ರಾಯಚೂರು : ಭಾರತದಲ್ಲಿ ಚಳುವಳಿಗಳಿಗೆ ತನ್ನದೇ ಆದ ಇತಿಹಾಸವಿದೆ. ಅನೇಕ ಸಾಮಾಜಿ, ಆರ್ಥಿಕ ಮತ್ತು ರಾಜಕೀಯ ಪರಿವರ್ತನೆಗಳಿಗೆ ಇವು ಕಾರಣವಾಗಿವೆ. ಆದರೆ ಇತ್ತೀಚಿನ ರಾಜಕೀಯ ಇದಕ್ಕೆ ತದ್ವಿರುದ್ಧವಾಗಿದ್ದು, ಯಾವ ಚಳುವಳಿ-ಹೋರಾಟಗಳಿಗೂ ಕಿವಿಗೊಡದ, ಸ್ಪಂದಿಸದ ಅಮಾನವೀಯ ಪ್ರವೃತ್ತಿಯನ್ನು ಪಾಲಿಸುತ್ತಿರುವುದು ಇದು ಬಹುದೊಡ್ಡ ಅಪಾಯದ ಸಂಕೇತವಾಗಿದೆ. ಮುಂದೊಂದು ದಿನ ಇದೇ ನಡೆ ಕ್ರಾಂತಿಯ ಜ್ವಾಲೆ ಏಳಲು ಕಾರಣವಾಗಬಹುದು ಎಂದು ನಾಡಿನ ಧೀಮಂತ ರೈತಪರ ಹೋರಾಟಗಾರ ದಿವಂಗತ ಪ್ರೊ. ಎಂ.ಡಿ.ನಂಜುಂಡಸ್ವಾಮಿಯವರ ಪುತ್ರಿ ಹಾಗೂ ಕರ್ನಾಟ ರಾಜ್ಯ ರೈತ ಸಂಘಗಗಳ ಒಕ್ಕೂಟ ಮತ್ತು ರೈತ ಸೇನೆಯ ಸದಸ್ಯೆಯೂ ಆಗಿರುವ ಚುಕ್ಕಿ ನಂಜುಂಡಸ್ವಾಮಿ ಅಭಿಪ್ರಾಯಪಟ್ಟರು.
ರಾಯಚೂರು ವಿಶ್ವವಿದ್ಯಾಲಯದಲ್ಲಿ ‘ಭಾರತದಲ್ಲಿ ಸಾಮಾಜಿಕ ಚಳುವಳಿಗಳು’ ವಿಷಯ ಕುರಿತು ಇತ್ತೀಚಿಗೆ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಥಮ ವಿಚಾರ ಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವವಿರುವ ಯಾವುದೇ ದೇಶದಲ್ಲಾದರೂ ಹೋರಾಟಗಳು ಮಹತ್ವ ಪಡೆದಿರುತ್ತವೆ. ಇಂತಹ ಹೋರಾಟಗಳನ್ನು ಹತ್ತಿಕ್ಕಲು ಆಡಳಿತ ಪಕ್ಷಗಳು/ನಾಯಕರು ಅನೇಕ ತಂತ್ರಗಳನ್ನು ಬಳಸುತ್ತಾರಾದರೂ, ಅವುಗಳಿಗೆ ಸ್ಪಂಧಿಸದೇ ಇರುವುದು ಇದೆಯಲ್ಲ ಅದು ಮುಂದೊಂದು ದಿನ ಭಾರಿಯಾಗಿ ಪರಿಣಮಿಸುತ್ತದೆ.
ಇರುವವರಿಗೇ ಅನುಕೂಲ ಮಾಡಿಕೊಡುವ ಮನಸ್ಥಿತಿಯ ಸರ್ಕಾರಗಳಿಂದ ಪರಿವರ್ತನೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಅಂಥವರಿಂದ ದೊಡ್ಡ-ದೊಡ್ಡ ಕಾರ್ಪೋರೇಟ್ ಕಂಪನಿಗಳು, ಬಂಡವಾಳಶಾಹಿಗಳು ಬೆಳವಣಿಗೆ ಕಾಣುತ್ತವೇ ಹೊರತು ಜನಸಾಮಾನ್ಯರಲ್ಲ.
