ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವ ವಿದ್ಯಾನಿಲಯ ನಾಮಕರಣ ವಿಧೇಯಕ ಅಂಗೀಕಾರ
ಬೆಳಗಾವಿ ಸುವರ್ಣಸೌಧ: ರಾಯಚೂರು ವಿಶ್ವ ವಿದ್ಯಾನಿಲಯಕ್ಕೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವ ವಿದ್ಯಾನಿಲಯ ಎಂದು ಮರು ನಾಮಕರಣ ಮಾಡುವ ವಿಧೇಯಕಕ್ಕೆ ಸೋಮವಾರ ವಿಧಾನ ಸಭೆಯಲ್ಲಿ ಅಂಗೀಕಾರ ದೊರೆತಿದೆ.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸೋಮವಾರ 2024ನೇ ಸಾಲಿನ ಕರ್ನಾಟಕ ರಾಜ್ಯ ವಿಶ್ವ ವಿದ್ಯಾನಿಲಯ ತಿದ್ದುಪಡಿ ವಿಧೇಯಕವನ್ನು ಸದನದಲ್ಲಿ ಪರ್ಯಾಲೋಚನೆಗೆ ಪ್ರಸ್ತಾಪಿಸಿದಾಗ, ಸದನ ಧ್ವನಿ ಮತದಿಂದ ವಿಧೇಯಕಕ್ಕೆ ಅಂಗೀಕಾರ ನೀಡಲಾಗಿದೆ.
ಈ ಹಿಂದೆ ರಾಯಚೂರು ವಿಶ್ವ ವಿದ್ಯಾನಿಲಯ ಎಂದು ಕರೆಯಲ್ಪಡುವ ವಿಶ್ವ ವಿದ್ಯಾನಿಲಯ ಇನ್ನೂ ಮುಂದೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವ ವಿದ್ಯಾನಿಲಯ ಮರು ನಾಮಕರಣ ಗೊಂಡಿದೆ. ಇದೇ ವೇಳೆ ಸಚಿವರು, ಚಾಣಕ್ಯ ವಿಶ್ವ ವಿದ್ಯಾಲಯ ತಿದ್ದುಪಡಿ ವಿಧೇಯಕ ಅನುಮೋದನೆಗೆ ಪ್ರಸ್ತಾಪಿಸಿದಾಗ ಯಾವುದೇ ಚರ್ಚೆ ಇಲ್ಲದೆ ಸದನ ಅಂಗೀಕರಿಸಿತು.
ಈ ವಿಧೇಯಕದ ಉದ್ದೇಶವೇನೆಂದರೆ ರಾಜ್ಯ ಸರ್ಕಾರ ಮೂಲಕದ ಸಂಬಂಧಪಟ್ಟ ಕ್ಷೇತ್ರದಿಂದ ವಿಶೇಷ ತಜ್ಞರನ್ನು ವಿಶ್ವ ವಿದ್ಯಾನಿಲಯ ಆಡಳಿತ ಮಂಡಳಿಗೆ ನಾಮ ನಿರ್ದೇಶನ ಮಾಡಲು ಅವಕಾಶ ಕಲ್ಪಿಸುವುದಾಗಿದೆ.
ವಿಧೇಯಕಗಳ ಮಂಡನೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೋಮವಾರ ವಿಧಾನ ಸಭೆ ಕಲಾಪದಲ್ಲಿ 2024ನೇ ಸಿವಿಲ್ ಪ್ರಕ್ರಿಯಾ ಸಂಹಿತೆ ಕರ್ನಾಟಕ ತಿದ್ದುಪಡಿ ವಿಧೇಯಕ ಹಾಗೂ ಕರ್ನಾಟಕ ಭೂ ಕಂದಾಯ 2024ರ 3ನೇ ತಿದ್ದುಪಡಿ ವಿಧೇಯಕವನ್ನು ಸದನದಲ್ಲಿ ಮಂಡಿಸಿದರು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿಯೇ ಈ ವಿಧೇಯಕಗಳು ಉಭಯ ಸದನಗಳ ಮುಂದೆ ಪರ್ಯಾಲೋಚನೆಗೆ ಬರಲಿವೆ.