ಗುರುಮಠಕಲ್: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಕುಶಲ ಕೂಲಿ ಕೆಲಸ ಮಾಡುವ ಗ್ರಾಮೀಣ ಪ್ರದೇಶದ ಕೂಲಿಕಾರರ ದಿನದ ಕೂಲಿ ದರವನ್ನು 370 ರೂಗಳಿಗೆ ಹೆಚ್ಚಳ ಮಾಡಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಆದೇಶ ಹೊಡಿಸಿದೆ ಎಂದು ಗುರುಮಠಕಲ್ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅಂಬ್ರೇಶ್ ಪಾಟೀಲ್ ತಿಳಿಸಿದ್ದಾರೆ.

ಕಳೆದ ದಿನಗಳಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ದಿನದ ಕೂಲಿ ಹಣ ₹349 ಕೊಡುತ್ತಿದ್ದರು. 2025 ಏಪ್ರಿಲ್ ತಿಂಗಳ ಹೊಸ ಆರ್ಥಿಕ ವರ್ಷದಿಂದ ಜಾರಿಗೆ ಬರುವಂತೆ 21ರೂ. ಗಳನ್ನು ಹೆಚ್ಚುವರಿಯಾಗಿ 349 ರೂ,ಗಳಿಗೆ ಸೇರಿಸಿ 370ರೂ ದಿನದ ಕೂಲಿದರ ನಿಗದಿಪಡಿಸಿದೆ ಎಂದು ಹೇಳಿದ್ದಾರೆ.

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಪ್ರತಿ ಅರ್ಹ ಕುಟುಂಬಕ್ಕೂ ಒಂದು ಆರ್ಥಿಕ ವರ್ಷದಲ್ಲಿ ಏಪ್ರಿಲ್ ತಿಂಗಳಿಂದ ಮಾರ್ಚ್ ಅಂತ್ಯದ ವರೆಗೆ ನೂರು ದಿನಗಳ ಅಕುಶಲ ಕೂಲಿ ಕೆಲಸ ನೀಡಲಾಗುತ್ತದೆ. ಗ್ರಾಮೀಣ ಭಾಗದ ಒಂದು ಕುಟುಂಬ ವರ್ಷದಲ್ಲಿ ನೂರು ದಿನ ಕೆಲಸ ಮಾಡಿದರೆ 37 ಸಾವಿರ ರೂಗಳ ಕೂಲಿ ಹಣ ಪಡೆದುಕೊಳ್ಳಬಹುದು. ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುವ ಪುರುಷ ಮತ್ತು ಸ್ತ್ರೀಯರಿಗೂ 370 ರೂಗಳ ಸಮಾನ ಕೂಲಿ ಪಾವತಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಬೇಸಿಗೆ ಆರಂಭವಾಗಿ ಗ್ರಾಮೀಣ ರೈತರ ಕೃಷಿ ಚಟುವಟಿಕೆಗಳು ಭಾಗಶಃ ಪೂರ್ಣಗೊಂಡಿದ್ದು, ಕೃಷಿ ಕೂಲಿಕಾರರು ಕೆಲಸವಿಲ್ಲದೆ ದೂರದ ನಗರಗಳಿಗೆ ಕೂಲಿ ಕೆಲಸಕ್ಕಾಗಿ ಗುಳೆ ಹೊಗುವುದನ್ನು ತಪ್ಪಿಸಲು, ನರೇಗಾ ಯೋಜನೆಯಡಿ ಒಂದು ಕುಟುಂಬಕ್ಕೆ ನೂರು ದಿನಗಳ ಕೆಲಸ ಪಡೆದುಕೊಳ್ಳುವ ಅವಕಾಶವಿದೆ. ಹೀಗಾಗಲೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕೂಲಿ ಬೇಡಿಕೆ ಸ್ವೀಕೃತಿ ಕೇಂದ್ರ ಆರಂಭಿಸಿದೆ. ಕೂಲಿ ಕೆಲಸಕ್ಕಾಗಿ ತಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಕೂಲಿ ಬೇಡಿಕೆ ಸಲ್ಲಿಸಿ ಕೆಲಸ ಪಡೆದುಕೊಳ್ಳುವ ಮೂಲಕ ನರೇಗಾ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೂಲಿಕಾರರಲ್ಲಿ ವಿನಂತಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!