ಬೀದರ: ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನ ಚಾಂಗಲೇರ ಗ್ರಾಮದಲ್ಲಿ ನವೆಂಬರ್.11 ರಿಂದ 15 ರವರೆಗೆ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಜರುಗಲಿದೆ.
ನವೆಂಬರ್.11 ರಂದು ಬೆಳಿಗ್ಗೆ 6 ಗಂಟೆಗೆ ದೇವರಿಗೆ ರುದ್ರಾಭಿಷೇಕ ಪೂಜೆ ಮಹಾ ಮಂಗಳಾರತಿ, ಬೆಳಿಗ್ಗೆ 9 ಗಂಟೆಗೆ ರಥಕ್ಕೆ ಕಳಸಾರೋಹಣ ಹಾಗೂ ರಾತ್ರಿ 9 ಗಂಟೆಯಿಂದ 12 ಗಂಟೆಯವರೆಗೆ ಶ್ರೀ ವೀರಭದ್ರೇಶ್ವರ ಭಜನೆ ಹಾಗೂ ಪುರವಂತರ ಸೇವೆಯೊಂದಿಗೆ ದೇವರ ಪಲ್ಲಕ್ಕಿ ವೈಭವದಿಂದ ಸಕಲ ವಾದ್ಯ ಬಿರುದಾವಳಿಗಳೊಂದಿಗೆ ದೇವಸ್ಥಾನದಲ್ಲಿ ಜರುಗಲಿದೆ.
ನವೆಂಬರ್.12 ರಂದು ಬೆಳಿಗ್ಗೆ ರುದ್ರಾಭಿಷೇಕ, ಅಗ್ನಿ ಪೂಜೆ, ಸಾಯಂಕಾಲ ಕ್ಷೀರ ರುದ್ರಾಭಿಷೇಕ ಪೂಜೆ ನಂತರ ಪಶುಗಳ ಪ್ರದರ್ಶನ ಮತ್ತು ಕ್ರಿಕೆಟ್ ಟೂರ್ನಾಮೆಂಟ್, ಶಿವಾನುಭವ ಗೋಷ್ಠಿ ಹಾಗೂ ಸಂಗೀತ ದರಬಾರ ಹಾಗೂ ಬೆಳ್ಳಿ ಪಲ್ಲಕ್ಕಿ ಉತ್ಸವ ಜರುಗಲಿದೆ.
ನವೆಂಬರ್.13 ರಂದು ಬೆಳಿಗ್ಗೆ ಪುರವಂತರ ಸೇವೆ, ವೀರಗಾಸಿ ಸೇವೆ ಸಕಲ ವಾದ್ಯ ವೈಭವಗಳೊಂದಿಗೆ ಶ್ರೀ ವೀರಭದ್ರೇಶ್ವರ ದೇವರ ಬೆಳ್ಳಿ ಪಲ್ಲಕ್ಕಿ ಉತ್ಸವ ಹಾಗೂ ಮುತ್ತಿನ ಪಲ್ಲಕ್ಕಿ ಉತ್ಸವದೊಂದಿಗೆ ಬೆಳಿಗ್ಗೆ 5.50ಕ್ಕೆ ಅಗ್ನಿ ಪ್ರವೇಶ (ಅಗ್ಗಿ ತುಳಿಯುವುದು) ಹಾಗೂ ಅಗ್ನಿ ಕಟ್ಟೆಯಲ್ಲಿ ಗುರುಗಳ ದರ್ಶನ ಪಡೆಯುವುದು. ಸಾಯಂಕಾಲ 6 ಗಂಟೆಗೆ ರಥೋತ್ಸವ ಉದ್ಘಾಟನೆ ನಡೆಯಲಿದೆ.
ನವೆಂಬರ್.14 ರಂದು ದೇವಸ್ಥಾನದ ಥೇರ ಮೈದಾನದಲ್ಲಿ ಬೆಳಿಗ್ಗೆ 8 ರಿಂದ 12 ಗಂಟೆಯವರೆಗೆ ಮಹಿಳೆಯರ ಮತ್ತು ಪುರುಷರ ಬಿರುದು ಜಂಗೀ ಕುಸ್ತಿಗಳು ಜರುಗಲಿವೆ. ಮತ್ತು ನವೆಂಬರ್.14 ರಂದು ದೇವರ ಬೆಳ್ಳಿ ಪಲ್ಲಕ್ಕಿ ಉತ್ಸವವು ಪುರವಂತರ ಸೇವೆಯೊಂದಿಗೆ ದೇವಾಲಯದಿಂದ ಚಾಂಗಲೇರಾ ಗ್ರಾಮದವರೆಗೆ ಉತ್ಸವ ಜರುಗುವುದು.
ಪ್ರಯುಕ್ತ ಸಕಲ ಸದ್ಭಕ್ತರು ತಮ್ಮ ತನು ಮನ, ಧನದಿಂದ ಸೇವೆ ಸಲ್ಲಿಸಿ ಶ್ರೀ ವೀರಭದ್ರೇಶ್ವರ ದೇವರ ದರ್ಶನ ಪಡೆದು ಕೃಪಾಶಿರ್ವಾದಕ್ಕೆ ಪಾತ್ರರಾಗಬೇಕೆಂದು ಚಾಂಗಲೇರ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.