ರಾಯಚೂರು: ರಾಯಚೂರು ವಿಶ್ವವಿದ್ಯಾಲಯವು 2024-25ನೇ ಶೈಕ್ಷಣಿಕ ಸಾಲಿಗೆ ಎರಡನೇ ಸುತ್ತಿನಲ್ಲಿ ಸ್ನಾತಕೋತ್ತರ ಪದವಿ ಪ್ರವೇಶಾತಿ ಪ್ರಾರಂಭಿಸಿದ್ದು, ನವೆಂಬರ್ 29ರಿಂದ ಡಿಸೆಂಬರ್ 08ರ ವರೆಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶವಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಡೀನ್ ಡಾ. ಲತಾ.ಎಂ.ಎಸ್ ಅವರು, ಪ್ರಸ್ತುತ ರಾವಿವಿಯ ಕೃಷ್ಣತುಂಗಾ ಮುಖ್ಯ ಆವರಣದಲ್ಲಿ ಇನ್ಸ್ಟ್ರುಮೆಂಟೇಶನ್ ಆ್ಯಂಡ್ ಟೆಕ್ನಾಲಜಿ, ಗ್ರಂಥಾಲಯ ವಿಜ್ಞಾನ ಹಾಗೂ ಸಮಾಜಕಾರ್ಯ ಸೇರಿದಂತೆ ವಿವಿಧ ನಾಲ್ಕು ವೃತ್ತಿಪರ ಕೋರ್ಸ್‌ಗಳನ್ನು ಒಳಗೊಂಡಂತೆ ಒಟ್ಟೂ 20 ವಿಭಾಗಗಳನ್ನು ನಡೆಸಲಾಗುತ್ತಿದೆ.
ಇದರಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಸ್ಥಾಪನೆಯಾಗಿ ಆರು ವರ್ಷಗಳು ಗತಿಸಿದ್ದು (ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಇದ್ದಾಗಿನಿಂದ), ಈವರೆಗೆ ಯಶಸ್ವಿಯಾಗಿ ನಾಲಕ್ಕು ಸ್ನಾತಕೋತ್ತರ ಬ್ಯಾಚುಗಳನ್ನು ಪೂರೈಸಿದೆ. ಪತ್ರಿಕೆಗಳು, ಟೆಲಿವಿಷನ್, ರೇಡಿಯೋ, ಸಿನೆಮಾ ಒಳಗೊಂಡಂತೆ ಮಾಧ್ಯಮ ಕ್ಷೇತ್ರ ಅತ್ಯಂತ ವಿಶಾಲವಾಗಿದ್ದು, ಇದರಲ್ಲಿ ವೃತ್ತಿ ಭವಿಷ್ಯವನ್ನು ಕಂಡುಕೊಳ್ಳಲು ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ಪಠ್ಯಕ್ರಮವನ್ನು ರೂಪಿಸಲಾಗಿದೆ.
ಕೋರ್ಸ್ ಬಳಿಕ ವಿದ್ಯಾರ್ಥಿಗಳು ತಮ್ಮ ಇಷ್ಟಕ್ಕೆ ತಕ್ಕಂತೆ ಮುದ್ರಣ ಮಾಧ್ಯಮ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮ ಕ್ಷೇತ್ರವನ್ನು ಆಯ್ದುಕೊಳ್ಳಬಹುದು. ಪತ್ರಿಕೋದ್ಯಮ ಕಲಿತವರಿಗೆ ಸರ್ಕಾರಿ ಅಥವಾ ಖಾಸಗಿ ರಂಗ ಸೇರಿದಂತೆ ಮಾರುಕಟ್ಟೆಯಲ್ಲಿ ನೂರಾರು ಉದ್ಯೋಗಾವಕಾಶಗಳಿದ್ದು, ಅಧ್ಯಾಪಕ, ಸಂಶೋಧಕ, ಸಾರ್ವಜನಿಕ ಸಂಪರ್ಕಾಧಿಕಾರಿ, ಮಾಧ್ಯಮ ಸಲಹೆಗಾರ, ವರದಿಗಾರ, ಉಪಸಂಪಾದಕ, ಫೋಟೋ ಜರ್ನಲಿಸ್ಟ್, ಕಾಪಿ ಎಡಿಟರ್, ಟಿವಿ ಆ್ಯಂಕರ್, ರೇಡಿಯೋ ಜಾಕಿ, ಅನುವಾದಕ, ಗ್ರಾಫಿಕ್ ಡಿಸೈನರ್, ಜಾಹಿರಾತು ತಯಾರಕ, ನಿರ್ದೇಶಕ, ನಿರ್ಮಾಪಕ, ಕ್ಯಾಮರಾ ಮೆನ್, ಇವೆಂಟ್ ಮ್ಯಾನೇಜರ್, ಯೂಟ್ಯೂಬರ್, ಸ್ಕ್ರಿಪ್ಟ್ ರೈಟರ್, ಸೋಶಿಯಲ್ ಮೀಡಿಯಾ ಮ್ಯಾನೇಜರ್ ಸೇರಿದಂತೆ ಹತ್ತು ಹಲವು ಉದ್ಯೋಗಗಳನ್ನು ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.
ಕನಿಷ್ಠ ಶೇ. 50 ಅಂಕಗಳೊಂದಿಗೆ ಯಾವುದೇ ವಿಷಯದಲ್ಲಿ ಪದವಿ (ST/SC/Cat-1 ಹಾಗೂ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಕನಿಷ್ಠ ಶೇ. 45 ಅಂಕಗಳು) ಪೂರೈಸಿರುವ ವಿದ್ಯಾರ್ಥಿಗಳು ಎಂಜೆಎಂಸಿ (ಮಾಸ್ಟರ್ ಆಫ್ ಜರ್ನಲಿಸಂ ಆ್ಯಂಡ್ ಮಾಸ್ ಕಮ್ಯೂನಿಕೇಶನ್) ಕೋರ್ಸಿಗೆ ಅರ್ಜಿ ಸಲ್ಲಿಸಬಹುದಾಗಿದು.
ಸರ್ಕಾರದ UUCMS ವೆಬ್ಸೈಟ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಕೆ ಬಳಿಕ ಮುದ್ರಿತ ಕಾಪಿ ಹಾಗೂ ಪದವಿ ಅಂಕಪಟ್ಟಿಗಳ ಜೆರಾಕ್ಸ್ ಪ್ರತಿಗಳನ್ನು ವಿಭಾಗಕ್ಕೆ ಸಲ್ಲಿಸಬೇಕಿದೆ. ಲಭ್ಯ ಸೀಟುಗಳು, ಮೀಸಲಾತಿ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿರುವ (https://raichuruniversity.ac.in) ಅಧಿಸೂಚನೆಯನ್ನು ಗಮನಿಸಬಹುದಾಗಿದೆ.