ ವಿಷಯವನ್ನು ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಅಸ್ತ್ರವನ್ನಾಗಿಸಿದರು.

ಸ್ವದೇಶಿ ಎಂಬುದು ಕೇವಲ ವಸ್ತು ಗಳಿಗೆ ಸೀಮಿತವಾಗದೇ ಸ್ವದೇಶಿಭಾವದವರೆಗೆ ವಿಸ್ತರಿಸಬೇಕು. ಸ್ವದೇಶಿ ಸ್ವೀಕಾರ ರಾಷ್ಟ್ರ ಭಕ್ತಿಯ ಪ್ರಕಟೀಕರಣ ವಾಗಿದೆ. ಸ್ವದೇಶಿ ವಸ್ತು ಬಳಕೆ ರಾಷ್ಟ್ರ ಭಕ್ತಿಯ ಅಭಿವ್ಯಕ್ತಿಯ ಸಾಧನವಾಗಿದೆ. ಜನರಲ್ಲಿ ನೈತಿಕತೆ ಮತ್ತು ರಾಷ್ಟ್ರೀಯತೆ ಜಾಗೃತಗೊಳಿಸಲು ಸ್ವಾತಂತ್ರ್ಯ ಹೋರಾಟಕ್ಕೆ ವೇಗ ನೀಡಲು ತಿಲಕ ಮತ್ತು ಗಾಂಧಿಜಿವರು ಸ್ವದೇಶಿ ಆಂದೋ ಲನಕ್ಕೆ ಚಾಲನೆ ನೀಡಿದರು.

ಮಹಾತ್ಮಾಗಾಂಧಿ ಸತ್ಯಾಗ್ರಹ ಅಸ್ತ್ರ ಸಮರ್ಥವಾಗಿ ಬಳಸಿದರು. ಬಡವರಿಂದ ಶ್ರೀಮಂತರಿಗೆ, ನಗರ, ಗ್ರಾಮವಾಸಿ, ಕೃಷಿಕರಿಂದ ಕೂಲಿಕಾರರ ವರೆಗೆ ಸ್ವದೇಶಿ ಆಂದೋಲನವನ್ನು ಮುಟ್ಟಿಸಿ ಜನರಲ್ಲಿ ಜಾಗೃತಿ ಮೂಡಿಸಿದರು. ಮಹಾತ್ಮಾ ಗಾಂಧೀಯವರ ನೇತೃತ್ವದಲ್ಲಿ ದೇಶಭಕ್ತಿ ಭಾವನೆಯನ್ನು ದೇಶದ ಮೂಲೆ ಮೂಲೆಯಲ್ಲಿ ಇರುವ ಮನೆ- ಮನೆಗೆ, ಮಹಿಳೆಯರ ಮನಕ್ಕೆ ಮುಟ್ಟಿಸಿದರು.

ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಸೈನಿಕರಂತೆ ಹೋರಾಡಲು ಸಿದ್ಧರಾದರು. ಬ್ರಿಟಿಷರ ಗೋಲಿಗೆ ಗುಂಡಿಗೆ ಒಡ್ಡಿದರು. ಗಾಂಧೀಜಿ ಯನ್ನು ಪ್ರತ್ಯಕ್ಷ ನೋಡದವರು ಸಹ ಅವರ ಕರೆಗೆ ಓಗೊಟ್ಟು ಸತ್ಯಾಗ್ರಹದಲ್ಲಿ ಧುಮಕಿ ಪ್ರಾಣ ಪಣಕ್ಕೊಡ್ಡಿದವರ ಅಗ್ರಪಂಕ್ತಿಯಲ್ಲಿ ಬಾಬುಗೇನೂ ಬಲಿದಾನ ಶ್ರೇಷ್ಠವಾಗಿದೆ.

ಮಹಾತ್ಮಾಗಾಂಧಿ ಕರೆಗೆ ಓಗೊಟ್ಟು ಸತ್ಯಾಗ್ರಹದಲ್ಲಿ ಭಾಗವಹಿಸಲು ಕಾಂಗ್ರೆಸ್ ಪಕ್ಷಕ್ಕೆ ನಾಲ್ಕಾಣೆ ನೀಡಿ ಸಾಮಾನ್ಯ ಸದಸ್ಯನಾದನು. ದೇಶದಲ್ಲಿರುವ ಸಾಮಾನ್ಯ ಕೂಲಿಕಾರರಂತೆ ಬಡವರಲ್ಲಿ ಬಡವನಾಗಿ ಬದುಕುತ್ತಿದ್ದವನು ಬಾಬುಗೇನೂ.

ಸ್ವದೇಶಿ ಆಂದೋಲನದತ್ತ ಆಕರ್ಷಿತನಾಗಿ ಆಂದೋಲನದಲ್ಲಿ ಸತ್ಯಾಗ್ರಹಿಯಾಗಿ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಿ ಹುತಾತ್ಮನಾದ ಬಾಬುಗೇನೂ ಬಲಿದಾನ ದಿನ ಡಿಸೆಂಬರ 12, ಸ್ವದೇಶಿ ದಿನವಾಗಿ ದೇಶದ್ಯಾಂತ ಆಚರಿಸಲಾಗುತ್ತದೆ.

ಡಿಸೆಂಬರ 12, 1930 ರಂದು ಬೆಳಿಗ್ಗೆ 11ಗಂಟೆಗೆ ಮುಂಬೈ ಹನುಮಾನ ರಸ್ತೆಯಲ್ಲಿ ವಿದೇಶಿ ವಸ್ತು ಗಳನ್ನು ತುಂಬಿಕೊಂಡ ಲಾರಿ ಮುಂದುವರೆಯುವುದನ್ನು ತಡೆಗಟ್ಟಲು ರಸ್ತೆಗೆ ಅಡ್ಡಲಾಗಿ ಸತ್ಯಾಗ್ರಹಿ ಒಬ್ಬ ಮಲಗಿದನು. ಆಂಗ್ಲ ಸಾರ್ಜಂಟ್ ಅವನ ತಲೆ ಮೇಲೆ ಲಾರಿ ಓಡಿಸಿದಾಗ ವಿಪರೀತ ಪೆಟ್ಟಾಗಿ ನಿರಂತರ ರಕ್ತಸ್ರಾವವಾಗುತ್ತಿದ್ದ ಹುತಾತ್ಮ ಬಾಬೂಗೇನುವನ್ನು ಗೋಕುಲದಾಸ ತೇಜಪಾಲ್ ಆಸ್ಪತ್ರೆಗೆ ಸೇರಿಸಿದರು. ಚಿಕಿತ್ಸೆ ಫಲಕಾರಿಯಾಗಿದೆ ಸಂಜೆ ಹುತಾತ್ಮನಾದನು.

ಸಾಮಾನ್ಯ ರಲ್ಲಿ ಸಾಮಾನ್ಯನಾದ ಕೂಲಿಕಾರನೊಬ್ಬ ಸ್ವದೇಶಿ-ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಅರ್ಪಿಸಿದಸುದ್ಧಿ ನಗರದಲ್ಲೆಲ್ಲ ಹರಡಿತು, ಮರುದಿನ ನಡೆದ ಅಂತಿಮ ಯಾತ್ರೆಯಲ್ಲಿ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕರಾದ ಕನ್ನಯ್ಯ ಲಾಲ ಮುಂಶಿ, ಲೀಲಾವತಿ ಬಾಯಿ ಮುಂಶಿ, ಜಮನಾದಾಸ, ವೀರ ನಾರಿಮನ್, ಮದನಶೆಟ್ಟಿ, ಮೆಹರ್ ಅಲಿಯವರಂತಹ ಗಣ್ಯರ ನೇತೃತ್ವದಲ್ಲಿ ಶ್ರದ್ದಾಂಜಲಿ ಅರ್ಪಿಸಲು ಲಕ್ಷಗಟ್ಟಲೇ ಸಂಖ್ಯೆಯಲ್ಲಿ ಭಾಗವಹಿಸಿದರು.

ಒಂದೇ ದಿನದಲ್ಲಿ ಬಲಿದಾನಿ ಲೋಕ ಪ್ರಸಿದ್ಧನಾದ ಸತ್ಯಾಗ್ರಹಿಯೇ ಬಾಬೂಗೇನು, ಸ್ವದೇಶಿ ಆಂದೋಲನದ ಆಗಸದ ಧ್ರುವ ತಾರೆ…

ಪುಣೆ ಸೇರಿದಂತೆ ಅನೇಕ ಪಟ್ಟಣಗಳಲ್ಲಿ ಬಾಬೂಗೇನೂ ಸ್ಮೃತಿಯಲ್ಲಿ ವೃತ್ತಗಳನ್ನು ನಿರ್ಮಿಸಲಾಯಿತು. ಬಾಬೂಗೇನೂ ವಿದ್ಯಾಲಯ ಸ್ಥಾಪನೆಯಾಯಿತು. ಇಡೀ ದೇಶದಲ್ಲಿ 12 ಡಿಸೆಂಬರ ದಿನವನ್ನು ಸ್ವದೇಶಿ ದಿನವನ್ನಾಗಿ ಆಚರಿಸಲಾಗುತ್ತಿದೆ. 1969 ಮುಂಬೈ ಕಾಂಗ್ರೆಸ್ ಅಧಿವೇಶನ ಸ್ಥಳವನ್ನು ಹುತಾತ್ಮ ಬಾಬೂಗೇನೂ ನಗರ ಎಂದು ಹೆಸರಿಸಲಾಯ್ತು. ಅಂಬೇಗಾಂವ ತಾಲ್ಲೂಕಿನಲ್ಲಿ ಒಂದು ಆಣೆಕಟ್ಟು ಕಟ್ಟಿ ಅದಕ್ಕೆ ಹುತಾತ್ಮ ಬಾಬೂಗೇನೂ ಸಾಗರ ಎಂದು ಹೆಸರಿಟ್ಟರು.

ಮನೆ ಮನೆಗಳಿಗೆ ಹೋಗಿ ಸ್ವದೇಶಿ ಸ್ವೀಕಾರ, ವಿದೇಶಿ ಬಹಿಷ್ಕಾರ ಪ್ರಚಾರವಾಗಬೇಕು, ಸ್ವದೇಶಿ ಮಹತ್ವ ತಿಳಿಸಿ ರಾಷ್ಟ್ರ ಭಕ್ತಿ ಅರಳಿಸುವ ನಿರಂತರ ಪ್ರಯತ್ನ ಮುಂದುವರೆಸುವುದು ಬಾಬುಗೇನೂವಿಗೆ ಸಲ್ಲಿಸುವ ಶ್ರದ್ದಾಂಜಲಿಯಾಗಿದೆ. ಸ್ವದೇಶಿ ದಿನದ ಅರ್ಥಪೂರ್ಣ ಆಚರಣೆಯಾಗಬೇಕು.

Spread the love

Leave a Reply

Your email address will not be published. Required fields are marked *

error: Content is protected !!