ಯಾದಗಿರಿಯಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಉಪಾಧ್ಯಕ್ಷ ಪತ್ರಿಕಾಗೋಷ್ಠಿ
ಯಾದಗಿರಿ: ಬಹುಜನ ಸಮಾಜ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾದ ಮಾಯಾವತಿ ಅವರು ಒಳ ಮೀಸಲಾತಿ ತೀರ್ಪುನ್ನು ತೀವ್ರವಾಗಿ ವಿರೋಧಿಸಿದ್ದರಿಂದ ಬಹುಜನ ಸಮಾಜ ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಉಪಾಧ್ಯಕ್ಷ ಕೆ.ಬಿ. ವಾಸು ಹೇಳಿದರು.
ಯಾದಗಿರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ನೀಡುವ ಅಧಿಕಾರವು ರಾಜ್ಯ ಸರ್ಕಾರಗಳಿಗೆ ಇದೆಯೆಂದು, ಆಗಸ್ಟ್ 1, 2024 ರಂದು ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಜನಪರ ಸಂಘಟನೆಗಳು ಸ್ವಾಗತಿಸಿವೆ. ಆದರೆ ಬಿಎಸ್ಪಿ ವಿರೋಧಿಸಿದೆ.
ಕರ್ನಾಟಕದಲ್ಲಿ ಕಳೆದ 30 ವರ್ಷಗಳಿಂದ ಒಳ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸುತ್ತ ಬಂದಿರುವ ಬಹುಜನ ಸಮಾಜ ಪಾರ್ಟಿಯ ಕಾರ್ಯಕರ್ತರಾದ ನಮಗೆ, ಮಾಯಾವತಿಯವರ ವರ್ತನೆಯು ಆಘಾತ ಉಂಟು ಮಾಡಿತು. ಅವರ ಈ ಒಳಮಿಸಲಾತಿ ನಿಲುವನ್ನು ವಿರೋಧಿಸಿ ಬಹುಜನ ಸಮಾಜ ಪಾರ್ಟಿಯ ರಾಜ್ಯ ಅಧ್ಯಕ್ಷರಾಗಿದ್ದ ಮಾನ್ಯ ಮಾರಸಂದ್ರ ಮುನಿಯಪ್ಪ, ರಾಜ್ಯ ಸಂಯೋಜಕರಾಗಿದ್ದ ಮಾನ್ಯ ಎಂ ಗೋಪಿನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ಮುನಿಯಪ್ಪ ಮುಂತಾದ ಹಿರಿಯ ರಾಜ್ಯ ಮುಖಂಡರು ಮತ್ತು ರಾಜ್ಯಪ್ರದಾನ ತಾನು ಸೇರಿದಂತೆ ಸುಮಾರು 25 ಜಿಲ್ಲೆಗಳ ಜಿಲ್ಲಾಧ್ಯಕ್ಷರುಗಳು ಬಹುಜನ ಸಮಾಜ ಪಾರ್ಟಿಗೆ ದಿನಾಂಕ 31-8-2024 ರಂದು ಸಾಮೂಹಿಕ ರಾಜೀನಾಮೆ ನೀಡಿ ಪತ್ರ ರವಾನಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಇದೀಗ ಸಾಮಾಜಿಕ ನ್ಯಾಯದ ಪರ ವಿರುವ ನಾವು ಹೊಸದಾಗಿ “ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ”ಯನ್ನು ಸೆಪ್ಟೆಂಬರ್ 9, 2024ರಂದು ಸ್ಥಾಪಿಸಿದ್ದು, ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಉಪಾಧ್ಯಕ್ಷನಾಗಿ ಉತ್ತರ ಕರ್ನಾಟಕದ ಉಸ್ತುವಾರಿ ವಹಿಸಿಕೊಂಡಿರುತ್ತೇನೆ. ದಾದು ಅವರು ಯಾದಗಿರಿ ಜಿಲ್ಲಾಧ್ಯಕ್ಷರಾಗಿ ನಮ್ಮ ಪಾರ್ಟಿಯಲ್ಲಿ ಮುಂದುವರೆಯುತ್ತಾರೆ. ಇದು ಇಡೀ ರಾಜ್ಯಕ್ಕೆ ತಿಳಿದಿರುವ ಸಂಗತಿಯಾಗಿದೆ.
ಹೀಗಿರುವಾಗ ನಿನ್ನೆಯ ದಿನ ಬಹುಜನ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷರಾಗಿ ನೇಮಿಸಲ್ಪಟ್ಟಿರುವ ಎಂ. ಕೃಷ್ಣಮೂರ್ತಿಯವರು ಯಾದಗಿರಿಯಲ್ಲಿ ಪತ್ರಿಕಾಗೋಷ್ಠಿ ಕರೆದು ಕೆ.ಬಿ.ವಾಸು ಮತ್ತು ದಾದು ಅವರನ್ನು ಬಹುಜನ ಸಮಾಜ ಪಾರ್ಟಿಯಿಂದ ಉಚ್ಛಾಟಿಸಲಾಗಿದೆ ಎಂಬ ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಹೇಳಿದರು.
ಬಹುಜನ ಸಮಾಜ ಪಾರ್ಟಿಯ ನಾಯಕಿ ಮಾಯಾವತಿಯವರು ಅಂಬೇಡ್ಕರ್-ಕಾನ್ಷಿ ರಾಮ್ ಸಿದ್ಧಾಂತವನ್ನು ಬಿಟ್ಟು ಕುಟುಂಬ ರಾಜಕಾರಣ ನಡೆಸುತ್ತಾ, ಬಿಜೆಪಿಯ ಬಿ ಟೀಮ್ ಎಂಬ ಅಪಖ್ಯಾತಿ ಪಡೆದಿದ್ದಾರೆ.
ಮುಸ್ಲಿಂ-ವಿರೋಧಿ ಕಾಯ್ದೆಗಳಿಗೆ ಬೆಂಬಲ, ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ರೈತರ ಹೋರಾಟದ ಬಗ್ಗೆ ಮೌನ, ಒಂದು ರಾಷ್ಟ್ರ-ಒಂದು ಚುನಾವಣೆ ನೀತಿಗೆ ಸ್ವಾಗತ ಇತ್ಯಾದಿಯಾಗಿ ಸಂವಿಧಾನ ವಿರೋಧಿ ನಿಲುವುಗಳನ್ನು ತಾಳಿ ಅಡ್ಡದಾರಿ ಹಿಡಿದಿರುವ ಅಕ್ಕನವರು ಒಳಮೀಸಲಾತಿ ತೀರ್ಪನ್ನು ವಿರೋಧಿಸಿದ್ದು ಅಚ್ಚರಿಯೇನಲ್ಲ ಎಂದರು.
ನಮ್ಮನ್ನು ಉಚ್ಚಾಟಿಸಿರುವ ಹೇಳಿಕೆ ನೀಡಿರುವುದು ಸಹ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಅವರ ರಾಷ್ಟ್ರ ನಾಯಕರು ಹಾಕಿರುವ ಒತ್ತಡದ ಪರಿಣಾಮವಾಗಿದೆ ಎಂದು ಗುಡುಗಿದರು.
ಮೂರು ತಿಂಗಳ ಹಿಂದೆಯೇ ರಾಜೀನಾಮೆ ನೀಡಿರುವವರನ್ನು ಈಗ ಉಚ್ಚಾಟಿಸಿದ್ದೇವೆ ಎಂದು ತಲೆ ಸರಿ ಇರುವ ವ್ಯಕ್ತಿಗಳಾರೂ ಹೇಳಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದರು.