ರಾಯಚೂರು ವಿವಿಯಲ್ಲಿ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ
ರಾಯಚೂರು : ಮೈತ್ರಿ-ಸೌಹಾರ್ದತೆ, ಸಹಕಾರ, ಸೇವಾ ಮನೋಭಾವ, ಸಹಜೀವನ ಗುಣಗಳನ್ನು ಮೈಗೂಡಿಸಿಕೊಳ್ಳಲು ಎನ್ಎಸ್ಎಸ್ ಶಿಬಿರ ಸಹಕಾರಿ ಎಂದು ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಹಪ್ರಾಧ್ಯಾಪಕ ಡಾ. ವೆಂಕಟೇಶ್.ಕೆ ಅಭಿಪ್ರಾಯಪಟ್ಟರು.
ರಾಯಚೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ (ಎನ್ಎಸ್ಎಸ್) ವಾರ್ಷಿಕ ವಿಶೇಷ ಶಿಬಿರ-2024 ನ್ನು ಉದ್ಘಾಟಿಸಿ ಮಾತನಾಡಿದರು.
ಶಿಬಿರ ಪರಸ್ಪರ ಒಬ್ಬರನ್ನೊಬ್ಬರು ಅರಿತು ಸಹಬಾಳ್ವೆ ನಡೆಸುವ ಮನೋಭಾವದ ಜೊತೆಗೆ ರಾಷ್ಟ್ರೀಯ ಭಾವೈಕ್ಯತೆಯನ್ನು ನಮ್ಮಲ್ಲಿ ಮೂಡಿಸುತ್ತದೆ. ವಿವಿಧತೆಯಲ್ಲಿ ಏಕತೆ ಎಂಬ ಆದರ್ಶವನ್ನು ಸಾಕಾರಗೊಳಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಸಚಿವ (ಮೌಲ್ಯಮಾಪನ) ಪ್ರೊ. ಯರಿಸ್ವಾಮಿ.ಎಂ ಮಾತನಾಡಿ, ತಾವು ವಾಸಿಸುವ ಸಮುದಾಯ ಹಾಗೂ ಸಮಾಜದ ಸಮಸ್ಯೆಗಳನ್ನು ಅರಿಯಲು ಎನ್ಎಸ್ಎಸ್ ಶಿಬಿರಗಳು ಸಹಕಾರಿಯಾಗಿದ್ದು, ಅಗತ್ಯತೆಗಳನ್ನು ಗುರುತಿಸಿ ತಾವು ಏನು ಮಾಡಬಹುದೆಂಬ ಆಲೋಚನೆ ಜೊತೆಗೆ ಸೇವೆಗೆ ಪ್ರೇರಣೆ ನೀಡುತ್ತದೆ.
ಸಂಘಟನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ಜೊತೆಗೆ ಉತ್ತಮ ನಾಯಕತ್ವ ಗುಣಗಳನ್ನು ರೂಢಿಸಿಕೊಳ್ಳಲು ಎನ್ಎಸ್ಎಸ್ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಸಕ್ರೀಯರಾಗಿ ಭಾಗವಹಿಸಿ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಹಾಗೂ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಜಿ.ಎಸ್.ಬಿರಾದಾರ್ ಅವರು ಪ್ರತಿಜ್ಞಾ ವಿಧಿಯನ್ನು ಬೋಧಿಸುವ ಜೊತಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಹಾಗೂ ಸ್ಯಯಂ ಸೇವೆ ಆದರ್ಶಗಳ ಅಡಿಯಲ್ಲಿ ಈ ಎನ್ಎಸ್ಎಸ್ ಸ್ಥಾಪನೆಯಾಗಿದ್ದು, ರಾಷ್ಟ್ರಾದ್ಯಂತ 800 ವಿಶ್ವವಿದ್ಯಾಲಯ ಹಾಗೂ 50 ಸಾವಿರ ಕಾಲೇಜುಗಳನ್ನೊಳಗೊಂಡಂತೆ 11 ಲಕ್ಷ ನೋಂದಾಯಿತ ಸ್ವಯಂ ಸೇವಕರನ್ನು ಈ ರಾಷ್ಟ್ರೀಯ ಸೇವಾ ಯೋಜನೆ ಒಳಗೊಂಡಿದೆ ಎಂದರು.
ಸದ್ಯ ರಾವಿವಿಯಲ್ಲಿ ಹಮ್ಮಿಕೊಳ್ಳಲಾಗಿರುವ ವಿಶೇಷ ಶಿಬಿರವು ನ.11 ರಿಂದ ನ.13 ರವರೆಗೆ ನಡೆಯಲಿದ್ದು, ಧ್ವಜಾರೋಹಣ, ಪ್ರಾರ್ಥನೆ, ಪಥಸಂಚಲನ, ಯೋಗ, ಶ್ರಮಾದಾನ, ಸಾಂಸ್ಕೃತಿಕ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ಪ್ರತಿನಿತ್ಯ ನಡೆಯಲಿವೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಹೇಂದ್ರ ಹಾಗೂ ಸಂಗಡಿಗರು ಎನ್ಎಸ್ಎಸ್ ಗೀತೆಯನ್ನು ಹಾಡಿದರು, ವಿದ್ಯಾರ್ಥಿಗಳಾದ ಮರಿಲಿಂಗಪ್ಪ ಹಾಗೂ ಶಿಲ್ಪಾ ನಿರೂಪಿಸಿದರು. ಕಾರ್ಯಕ್ರಮಾಧಿಕಾರಿ ನಾಗವೇಣಿ.ವಿ.ಸರೋದೆ ವಂದಿಸಿದರು.
ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಲತಾ.ಎಂ.ಎಸ್ ಹಾಗೂ ಇನ್ನೋರ್ವ ಕಾರ್ಯಕ್ರಮಾಧಿಕಾರಿ ಶಿವರಾಜ್ ಹರವಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಉಪನ್ಯಾಸಕರಾದ ಡಾ. ಪದ್ಮಜಾ ದೇಸಾಯಿ, ವಿಜಯ್ ಸರೋದೆ, ಡಾ. ಶರಣಪ್ಪ ಚಲುವಾದಿ, ಕೃಷ್ಣಾ, ದುರುಗಪ್ಪ ಗಣೇಕಲ್ ಸೇರಿದಂತೆ ಶಿಬಿರಾರ್ಥಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.