ಕುಂಭ ಒಂದು ಮೇಳ ಮಾತ್ರವಲ್ಲ. ಹಿಂದೂಗಳ ಅತಂತ್ಯ ಪವಿತ್ರ ತ್ರಿವೇಣಿ ಸಂಗಮ, ಭವ್ಯ ಸನಾತನ ಸಂಸ್ಕೃತಿ, ಅಸ್ಮಿತೆ, ಪರಂಪರೆ, ಆಧ್ಯಾತ್ಮದ ಪ್ರತೀಕವಾಗಿದೆ. ಲಕ್ಷಾಂತರ ಸಾಧು – ಸಂತರು, ದೇಶ ವಾಸಿಗಳ ಪವಿತ್ರ ಯಾತ್ರೆಯಾಗಿದೆ.

ಈ ಪವಿತ್ರ ಸ್ಥಳವು ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮವಾಗಿದೆ. 2025 ರ ಜ.13 ರಿಂದ ಫೆ.26ರ ವರೆಗೆ ಮಹಾ ಕುಂಭ ಮೇಳ ನೆರವೇರಲಿದೆ. ಈ ವೇಳೆ ಕೋಟ್ಯಾಂತರ ಜನರು ಪವಿತ್ರ ಸಂಗಮದಲ್ಲಿ ಮಿಂದೇಳಲಿದ್ದಾರೆ. 

ಅನೀಲ ಎನ್. ಬಸೂದೆ✍️

ಚಿರಂಜೀವಿಗಳು, ತಪಸ್ವಿಗಳು ಆಹ್ವಾನವಿಲ್ಲದೆ ಬಂದು ಸೇರುವ ಕುಂಭ ಮೇಳವು ಅಮೃತ ಸ್ನಾನವೆಂದು ಕರೆಯಿಸಿಕೊಳ್ಳುತ್ತದೆ.  144 ವರ್ಷಗಳ ನಂತರ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳ ನಡೆಯಲಿದ್ದು ವಿಶ್ವಾದ್ಯಂತ ಕೋಟ್ಯಂತರ ಜನರು ಇತಿಹಾಸ ನಿರ್ಮಿಸಲು ಕಾತುರದಿಂದ ಕಾಯುತ್ತಿರುವ ಅಮೃತ ಘಳಿಗೆಯನ್ನು ಕಣ್ಣಾರೆ ಕಾಣುವ ನಾವು ನಿಜಕ್ಕೂ ಪುಣ್ಯವಂತರೇ ಸರಿ.

ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ದಿವ್ಯ ದೃಶ್ಯ ಕುಂಭ ಮೇಳವು ಭಾರತದಾದ್ಯಂತ ನಾಲ್ಕು ಪವಿತ್ರ ಯಾತ್ರಾ ಸ್ಥಳಗಳಿಗೆ ಲಕ್ಷಾಂತರ ಹಿಂದೂಗಳನ್ನು ಆಕರ್ಷಿಸುತ್ತದೆ. ಇವುಗಳಲ್ಲಿ, ಪವಿತ್ರ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮವಾದ ಪ್ರಯಾಗರಾಜ್ ವಿಶಿಷ್ಟ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ.

ಈ ತ್ರಿವೇಣಿ ಸಂಗಮ ಹಿಂದೂ ಧರ್ಮದ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ, ಇದು ದೈವಿ ಶಕ್ತಿ ಯಿಂದ ತುಂಬಿದೆ ಎನ್ನುವ ನಂಬಿಕೆ ಪುರಾತನ ಕಾಲದಿಂದಲೂ ಬೇರೂರಿದೆ.

ಪ್ರತಿ 144 ವರ್ಷಗಳಿಗೊಮ್ಮೆ, ಪ್ರಯಾಗರಾಜ್‌ನಲ್ಲಿ ಮಹಾ ಕುಂಭ ನಡೆಯುತ್ತದೆ, ಆಗ ಸೂರ್ಯ, ಚಂದ್ರ ಮತ್ತು ಗುರು ಗಳು ಅಪರೂಪದ ಜ್ಯೋತಿಷ್ಯ ಸಂರಚನೆಯಲ್ಲಿ ಒಂದಾಗುತ್ತಾರೆ. ಈ ಶುಭ ಜೋಡಣೆಯು ನದಿ ನೀರಿನ ಆಧ್ಯಾತ್ಮಿಕ ಶಕ್ತಿಯನ್ನು ವರ್ಧಿಸುತ್ತದೆ ಮತ್ತು ಅವುಗಳನ್ನು ಶುದ್ಧೀಕರಣ ಮತ್ತು ವಿಮೋಚನೆಗೆ ಒಂದು ಮಾರ್ಗವನ್ನಾಗಿ ಮಾಡುತ್ತದೆ ಎಂದು ನಂಬಲಾಗಿದೆ. ಯಾತ್ರಿಕರು ತಮ್ಮ ಪಾಪಗಳನ್ನು ತೊಳೆದುಕೊಳ್ಳ ಲು ಮತ್ತು ಆಧ್ಯಾತ್ಮಿಕ ಜ್ಞಾನೋದ ಯವನ್ನು ಪಡೆಯಲು ಪವಿತ್ರ ನೀರಿನಲ್ಲಿ ಮುಳುಗಲು ಸಂಗಮವಾಗುತ್ತಾರೆ.