ಅತಿಹೆಚ್ಚು ಯುವಜನತೆಯನ್ನು ಹೊಂದಿರುವ ದೇಶ ನಮ್ಮದು ಎಂದು ಹೇಳುತ್ತೇವಾದರೂ, ಯುವಜನತೆಯ ಬದುಕಿಗೆ ಬೇಕಾದ ಎಲ್ಲಾ ಬಗೆಯ ಅನುಕೂಲ-ಸೌಕರ್ಯಗಳಿರುವ ದೇಶ ಭಾರತ ಎಂದು ಹೇಳುವುದಿಲ್ಲ. ಅದಕ್ಕಾಗಿ ನಾವು-ನೀವುಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಿದರು.
ವನ್ಯಜೀವಿ ಸಂಶೋಧಕರಾದ ಡಾ. ಅಬ್ದುಲ್ ಸಮದ್ ಕೊಟ್ಟೂರು ಅವರು ‘ಭಾರತದಲ್ಲಿ ಪರಸರ ಚಳುವಳಿಗಳು’ ವಿಷಯದ ಕುರಿತು ಮಾತನಾಡಿ, ಯಾವೆಲ್ಲಾ ಭೌಗೋಳಿಕ ಪ್ರದೇಶಗಳನ್ನು ನಾವು ಪ್ರಾಕೃತಿಕ ಸಂಪತ್ತು, ದೇಶದ ಆಸ್ತಿ ಅಂತ ಕರೆದಿದ್ದೇವೋ ಅವನ್ನು ಮಾರುವ, ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ-ಪರಿವರ್ತಿಸುವ ಕೆಲಸ ಒಂದಲ್ಲಾ ಒಂದು ಸಂದರ್ಭದಲ್ಲಿ ಆಳುವ ಸರ್ಕಾರಗಳಿಂದ/ಜನ ನಾಯಕರಿಂದ ಆಗಿವೆ. ಈ ರೀತಿ ಪ್ರಾಕೃತಿಕ ಸಂಪತ್ತಿಗೆ ಧಕ್ಕೆಯಾದಾಗಲೆಲ್ಲ ಅದನ್ನು ವಿರೋಧಿಸುವಲ್ಲಿ-ತಡೆಯುವಲ್ಲಿ ಪರಿಸರ ಚಳುವಳಿಗಳು ಸಹಕಾರ ನೀಡಿವೆ. ಈ ಬಗೆಯಲ್ಲಿ ದೇಶದ ರಕ್ಷಣೆ ಹಾಗೂ ಅಭಿವೃದ್ಧಿಯಲ್ಲಿ ಚಳುವಳಿಗಳೂ ಪ್ರಮುಖ ಪಾತ್ರ ವಹಿಸಿದ್ದು, ಅವುಗಳ ಹಿನ್ನೆಲೆ ಹಾಗೂ ಇತಿಹಾಸದ ಅಧ್ಯಯನದಿಂದ ಸಾಕಷ್ಟು ಮಹತ್ವದ ಸಂಗತಿಗಳ ಅರಿವಾಗುತ್ತದೆ ಎಂದು ಹೇಳಿದರು.
ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟಗಾರ್ತಿ ಮಾಳವಿಕ ಕನಕುಂಟ ಅವರು ‘ಭಾರತದಲ್ಲಿ ಲೈಂಗಿಕ ಅಲ್ಪಸಂಖ್ಯತರ ಹೋರಾಟಗಳು’ ವಿಷಯದ ಕುರಿತು ಮಾತನಾಡಿ, ಸಂವಿಧಾನದಲ್ಲಿ ಯಾವುದೇ ಬಗೆಯ ಅಸಮಾನತೆಗೆ ಅವಕಾಶವಿಲ್ಲವೆಂದು ಹೇಳಲಾಗಿದ್ದರೂ ಕೂಡ ಲೈಂಗಿಕ ಅಲ್ಪಸಂಖ್ಯಾತರು ವಿವಿಧ ಬಗೆಯ ಅಸಮಾನತೆಯನ್ನು ಸಮಾಜದಲ್ಲಿ ಇಂದಿಗೂ ಕೂಡ ಎದರಿಸುತ್ತಿರುವುದು ವಿಪರ್ಯಾಸದ ಸಂಗತಿ. ಮನುಷ್ಯರೆಂದರೆ ಬರಿ ಗಂಡು-ಹೆಣ್ಣು ಎಂದು ಪರಿಗಣಿಸುವ ಕಾಯ್ದೆ-ಕಾನೂನುಗಳು, ಇವೆರಡರ ಆಚೆಗೆ ತೃತೀಯ ಲಿಂಗಿಗಳೂ ಇದ್ದಾರೆಂಬುದನ್ನು ಮರೆಯುತ್ತದೆ. ಇದೇ ಕಾರಣಕ್ಕೆ ತೃತೀಯ ಲಿಂಗಿಗಳು ಸರ್ಕಾರದ ಅನೇಕ ಅವಕಾಶ-ಸವಲತ್ತುಗಳಿಂದ ವಂಚಿತವಾಗಿದೆ. ಇತ್ತೀಚಿಗೆ ಈ ಬಗ್ಗೆ ಜಾಗೃತಿ ಹೆಚ್ಚಾಗಿ, ಹೋರಾಟವನ್ನು ತೀವ್ರಗೊಳಿಸಿರುವುದರ ಫಲವಾಗಿ ಮೀಸಲಾತಿ ಸೇರಿದಂತೆ ಒಂದೊಂದೇ ಸವಲತ್ತನ್ನು ಪಡೆಯಲು ಸಾಧ್ಯವಾಗುತ್ತಿದೆ. ದೇಹ ಪ್ರಕೃತಿಯಲ್ಲಾದ ಬದಲಾವಣೆಯೇ ಹೆಣ್ಣು ಗಂಡಾಗಿ, ಗಂಡು ಹೆಣ್ಣಾಗಿ ಪರಿವರ್ತಿತರಾಗಲು ಕಾರಣ. ಇದು ನೈಸರ್ಗಿಕ. ಆದರೆ ಇದನ್ನು ಸ್ವೀಕರಿಸಲು ಸಿದ್ಧವಿಲ್ಲದ ಮನಸ್ಥಿತಿಗಳೇ ತೃತೀಯ ಲಿಂಗಿಗಳನ್ನು ಶೋಷಿಸುತ್ತಿರುವುದು ಮತ್ತು ಅವರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿರುವುದು ಎಂದು ಹೇಳಿದರು.
ಮಹಿಳಾ ಅಧ್ಯಯನ ವಿಭಾಗದ ಉಪನ್ಯಾಸಕ ಡಾ. ಭೀಮೇಶ್ ಅವರು ಗೋಷ್ಟಿಯನ್ನು ನಿರೂಪಿಸಿದರು. ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ನಾಗವೇಣಿ.ವಿ.ಸರೋದೆ ಮತ್ತು ಮಹಿಳಾ ಅಧ್ಯಯನ ವಿಭಾಗದ ಶಾಂತಾದೇವಿ ಪಾಟೀಲ್ ಇರ್ವರು ಅತಿಥಿಗಳ ಪರಿಚಯ ಮಾಡಿಕೊಟ್ಟರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಹರೀಶ್ ರಾಮಸ್ವಾಮಿ, ಕುಲಸಚಿವರಾದ ಡಾ. ಶಂಕರ್.ವಿ, ಮೌಲ್ಯಮಾಪನ ಕುಲಸಚಿವ ಪ್ರೊ. ಯರಿಸ್ವಾಮಿ.ಎಂ, ವಿಚಾರಗೋಷ್ಟಿ ಆಯೋಜನಾ ಸಮಿತಿಯ ಮುಖ್ಯಸ್ಥರು ಹಾಗೂ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರೂ ಆದ ಡಾ.ವೆಂಕಟೇಶ್.ಕೆ ಸೇರಿದಂತೆ ವಿಶ್ವವಿದ್ಯಾಲಯದ ಆಡಳಿತಾಧಿಕಾರಿಗಳು, ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ವಿವಿಧ ವಿಭಾಗಗಳ ಡೀನರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.