ರಾಯಚೂರು: ರಾಯಚೂರು ವಿಶ್ವವಿದ್ಯಾಲಯದ 2024-25ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಸ್ನಾತಕೋತ್ತರ ಪದವಿಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳ ಹಿಂದೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಪ್ರಥಮ ಸುತ್ತಿನ ದಾಖಲಾತಿಗಳು ಪೂರ್ಣಗೊಂಡು ಈಗ ಉಳಿಕೆಯಾದ ಸೀಟುಗಳಿಗೆ ದ್ವಿತೀಯ ಸುತ್ತಿನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ನವೆಂಬರ್ 29ರಿಂದ ಡಿಸೆಂಬರ್ 08ರ ವರೆಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ಅರ್ಜಿ ಸಲ್ಲಿಸಲು ಇಚ್ಛಿಸುವ ವಿದ್ಯಾರ್ಥಿಗಳು UUCMS ಪೋರ್ಟಲ್ನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಿ, ಬಳಿಕ ಅರ್ಜಿ ಶುಲ್ಕ ಭರಿಸಬೇಕಿದೆ. ಅರ್ಜಿಯ ಮುದ್ರಿತ ಪ್ರತಿ ಹಾಗೂ ಅಗತ್ಯ ದಾಖಲಾತಿಗಳ ಜೆರಾಕ್ಸ್ ಪ್ರತಿಯನ್ನು ವಿಭಾಗದ ಮುಖ್ಯಸ್ಥರಿಗೆ ಡಿ.9ರ ಒಳಗಾಗಿ ಸಲ್ಲಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಯಂದಿನಂತೆ ಪ್ರವೇಶ ಪರೀಕ್ಷೆಯನ್ನು ಬರೆಯಬೇಕಿದ್ದು, ಪದವಿಯಲ್ಲಿ ಪಡೆದ ಅಂಕ ಹಾಗೂ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ (ಈ ಹಿಂದೆ ಅರ್ಜಿ ಸಲ್ಲಿಸಿ ಪ್ರವೇಶ ಪರೀಕ್ಷೆ ಬರೆಯದವರು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅಂಥವರು ನೇರವಾಗಿ ಪ್ರವೇಶ ಪರೀಕ್ಷೆಗೆ ಹಾಜರಾಗಬಹುದು).
ಸೀಟು ಲಭ್ಯತೆಗೆ ಅನುಗುಣವಾಗಿ ರಾವಿವಿ ಮುಖ್ಯ ಆವರಣ ಸೇರಿದಂತೆ ಸಂಲಗ್ನತೆ ಹೊಂದಿರುವ ಸರ್ಕಾರಿ/ಖಾಸಗಿ ಮಹಾವಿದ್ಯಾಲಯಗಳಲ್ಲಿ (ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ) ನಡೆಯುವ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಇದರ ಲಾಭ ಪಡೆಯಬಹುದಾಗಿದೆ. ವಿಷಯವಾರು ಲಭ್ಯ ಸೀಟುಗಳು, ಮೀಸಲಾತಿ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿರುವ (https://raichuruniversity.ac.in) ಅಧಿಸೂಚನೆಯನ್ನು ಗಮನಿಸಬಹುದಾಗಿದೆ.