ರಾಯಚೂರು ವಿವಿಯಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ, ವಿಶೇಷ ಉಪನ್ಯಾಸ | ಜಗತ್ತಿಗೆ ವಿವೇಕ, ಜೀವನ ವಿಧಾನ ತಿಳಿಸಕೊಟ್ಟ ಶ್ರೇಷ್ಠ ಗ್ರಂಥ
ರಾಯಚೂರು: ರಾಮಾಯಣವನ್ನು ಕೇವಲ ಒಂದು ಕಾವ್ಯ ಅಥವಾ ಕಥೆ ಎಂದು ಭಾವಿಸುವುದು ಅಥವಾ ಹಾಗೆ ನೋಡು ವುದು ಸರಿಯಲ್ಲ. ಅದು ಜಗತ್ತಿಗೇ ವಿವೇಕವನ್ನು ಹಾಗೂ ಜೀವನ ವಿಧಾನವನ್ನು ತಿಳಿಸಿಕೊಟ್ಟ ಒಂದು ಮಹಾ, ಶ್ರೇಷ್ಟ ಗ್ರಂಥ ಎಂದು ನಾಡಿನ ಹೆಸರಾಂತ ಸಾಂಸ್ಕತಿಕ ಚಿಂತಕರು, ಬರಹಗಾರರು, ಸಂಶೋಧಕ ತುಮಕೂರಿನ ಎಸ್. ನಟರಾಜ ಬೂದಾಳು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಯಚೂರು ವಿಶ್ವವಿದ್ಯಾಲಯದ ಕೃಷ್ಣತುಂಗಾ ಸಭಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ರಾಮಾಯಣದಲ್ಲಿ ಬರುವ ಪ್ರತಿಯೊಂದು ಪಾತ್ರದ ಮೂಲಕವೂ ಒಂದೊಂದು ಜೀವನ ಸಂದೇಶವನ್ನು, ಆದರ್ಶವನ್ನು ಕಟ್ಟಿಕೊ ಡುವ ಕೆಲಸವನ್ನು ಆದಿಕವಿ ಮಹರ್ಷಿ ವಾಲ್ಮೀಕಿಯವರು ಮಾಡಿದ್ದಾರೆ. ಅದನ್ನು ಯಾವುದೋ ಒಬ್ಬ ರಾಜನ ಕಥೆ ಅಥವಾ ಯಾವುದೋ ಒಂದು ಮನೆತನದ ಕಥೆಯ ರೂಪದಲ್ಲಿ ಹೇಳಿಲ್ಲ. ಬದಲಾಗಿ ಪ್ರತಿಯೊಂದು ಪಾತ್ರದ ಮೂಲಕವೂ ಒಂದೊಂದು ಶ್ರೇಷ್ಟ-ಆದರ್ಶ ಸಂದೇಶವನ್ನು ನೀಡಲಾಗಿದೆ ಎಂದರು.
ಸಮಾಜದಲ್ಲಿ ತಾರತಮ್ಯಕ್ಕೆ ಒಳಗಾದ, ತಾತ್ಸಾರಕ್ಕೆ ಒಳಗಾದ ದಮನಿತ ಸಮುದಾಯದಿಂದಲೇ ಅನೇಕ ಮಹನೀಯರು ಹುಟ್ಟಿರುವುದಕ್ಕೆ ಈ ಜಗತ್ತು ಸಾಕ್ಷಿಯಾಗಿದೆ. ಅಂಥವರ ಸಾಲಿಗೆ ರಾಮಾಯಣ ಬರೆದ ವಾಲ್ಮೀಕಿ, ಮಹಾಭಾರತ ಬರೆದ ವೇದವ್ಯಾಸ, ಭಾರತಕ್ಕೆ ಸಂವಿಧಾನ ಬರೆದುಕೊಟ್ಟ ಅಂಬೇಡ್ಕರ್ ಆದಿಯಾಗಿ ಅನೇಕರು ಸೇರುತ್ತಾರೆ.
ರಾಮಾಯಣದಲ್ಲಿ ಬರುವ ಪ್ರತಿಯೊಂದು ಪಾತ್ರಕ್ಕೂ ತನ್ನದೇ ಆದ ಅಸ್ತಿತ್ವವಿದೆ ಜೊತೆಗೆ ಆ ಪಾತ್ರ ಜಗತ್ತಿಗೇ ಏನೋ ಒಂದು ಸಂದೇಶವನ್ನು ನೀಡುತ್ತಿರುವಂತಿದೆ. ಹಾಗಾಗಿ ಒಬ್ಬೊಬ್ಬರಿಗೆ ಒಂದೊಂದು ಪಾತ್ರ ಇಷ್ಟವಾಗುತ್ತದೆ. ಬಹುಶಃ ಇದೇ ಕಾರಣಕ್ಕೆ ಪಾತ್ರ ಆಧಾರಿತ ರಾಮಾಯಣಗಳೂ ಸೃಷ್ಟಿಯಾಗಿವೆ.