ಕುಂಭಮೇಳ ಜಗತ್ತಿನಲ್ಲೇ ಅತೀ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೇಳವಾಗಿದೆ. ಸಮುದ್ರ ಮಂಥನದ ಸಮಯದಲ್ಲಿ ನಾಲ್ಕು ಹನಿ ಅಮೃತವು ನಾಲ್ಕು ಪವಿತ್ರ ತೀರ್ಥ ಕ್ಷೇತ್ರದಲ್ಲಿ ಬಿದ್ದವು ಎಂಬ ಪ್ರತೀತಿ ಇದೆ.

ಒಟ್ಟು ಭಾರತದಲ್ಲಿ ನಾಲ್ಕು ರೀತಿಯ ಕುಂಭಮೇಳ ನಡೆಯುತ್ತದೆ: ಕುಂಭ ಮೇಳ (4 ವರ್ಷಗಳಿಗೊಮ್ಮೆ)(ಹರಿದ್ವಾರ, ಪ್ರಯಾಗ್‌ ರಾಜ್‌, ಉಜ್ಜೈನ್‌ ಹಾಗೂ ನಾಸಿಕ್), ಅರ್ಧ ಕುಂಭ ಮೇಳ (6 ವರ್ಷಗಳಿಗೊಮ್ಮೆ)(ಪ್ರಯಾಗ್‌ ರಾಜ್‌ ಮತ್ತು ಹರಿದ್ವಾರ್‌), ಪೂರ್ಣ ಕುಂಭ ಮೇಳ (12 ವರ್ಷಗಳಿಗೊಮ್ಮೆ)(ಪ್ರಯಾಗ್‌ ರಾಜ್‌), ಮಹಾಕುಂಭ ಮೇಳ (144 ವರ್ಷಗಳಿಗೊಮ್ಮೆ (ಪ್ರಯಾಗ್‌ರಾಜ್).

ಕುಂಭ ಮೇಳೆ ನಡೆಯುವ ಸಂಧರ್ಭದಲ್ಲಿ ನಾಗಾ ಸಾಧುಗಳು ಆಗಮಿಸಿ ಶಾಹಿ ಸ್ನಾನದಲ್ಲಿ ಪಾಲ್ಗೊಳ್ಳುತ್ತಾರೆ. ಜನವರಿ 13( ಪುಷ್ಯ ಪೂರ್ಣಿಮಾ ಸ್ನಾನ),ಜ.15 (ಮಕರ ಸಂಕ್ರಾಂತಿ ಸ್ನಾನ),ಜ. 29(ಮೌನಿ ಅಮಾವಾಸ್ಯೆ ಸ್ನಾನ),ಫೆ. 03(ಬಸಂತ್‌ ಪಂಚಮಿ ಸ್ನಾನ),ಫೆ. 12(ಮಾಘಿ ಹುಣ್ಣಿಮೆ ಸ್ನಾನ) ಹಾಗೂ ಫೆ. 26(ಮಹಾ ಶಿವರಾತ್ರಿ ಸ್ನಾನ) ನೇರವೇರಲಿದೆ.

ಈ ಬಾರಿಯ ಮಹಾ ಕುಂಭಮೇಳದಲ್ಲಿ ಸುಮಾರು 45 ಕೋಟಿ ಗೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಧ್ಯಮ ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದಾರೆ.

ಸಿಎಂ ಯೋಗಿಜೀ ಅವರು ಈ ಮಹಾ ಕುಂಭ ಮೇಳಕ್ಕೆ ವಿಶೇಷ ಮುತುವರ್ಜಿ ವಹಿಸಿದ್ದು, ಮಹಾ ಕುಂಭಮೇಳ ಯಶಸ್ವಿಯಾಗಿ ನಡೆಸಲು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ಪ್ರಯಾಗರಾಜ್‌ ನಲ್ಲಿ ನಡೆಯಲಿರುವ ಮಹಾಕುಂಭ ಮೇಳ ನಡೆಯುವ ಸ್ಥಳದಲ್ಲಿ ಮೂಲ ಸೌಕರ್ಯಗಳಿಗಾಗಿ 7 ಸಾವಿರ ಕೋಟಿ ಖರ್ಚು ಮಾಡ ಲಾಗಿದ್ದು, 2 ಲಕ್ಷ ಕೋಟಿ ರೂಪಾಯಿ ಆದಾಯ ನಿರೀಕ್ಷೆ ಹೊಂದಲಾಗಿದೆ.

ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಿಂದ ಸುಮಾರು 7,550ಕ್ಕೂ ಹೆಚ್ಚು ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು ಇದರ ಜೊತೆಗೆ ಪ್ರಯಾಗ್‌ರಾಜ್ ವಿಮಾನ ನಿಲ್ದಾಣದಿಂದ ಸಂಗಮ ಕ್ಷೇತ್ರಕ್ಕ 550ಕ್ಕೂ ಹೆಚ್ಚು ಶೆಟಲ್ ಬಸ್ ವ್ಯವಸ್ಥೆ ಮಾಡಲಾಗಿದ್ದು, ಸಂಚಾರ ನಿರಂತರವಾಗಿ ನಡೆಸಲಿದೆ. ದೇಶಾದ್ಯಂತ ಮಹಾ ಕುಂಭಮೇಳಕ್ಕೆ ಸಾವಿರಾರು ರೈಲುಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಗರಾಜ್ ರೈಲ್ವೆ ನಿಲ್ದಾಣದಿಂದ ಕುಂಭಮೇಳ ಕಾರ್ಯ ಕ್ರಮಕ್ಕೆ ತಲುಪಲು ಆಟೋ-ರಿಕ್ಷಾಗಳು, ಬಸ್‌ಗಳು ಮತ್ತು ಟ್ಯಾಕ್ಸಿಗಳು ಸೇರಿದಂತೆ ಹಲವಾರು ಸಾರಿಗೆ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ.

ಮಹಾಕುಂಭ ಮೇಳ ನಡೆಯುವ ಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಭಕ್ತರು ಉಳಿದುಕೊಳ್ಳಲು ಸುಮಾರು 1.6 ಲಕ್ಷ ಟೆಂಟ್‌ಗಳನ್ನು ನಿರ್ಮಿಸಲಾಗಿದೆ. ಸುಮಾರು 4 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಮಹಾಕುಂಭ ಮೇಳ ನಡೆಯುವ ಪ್ರದೇಶ ದಲ್ಲಿ 67,000 ಎಲ್ಇಡಿ ಮತ್ತು 2000 ಸೋಲಾರ್ ಹೈಬ್ರಿಡ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ.

ಕೋಟ್ಯಾಂತರ ಭಕ್ತರು ಸುಗಮ ಮತ್ತು ಸುರಕ್ಷಿತ ವಾಗಿ ಪ್ರಯಾಣ ಮಾಡಲು ಮಹಾ ಕುಂಭಮೇಳ ನಡೆಯುವ ಸುತ್ತಮುತ್ತಲಿನ ಸ್ಥಳದಲ್ಲಿ ಸುಮಾರು 400 ಕಿಮೀ ಗೂ ಹೆಚ್ಚು ತಾತ್ಕಾಲಿಕ ರಸ್ತೆಗಳನ್ನು ಹಾಗೂ 14 ನೂತನ ಫ್ಲೈ ಓವರ್‌ ಗಳನ್ನು ನಿರ್ಮಾಣ ಮಾಡಲಾಗಿದೆ.

ಸುಮಾರು 30 ಪಾಂಟೂನ್ ಸೇತುವೆಗಳನ್ನು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ, ಸುಮಾರು 1850 ಎಕರೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸುಮಾರು 1.5 ಲಕ್ಷಕ್ಕೂ ಹೆಚ್ಚು ತಾತ್ಕಾಲಿಕ ಶೌಚಗೃಹ ನಿರ್ಮಿಸಲಾಗಿದೆ.

