ಅವಾಚ್ಯ ಶಬ್ದಗಳ ಬಳಕೆ ಖಂಡಿಸಿ ಕೆಪಿಸಿಸಿ ಪರಿಶಿಷ್ಟ ಪಂಗಡ ರಾಜ್ಯ ಪ್ರಧಾನ ಕಾರ್ಯದರ್ಶಿಯಿಂದ ದೂರು
ಯಾದಗಿರಿ: ಕಾಂಗ್ರೆಸ್ ಪಕ್ಷದ ಜನಪ್ರಿಯ ನಾಯಕ ಸತೀಶ ಎಲ್. ಜಾರಕಿಹೊಳಿ ಹಾಗೂ ಇತರರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ವೈಷಮ್ಯ ಹರಡುವಂತೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹರಿಬಿಟ್ಟ ಕಿಡಿಗೇಡಿ ವಿರುದ್ಧ ಯಾದಗಿರಿಯಲ್ಲಿ ದೂರು ಸಲ್ಲಿಕೆಯಾಗಿದೆ.
ತನ್ನ ಫೇಸಬುಕ್, ಇನ್ಸ್ಟಾ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಬಿಟ್ಟು ಕಾನೂನು ಶಾಂತಿ ಸುವ್ಯಸ್ಥೆಗೆ ಭಂಗ ಉಂಟು ಮಾಡುತ್ತಿರುವ ತುಮಕೂರು ಮೂಲದ ಮೋಹಿತ್ ನರಸಿಂಹ ಮೂರ್ತಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಕೆಪಿಸಿಸಿ ಪರಿಶಿಷ್ಟ ಪಂಗಡ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ದೊರೆ ಆಲ್ದಾಳ ಸುರಪುರ ದೂರು ನೀಡಿದ್ದಾರೆ.
ಯಾದಗಿರಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿದ ಕಾಂಗ್ರೆಸ್ ನಿಯೋಗ ಎಸ್ಪಿ ಅವರನ್ನು ಭೇಟಿಯಾಗಿ ದೂರು ನೀಡಿದ್ದಾರೆ. ತುಮಕೂರಿನ ಮೋಹಿತ್ ನರಸಿಂಹ 2024ರ ನ.23ರಂದು ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆ ಸಚಿವ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಎಲ್. ಜಾರಕಿಹೊಳಿ ರವರ ಬಗ್ಗೆ ಅವಾಚ್ಯ ಶಬ್ದ ಬಳಸಿ, ಜಾತಿ ವೈಷಮ್ಯ ಹರಡುವಂತೆ ಮಾಡಿ, ಜಾರಕಿಹೊಳಿರವರ ಕಾರ್ಯಗಳನ್ನು ನಿರುತ್ಸಾಹಗೊಳಿಸಿ ಅವರು ಹಾಗೂ ಅವರ ಕುಟುಂಬದ ಸದಸ್ಯರನ್ನು ವೈಯುಕ್ತಿಕವಾಗಿ ಬೈದು 2 ನಿ.9 ಸೆಕೆಂಡಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ.
ಸದರಿ ಈ ವಿಡಿಯೋ ಕರ್ನಾಟಕ ರಾಜ್ಯದ್ಯಾಂತ ಅವರ ರಾಜಕೀಯ ಎದುರಾಳಿಗಳು ಡೌನಲೋಡ್ ಮಾಡಿಕೊಂಡಿರು ವುದಲ್ಲದೇ ಸುಳ್ಳು ಸುದ್ದಿ ಪ್ರಚಾರ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರು ತಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅದಲ್ಲದೇ ಕಾಂಗ್ರೆಸ್ ಪಕ್ಷದ ಕೇಂದ್ರದ ನಾಯಕ, ಮುಖ್ಯಮಂತ್ರಿ, ಗೃಹ ಹಾಗೂ ವಸತಿ ಸಚಿವರರು ಸೇರಿದಂತೆ ಹಲವು ನಾಯಕರುಗಳನ್ನು ಗುರಿಯಾಗಿಸಿಕೊಂಡು ತನ್ನ ಮನಸ್ಸಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಈತನ ದುರುಪಯೋಗಪಡಿಸಿಕೊಂಡು ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿದ್ದಾನೆ. ಹಾಗಾಗಿ ಸೂಕ್ತ ಕಾನೂನು ಕ್ರಮ ವಹಿಸಲು ಮನವಿ ಮಾಡಿದ್ದಾರೆ.
ಈ ವೇಳೆ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದರ್ಶನ ನಾಯಕ, ಡಾ. ಭೀಮಣ್ಣ ಮೇಟಿ, ಲಕ್ಷ್ಮಣ ರಾಠೋಡ, ವೆಂಕಟೇಶ, ಅಬ್ದುಲ್ ಅತ್ತಾರ, ಭೀಮರಾಯ ಠಾಣಗುಂದಿ ಇತರರು ಇದ್ದರು.