ರಾಮಾಯಣ ಕೇವಲ ಭಾರತಕ್ಕೆ ಮಾತ್ರ ಸೀಮಿತಗೊಳ್ಳದೇ, ವಿಶ್ವದ ವಿವಿಧ ನೆಲಗಳಲ್ಲಿ ಸಹ ಜನಪ್ರೀಯಗೊಂಡಿರುವುದು, ಬೇರೆ – ಬೇರೆ ರೂಪದ ಕಥೆಯಾಗಿ ರೂಪುತಾಳಿ ಆರಾಧಿಸಲ್ಪಡು ತ್ತಿರುವುದು ಅದರ ಹಿರಿಮೆ-ಗರಿಮೆಯನ್ನು ತೋರಿಸಿಕೊಡುತ್ತದೆ. ಹಾಗಾಗಿ ರಾಮಾಯಣ ಕೇವಲ ಕಾವ್ಯವಲ್ಲ, ಅದು ನಮ್ಮ ನೆಲದ ಸಾಂಸ್ಕೃತಿಕ ಅಸ್ಮಿತೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ (ಹಂಗಾಮಿ) ಡಾ. ಸುಯಮೀಂದ್ರ ಕುಲಕರ್ಣಿಯವರು ಮಾತನಾಡಿ, ಜಾತಿ, ಧರ್ಮ, ಲಿಂಗ ಮತ್ತು ಮತ ಸೇರಿದಂತೆ ಎಲ್ಲಾ ಬೇಧಗಳನ್ನು ಮೀರಿ ಬೆಳೆದವನೇ ಒಬ್ಬ ಶ್ರೇಷ್ಟ ವ್ಯಕ್ತಿಯಾಗಿ ಗುರುತಿಸಿಕೊಳ್ಳುತ್ತಾ ನೆ. ಆದಿ ಕವಿ ಮಹರ್ಶಿ ವಾಲ್ಮೀಕಿಯವರು ಅಂಥವರ ಸಾಲಿಗೆ ಸೇರಿದವರು. ಅವರು ತಮ್ಮ ರಾಮಾಯಣ ಗ್ರಂಥದ ಮೂಲಕ ಮನವೀಯತೆಯನ್ನು ಪ್ರತಿಪಾದಿಸಿದರೇ ವಿನಃ ಬೇರೇನನ್ನೂ ಅಲ್ಲ ಎಂದರು.
ಇಂದಿನ ನಮ್ಮ ಜಗತ್ತಿಗೆ ಬೇಕಿರುವುದೂ ಕೂಡ ಅದೇ. ನಾವಿಂದು ಮನುಷ್ಯನನ್ನು ಜಾತಿ ಆಧಾರಿತವಾಗಿ, ಧರ್ಮ ಆಧಾರಿತವಾಗಿ, ವರ್ಣ ಅಥವಾ ಲಿಂಗ ಆಧಾರಿತವಾಗಿ ತಾರತಮ್ಯ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಯಾವ ಧರ್ಮ ಅಥವಾ ಜಾತಿಯೋ ಇಲ್ಲ ಭಾರತದ ಪ್ರತಿ ಪ್ರಜೆಯಲ್ಲಿ ರುವ ವಂಶವಾಹಿಗಳೂ ಒಂದೇ ಮೂಲಕ್ಕೆ ಸೇರಿದವು ಎಂದು ಜೀವ ವಿಜ್ಞಾನ ಹೇಳುತ್ತದೆ. ಇದಕ್ಕೆ ಸಾಕಷ್ಟು ಪುರಾವೆಗಳೂ ಇವೆ ಮತ್ತು ಈ ಕುರಿತು ಸಂಶೋಧನಾ ಲೇಖನಗಳೂ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಟವಾಗಿವೆ. ಹಾಗಾಗಿ ಈ ಬಗೆಯ ಯಾವುದೇ ತಾರತಮ್ಯ ಸರಿಯಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜಕರು ಹಾಗೂ ಉಪಕುಲಸಚಿವರೂ ಆದ ಡಾ. ಕೆ.ವೆಂಕಟೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವ್ಯಕ್ತಿ ಎಂದರೆ ಹೀಗಿರಬೇಕು ಎಂಬುದಕ್ಕೆ ರಾಮ ಒಬ್ಬ ಶ್ರೇಷ್ಟ ಆದರ್ಶವಾದರೆ, ಆ ಪಾತ್ರದ ಸುತ್ತಲೂ ಇರುವ ವ್ಯಕ್ತಿಗಳು ಅಥವಾ ಸಂಬಂಧಗಳು ಕೂಡ ಒಂದೊಂದು ಆದರ್ಶವನ್ನೂ, ಒಳಿತು-ಕೆಡುಕಿನ ಸಂದೇಶವನ್ನೂ ಆ ಕಥೆಯ ಮೂಲಕವಾಗಿ ಸಾರುತ್ತವೆ.
