ಯಾದಗಿರಿಧ್ವನಿ.ಕಾಮ್ ಫಾಲೋಆಪ್ | ಕಸಾಯಿ ಖಾನೆ ನಿರ್ಮಾಣಕ್ಕೆ ಬೇಕಿದೆ ಸಿಎ ಸೈಟ್
ಗುರುಮಠಕಲ್: ಪಟ್ಟಣದ ಬಸ್ ನಿಲ್ದಾಣ ಮಾರ್ಗದಿಂದ ಕಾಕಲವಾರ ರಸ್ತೆ ವರೆಗೆ ತಲೆ ಎತ್ತಿರುವ ಮಾಂಸದ ಅಂಗಡಿಗಳು ಅನಾಧಿಕೃತ ಎಂದು ಪುರಸಭೆ ಮುಖ್ಯಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಪುರಸಭೆಯಿಂದ ಮಾಂಸದ ಅಂಗಡಿಗಳಿಗೆ ಯಾವುದೇ ಪರವಾನಿಗೆ ನೀಡಿಲ್ಲ ಎನ್ನುವ ಅಂಶ ಇದೀಗ ದೃಢಪಟ್ಟಿದೆ.
ಆದರೂ ರಸ್ತೆ ಉದ್ದಕ್ಕೂ ಮಾಂಸದ ಅಂಗಡಿ ರಾಜರೋಷವಾಗಿ ನಡೆಯುತ್ತಿರುವುದು ಇದರಿಂದ ಸಾರ್ವಜನಿಕರು, ಸಸ್ಯಹಾರಿಗಳು ತೀವ್ರ ಹಿಂಸೆ ಅನುಭವಿಸುವಂತಾಗಿದೆ.
ಮಾಂಸದ ಅಂಗಡಿಗಳಿಂದಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವವರಿಗೆ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಸಾಗಬೇಕಿದೆ.
ಈ ಬಗ್ಗೆ ನವೆಂಬರ್ 22 ರಂದು ಯಾದಗಿರಿಧ್ವನಿ.ಕಾಮ್ ವರದಿ ಪ್ರಕಟಿಸಿತ್ತು. ಕಸಾಯಿ ಖಾನೆ ಇಲ್ಲದಿರುವುದು ರಸ್ತೆ ಉದ್ದಕ್ಕೂ ಮಾಂಸ ಮಾರಾಟ ಮಾಡುವ ಅನಿವಾರ್ಯತೆ ಎದುರಾಗಿದೆ ಎನ್ನುವ ಅಂಶವೂ ಬೆಳಕಿಗೆ ಬಂದಿದೆ.
ರಸ್ತೆ ಬದಿಯ ಮಾಂಸದ ಅಂಗಡಿ ಪುರಸಭೆ ಹರಾಜು ಪ್ರಕ್ರಿಯೆಗೆ ಒಳಪಡಿಸಿದ್ದು, ಸ್ವಚ್ಛತೆ ಕಾಪಾಡುವ ನಿರ್ದೇಶನ ನೀಡಲಾಗಿದೆ. ಅಲ್ಲದೇ ತ್ಯಾಜ್ಯವನ್ನು ಸಹ ಪುರಸಭೆ ನಿರ್ವಹಣೆ ಮಾಡಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.
ಪುರಸಭೆಯಿಂದ ಎಂಟು ವರ್ಷಗಳ ಹಿಂದೆಯೇ ಮಾಂಸ ಮಾರಾಟಕ್ಕೆ ಎಂದು 5 ಮಳೆಗೆಗಳನ್ನು ನಿರ್ಮಾಣ ಮಾಡಲಾಗಿದೆ ಆದರೆ ಅವು ನಿರುಪಯುಕ್ತವಾಗಿರುವುದು ವಿಪರ್ಯಾಸವೇ ಸರಿ.
ಸಾರ್ವಜನಿಕದಿಗೆ ಆಗುತ್ತಿರುವ ಹಿಂಸೆಯನ್ನು ತಡೆಯಲು ಸರ್ವೇ 25 ರಲ್ಲಿ 5 ವಾಣಿಜ್ಯ ಮಳಿಗೆ ನಿರ್ಮಿಸಿರುವುದನ್ನು ಬಳಕೆ ಮಾಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಪುರಸಭೆ ಆದಾಯಕ್ಕೆ ಖೋತಾ: ಪಟ್ಟಣದ ಮುಖ್ಯ ರಸ್ತೆಯುದ್ದಕ್ಕೂ ಅತಿಕ್ರಮಣ ಮಾಡಿ ಪ್ರಭಾವಿಗಳು ಶೆಡ್ ಹಾಕಿ ಸರ್ಕಾರಿ ಸ್ಥಳವನ್ನು ದುರುಪಯೋಗ ಪಡಿಸಿಕೊಂಡು ಬಾಡಿಗೆಗೆ ನೀಡಿದ್ದಾರೆ. ಬಸ್ ನಿಲ್ದಾಣ ಹೊರಾಂಗಣವೂ ಅತಿಕ್ರಮಣವಾಗಿದೆ. ಈ ಸ್ಥಳದಲ್ಲಿ ಪುರಸಭೆಯೇ ಶೆಡ್ ನಿರ್ಮಾಣ ಮಾಡಿ ಬಾಡಿಗೆಗೆ ನೀಡಿದರೆ ಇದರಿಂದ ಆದಾಯ ಪಡೆಯಬಹುದು ಎನ್ನುವ ಆಲೋಚನೆ ಮಾತ್ರ ಸ್ಥಳೀಯ ಸಂಸ್ಥೆಗೆ ಇಲ್ಲ. ಹಾಗಾಗಿ ಆದಾಯಕ್ಕೆ ಕತ್ತರಿ ಬೀಳುತ್ತಿದೆ ಎನ್ನುವ ಮಾತು ಕೇಳಿ ಬಂದಿದೆ.
ಪುರಸಭೆ ವ್ಯಾಪ್ತಿಯಲ್ಲಿ ರಸ್ತೆ ಬದಿ ಮಾಂಸದ ಅಂಗಡಿಗಳ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ. ಪ್ರತ್ಯೇಕ ಮಾಂಸ ಮಾರುಕಟ್ಟೆ ಇಲ್ಲ. ಇದಕ್ಕೆ ಸಿಎ ಸೈಟ್ ಬೇಕಾಗುತ್ತದೆ. ಪುರಸಭೆ ಸಾಮಾನ್ಯ ಸಭೆಯಲ್ಲಿ ವಿಷಯ ಜನಪ್ರತಿನಿಧಿಗಳ ಗಮನಕ್ಕೆ ತಂದು ಚರ್ಚಿಸಿ ಸೂಕ್ತ ಕ್ರಮ ವಹಿಸಲಾಗುವುದು – ಭಾರತಿ ದಂಡೋತಿ, ಮುಖ್ಯಾಧಿಕಾರಿಗಳು.