ಇದು “ಡಿಜಿಟಲ್ ಮಹಾಕುಂಭ ಮೇಳವಾಗಿದ್ದು” ವಿಶೇಷವಾಗಿ 328 ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಹೊಂದಿರುವ ಸಿಸಿಟಿವಿಗಳು ಸೇರಿ ಒಟ್ಟು 2600 ಸಿಸಿಟಿವಿಗಳನ್ನು ಅಳವಡಿ ಸಲಾಗಿದೆ, ಜೊತೆಗೆ ಹೊಸ ತಂತ್ರಜ್ಞಾನ ಹೊಂದಿರುವ ನೀರಿನ ಒಳಗಡೆ ಚಲಿಸುವ ಡ್ರೋನ್ ಬಳಸಲಾಗುತ್ತಿದೆ. ಮಹಾಕುಂಭಕ್ಕೆ ಬರುವ ಭಕ್ತರಿಗೆ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ತಂತ್ರಜ್ಞಾನ ಹೊಂದಿರುವ ರಿಸ್ಟ್ ಬ್ಯಾಂಡ್‌ಗಳನ್ನು ಒದಗಿಸಲಾ ಗುತ್ತದೆ ಇದರ ಸಹಾಯದಿಂದ ಮೇಳದಲ್ಲಿ ಯಾರಾದರೂ ಕಳೆದು ಹೋದಲ್ಲಿ ಅವರನ್ನು ಈ ತಂತ್ರಜ್ಞಾನದ ಮೂಲಕ ಟ್ರ್ಯಾಕ್ ಮಾಡಲಾಗುತ್ತದೆ.

ಮಹಾ ಕುಂಭ ಮೇಳದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಐಸಿಯು ಸೌಲಭ್ಯ ಹೊಂದಿ ರುವ ಆಂಬ್ಯುಲೆನ್ಸ್‌ ಗಳನ್ನು ನದಿ ನೀರಿ ನ ಮೇಲೆ ಆಯಕಟ್ಟಿನ ಸ್ಥಳದಲ್ಲಿ ನಿಲ್ಲಿಸಲಾಗುತ್ತದೆ, ಈ ಆಂಬ್ಯುಲೆನ್ಸ್‌ಗಳಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಹಾಸಿಗೆಗಳು ಜೊತೆಗೆ ಆಮ್ಲಜನಕ ಮತ್ತು ವೆಂಟಿಲೇಟರ್‌ಗಳ ಸೌಲಭ್ಯಗಳನ್ನು ಒದಗಿಸಲಾಗಿದೆ, ಇದರ ಜೊತೆಗೆ ನದಿಯಲ್ಲಿ ಸ್ನಾನ ಮಾಡುವವರ ಸುರಕ್ಷಿತ ದೃಷ್ಟಿಯಿಂದ 800 ಪ್ರಾದೇಶಿಕ ಸಶಸ್ತ್ರ ಕಾನ್ಸ್‌ಟೇಬಲ್ (PAC) ಹಾಗೂ 150 ಎಸ್‌ಡಿಆರ್‌ಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಸುಮಾರು 37 ಸಾವಿರ ಪೋಲಿಸರನ್ನು ಹಾಗೂ 14 ಸಾವಿರ ಹೋಮ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. 10,200 ಸ್ವಚ್ಛತಾ ಕಾರ್ಮಿಕರನ್ನು ನಿಯೋಜಿಸಲಾಗಿದೆ. ಮಹಾ ಕುಂಭ ಮೇಳ ನಡೆಯುವ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಪೌರಾಣಿಕ ಪ್ರಾಮುಖ್ಯತೆಯನ್ನು ಸಾರುವ 30 ವಿವಿಧ ಕಮಾನುಗಳನ್ನು ನಿರ್ಮಾಣ ಮಾಡಲಾಗಿದ್ದು ಭಕ್ತರಿಗೆ ದೇವ ಲೋಕದ ದಿವ್ಯ ದರ್ಶನ ಅನುಭವವಾಗಲಿದೆ.

ಸುಮಾರು 12 ಕಿ.ಮೀ ನಲ್ಲಿ ತಾತ್ಕಾಲಿಕ ಘಟ್‌ಗಳನ್ನು ನಿರ್ಮಾಣ ಮಾಡಲಾಗಿದೆ, 450 ಕಿ.ಮೀ ನಷ್ಟು ಪೈಪ್‌ಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಈ ಅದ್ಭುತವಾದ ಕಾರ್ಯಕ್ರಮವನ್ನು ಲೈವ್ ಪ್ರಸಾರ ಮಾಡಲು ಅಮೇರಿಕ ಸೇರಿದಂತೆ 82 ದೇಶಗಳು ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಲು ಅರ್ಜಿ ಸಲ್ಲಿಕೆ ಮಾಡಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಒಟ್ಟಿನಲ್ಲಿ ಈ ಪುಣ್ಯ ಸ್ನಾನಕ್ಕೆ ಕೋಟ್ಯಂತರ ಜನರು ಕಾಯುತ್ತಿದ್ದು, ಐತಿಹಾಸಿಕ ಮಹಾ ಕುಂಭ ಮೇಳ ಎನ್ನುವ ಖ್ಯಾತಿ ಪಡೆಯಲಿದೆ.

Spread the love

Leave a Reply

Your email address will not be published. Required fields are marked *

error: Content is protected !!