ವಾಲ್ಮೀಕಿ ಮಹರ್ಶಿಗಳು ತಮ್ಮ ಸ್ವಂತ ಅನುಭವದ ರೀತಿಯಲ್ಲಿ, ಕಥೆಯಲ್ಲಿ ತಾವೂ ಒಂದು ಪಾತ್ರವಾಗಿ ಸಾಗಿರುವ ರೀತಿಯಲ್ಲಿ ರಾಮಾಯಣವನ್ನು ಬರೆದಿದ್ದಾರೆ. ಹಾಗಾಗಿ ರಾಮಾಯಣ ಒಂದು ಕಥೆಯಾಗಿ ಅಲ್ಲ, ಜೀವನ ಸಂದೇಶವಾಗಿ ನಮ್ಮ ಮುಂದೆ ತರೆದುಕೊಳ್ಳುತ್ತದೆ ಎಂದು ಹೇಳಿದರು.
ಕಾರ್ಯಕ್ರದಲ್ಲಿ ಗೌರವ ಉಪಸ್ಥಿತರಿದ್ದ ಮೌಲ್ಯಮಾಪನ ಕುಲಸವರಾದ ಪ್ರೊ. ಯರಿಸ್ವಾಮಿ.ಎಂ ಅವರು ತಮ್ಮ ಸ್ವಾಗತ ಭಾಷಣದಲ್ಲಿ ಮಾತನಾಡಿ, ತಮ್ಮ ರಾಮಾಯಣ ಗ್ರಂಥದ ಮೂಲಕ ವಿಶ್ವ ಮಾನವತೆಯ ಸಂದೇಶವನ್ನು ವಿಶ್ವಕ್ಕೇ ಸಾರಿರುವ ಮಹರ್ಶಿ ವಾಲ್ಮೀಕಿಯವರ ಹೆಸರನ್ನು ಸರ್ಕಾರ ನಮ್ಮ ರಾಯಚೂರು ವಿಶ್ವವಿದ್ಯಾಲಯಕ್ಕೆ ಇಟ್ಟಿರುವುದು ಖುಷಿ ಹಾಗೂ ಹೆಮ್ಮೆಯ ವಿಚಾರ. ಜಾತಿ, ಮತ, ಪಂಥಗಳಿಲ್ಲದ ಕಟ್ಟುವೆವು ಒಂದು ಹೊಸ ನಾಡೊಂದನಾ ಎನ್ನುವ ಆದರ್ಶದೊಂದಿಗೆ ವಿಶ್ವವಿದ್ಯಾಲಯ ಮುಂದೆ ಸಾಗಲು ಇದು ಸಹಕಾರಿಯಾಗಿದೆ. ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಹಾಗೂ ಸರ್ಕಾರಕ್ಕೆ ಧನ್ಯವಾದ ಹೇಳಿದರು.
ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ದುರುಗಪ್ಪ ಗಣೇಕಲ್ ನಿರೂಪಿಸಿದರು, ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಪನ್ನಗವೇಣಿ ಪ್ರಾರ್ಥನಾ ಗೀತೆ ಹಾಡಿದರು, ಮಹಿಳಾ ಅಧ್ಯಯನ ವಿಭಾಗದ ಉಪನ್ಯಾಸಕರಾದ ಡಾ. ಭೀಮೇಶ್ ನಾಯಕ್ ಅತಿಥಿ ಪರಿಚಯ ಮಾಡಿಕೊಟ್ಟರು ಮತ್ತು ಇಂಗ್ಲೀಷ್ ವಿಭಾಗದ ಉಪನ್ಯಾಸಕ ಅನೀಲ್ ಅಪ್ರಾಳ್ ವಂದಿಸಿದರು.
ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾದ ಡಾ. ಜಿ.ಎಸ್.ಬಿರಾದಾರ್, ವಿವಿಧ ನಿಕಾಯಗಳ ಡೀನರುಗಳಾದ ಪ್ರೊ. ಪಾರ್ವತಿ.ಸಿ.ಎಸ್, ಪ್ರೊ. ಭಾಸ್ಕರ್.ಪಿ, ವಿತ್ತಾಧಿಕಾರಿ ಡಾ. ಲತಾ.ಎಂ.ಎಸ್ ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಗಳು ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.