ಆಲಮಟ್ಟಿ – ಹುಣಸಗಿ – ಯಾದಗಿರಿ ರೈಲ್ವೆ ಮಾರ್ಗ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಸಂಸದ ಜಿ ಕುಮಾರ ನಾಯಕ ಸುಧೀರ್ಘ ಚರ್ಚೆ

ನವದೆಹಲಿ/ಯಾದಗಿರಿ: ಆಲಮಟ್ಟಿ- ಹುಣಸಗಿ- ಯಾದಗಿರಿ ಮಾರ್ಗವಾಗಿ ರೈಲು ಸಂಪರ್ಕ ಕಲ್ಪಿಸುವ ಕುರಿತು ರಾಯಚೂರು, ಯಾದಗಿರಿ ಲೋಕಸಭಾ ಸಂಸದರಾದ ಜಿ. ಕುಮಾರ ನಾಯಕ ಅವರು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರೊಂದಿಗೆ ಸುಧೀರ್ಘವಾಗಿ ಚರ್ಚಿಸಿದರು.

ಈ ಯೋಜನೆಗೆ ರಾಜ್ಯ ಸರ್ಕಾರದ ಸಹಕಾರ ಕುರಿತು ಮಾತನಾಡಲಾಗುವುದು ಎಂದು‌ ಸಂಸದರು ತಿಳಿಸಿದರು. ಈ ರೈಲ್ವೆ ಮಾರ್ಗದ ಉಪಯೋಗ ಹಾಗೂ ಇತಿಹಾಸದ ಹಿನ್ನಲೆ ಕುರಿತು ಮನವರಿಕೆ ಮಾಡಿ, ಆಲಮಟ್ಟಿ-ಹುಣಸಿಗಿ-ಯಾದಗಿರಿ ಮಾರ್ಗವಾಗಿ ರೈಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಅಂದಿನ ಬ್ರಿಟಿಷ ಆಡಳಿತದಲ್ಲಿಯೇ ಈ ರೈಲು ಮಾರ್ಗಕ್ಕೆ ನೀಲನಕ್ಷೆ ತಯಾರಿಸಿದ್ದರು.

ಈ ಐತಿಹಾಸಿಕ ಹಿನ್ನೆಲೆಯಿಂದ ಗುರುತಿಸಿಕೊಂಡಿರುವ ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆ ಈ ರೈಲು ಮಾರ್ಗ ಹೆಚ್ಚು ನೆರವಾಗಲಿದೆ. ವಿಜಯಪುರ ಮತ್ತು ಯಾದಗಿರಿ ನಡುವಣ ಪ್ರಸ್ತುತ ರೈಲು ಮಾರ್ಗದ ದೂರವು 338 ಕಿ.ಮೀಗಳಷ್ಟಿದೆ.

ಜನರು ಹೊಟಗಿ, ಕಲಬುರಗಿ ಮತ್ತು ವಾಡಿ ಮೂಲಕ ಯಾದಗಿರಿಗೆ ಪ್ರಯಾಣಿಸುತ್ತಿದ್ದಾರೆ. ಈ ಹೊಸ ರೈಲ್ವೆ ಮಾರ್ಗ ಅನುಷ್ಠಾನವಾದರೆ ಅಂದಾಜು 165–170 ಕಿ.ಮೀ ಸಂಚಾರ ಉಳಿಯಲಿದೆ. ವ್ಯವಹಾರ ವಹಿವಾಟಿಗೂ ಅನುಕೂಲವಾಗಲಿದೆ ಎಂದು ಮಾಹಿತಿ‌ ನಿಡಿದರು.

ಕರ್ನಾಟಕದ ಒಳನಾಡು ಮೀನು ಸಾಕಾಣಿಕೆಯಲ್ಲಿ ಹುಣಸಗಿ, ಸುರಪುರ, ಯಾದಗಿರಿ ಮುಂಚೂಣಿಯಲ್ಲಿವೆ. ಹೊಸ ಮಾರ್ಗ ಪ್ರಾರಂಭವಾದರೆ ಸಿಮೆಂಟ್ ಮತ್ತು ಇತರ ನಿರ್ಮಾಣ ಸಾಮಗ್ರಿಗಳ ಸಾಗಣೆ ಮತ್ತು ಕೃಷಿ ಉತ್ಪನ್ನಗಳ ಸಾಗಣೆ ಸೇರಿ ಇನ್ನೀತರ ವ್ಯವಹಾರ, ವಹಿವಾಟು‌ ಹಾಗೂ ಸರಕುಸಾಗಾಣಿಕೆಯ ಜೊತೆಗೆ ಈ ಭಾಗದ ಅರ್ಥಿಕ ವೃದ್ಧಿಗೆ‌ ನಾಂದಿಯಾಗಿ ಹಿಂದುಳಿದ ಹಣೆಪಟ್ಟಿ ಕಳಚುವ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಆಲಮಟ್ಟಿ, ಯಾದಗಿರಿ ರೈಲು ಮಾರ್ಗ ಪ್ರಾರಂಭಿಸುವ‌ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿವೆ. ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಇಲ್ಲಿನ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯವಾಗಬೇಕಿದೆ. ಈ ಭಾಗದ ಬಹುತೇಕ ರೈತರಿಗೆ ಮತ್ತು ಜನಸಾಮನ್ಯರಿಗೆ ಸುಲಭ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು‌ ಮನವಿ‌ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Spread the love

Leave a Reply

Your email address will not be published. Required fields are marked *

error: Content is protected !!