ಎಲ್ಲೆಡೆ ಸಂಕ್ರಾಂತಿಯ ಸಂಭ್ರಮ… !
ಸಂಪ್ರದಾಯಗಳಿಂದ ಸಂಬಂಧ ಸುಧಾರಿಸುವಲ್ಲಿ ಪ್ರಾಚೀನ ಭಾರತೀಯರ ದೂರದೃಷ್ಟಿ ಫಲವಾಗಿ ಕುಟುಂಬದ ಸದಸ್ಯರು ಒಟ್ಟಾಗಿ ದಿನದಲ್ಲಿ ಅಥವಾ ತಿಂಗಳಲ್ಲಿ ಒಂದೆರಡು ಸಲ ಒಂದಿಲ್ಲೊಂದು ಸಂಪ್ರದಾಯಗಳ ಪಾಲನೆ, ಪೂಜೆ, ದೇವಸ್ಥಾನ ಗಳಿಗೆ ಭೇಟಿ, ಸಹ ಭೋಜನ ಇತ್ಯಾದಿ ಮೂಲಕ ಪರಸ್ಪರರಲ್ಲಿ ಆತ್ಮೀಯತೆ ಸಹಜವಾಗಿ ಚಿಗುರುವಂತಾಗುತ್ತಿತ್ತು.
ಹದಿನೈದು ದಿನಕ್ಕೊಮ್ಮೆ ಬರುವ ಹುಣ್ಣಿಮೆ, ಅಮವಾಸ್ಯೆ ಯುಗಾದಿ, ನಾಗರಪಂಚಮಿ, ವಿಜಯ ದಶಮಿ, ದೀಪಾವಳಿ, ಸಂಕ್ರಾಂತಿಯಂತಹ ಮುಖ್ಯ ಹಬ್ಬಹರಿದಿನಗಳನ್ನು ಹತ್ತಿರದ ರಕ್ತಸಂಬಂಧಿಗಳ ಜೊತೆ ಒಟ್ಟಾಗಿ ಆಚರಿಸಬೇಕು ಎಂಬ ಅಲಿಖಿತ ನಿಯಮ ಸಂಬಂಧಗಳ ಬಳ್ಳಿ ಹರವಾಗಿ ಹರಡಲು ಸಹಕಾರಿಯಾಗಿದೆ.
ಆಚರಿಸುವ ಪದ್ಧತಿಯಿಂದ ಸಂಬಂಧಿಗಳಲ್ಲಿ ಸೌಹಾರ್ದ ಸಂಬಂಧ ತಾನಾಗಿ ಅರಳುತ್ತಿತ್ತು. ಪರಸ್ಪರ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕು ಎಂಬ ಭಾವ ನೆ ಬೆಳೆಯುತ್ತಿತ್ತು. ಬದುಕಿನಲ್ಲಿ ಬರುವ ಬದಲಾವಣೆ (ಕಷ್ಟ ಸುಖ) ಗಳನ್ನು ರಚನಾತ್ಮಕವಾಗಿ ಸ್ವೀಕರಿಸಬೇಕು. ಮನಷ್ಯನಿಗೆ ಹಣಕ್ಕಿಂತ ಸಂಬಂಧ ಮೂಖ್ಯವೆಂಬ ಭಾವನೆ ಸಂಕ್ರಾಂತಿ ಹೊಸ ವರ್ಷ ಹಬ್ಬದ ಆಚರಣೆಯಲ್ಲಿದೆ.
ಭರ್ಜರಿ ಭೋಜನ, ಹಾಸ್ಯ, ಸೌಂದರ್ಯಪ್ರಜ್ಞೆ ಜೊತೆಗೆ ಸಂಬಂಧ ಸುಧಾರಿಸುವ, ಬೆಳೆಸುವ, ಗಟ್ಟಿಗೊಳಿಸುವ ಸೂತ್ರವಿದೆ. ಉದ್ಯೋಗ ನಿರ್ಮಿಸುವ ಆರ್ಥಿಕ ಚಿಂತನೆ ಇದೆ. ಸ್ವಾವಲಂಬಿ, ಸ್ವಾಭಿಮಾನಿ ಬದುಕಿನ ಸಂದೇಶವಿದೆ. ಮೇಲಾಗಿ ಋತುಮಾನಗಳಿಗರ ಅನುಗುಣವಾಗಿ ಬರುವ ಹಬ್ಬಗಳ ಆಹಾರ ವಿಹಾರ ವಿಧಾನಗಳಲ್ಲಿ ಸ್ವಸ್ಥ ಆರೋಗ್ಯದ ಪರಿಕಲ್ಪನೆ ಇದೆ. ಮೇಲಾಗಿ ಸಂಬಂಧ ಸುದಾರಿಸುವ ಎಲ್ಲ ಸುವಿಚಾರಗಳು ಸಂಕ್ರಾಂತಿ ಹೊಸ ವರುಷದ ಆಚರಣೆಯಲ್ಲಿವೆ.
ಕೃಷಿಕರ ಹಬ್ಬ : ಸಂಕ್ರಾಂತಿ ವಾಸ್ತವವಾಗಿ ಕೃಷಿಕರ ಹಬ್ಬ. ಒಂದೆಡೆ ಮುಂಗಾರು ಬೆಳೆ ಮನೆಗೆ ಬಂದ ಸಂಭ್ರಮ ಆಚರಣೆ ಮತ್ತೊಂದೆಡೆ ಹಿಂಗಾರುಬೆಳೆ ಹೊಲದಲ್ಲಿ ನಳನಳಿಸುತ್ತಿರುವು ದನ್ನು ಕಣ್ಣಾರೆ ಕಂಡು ಸಂಭ್ರಮ ಕೃಷಿಕರದ್ದಾಗಿದೆ. ದನಕರುಗಳಿಗೆ ವಿಶೇಷವಾಗಿ ಎತ್ತುಗಳಿಗೆ ಸ್ನಾನ ಮಾಡಿಸಿ ಶೃಂಗರಿಸಿ ಚಕ್ಕಡಿ ಕಟ್ಟುತ್ತಾರೆ. ಮನೆಯವರೆಲ್ಲ ಎಳ್ಳು ಮೈಗೆ ಲೇಪಿಸಿ ಕೊಂಡು ಅಭ್ಯಂಜನ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸುತ್ತಾರೆ. ಬಂಧು ಮಿತ್ರ ರೊಡಗೂಡಿ ಹೊಲಕ್ಕೆ ಹೋಗಿ ಭೂತಾಯಿ ಪೂಜಿಸಿ, ಆಟ, ಹಾಡು, ನೃತ್ಯ ಮಾಡಿ ಸಂತೋಷ ಪಡುತ್ತಾರೆ. ಮನೆಯಿಂದ ತಂದ ಬುತ್ತಿ ಬಿಚ್ಚಿ ವಿವಿಧ ಭಕ್ಯಗಳನ್ನು ಸವಿಯುತ್ತಾರೆ.
ಯಾದಗಿರಿ ತಾಲ್ಲೂಕಿನ ಮೈಲಾಪೂರದ ಮಲ್ಲಯ್ಯನ ಜಾತ್ರೆ ಪ್ರದೇಶದವರಿಗೆಲ್ಲ ಸಂಭ್ರದ ಉತ್ಸವ. ಹೊಲಕ್ಕೆ ಹೋಗಿ ಬಂದ ಮೇಲೆ ಜಾತ್ರೆಗೆ ಹೋಗಿ ಮಲ್ಲಯ್ಯನ ದರ್ಶನ ಮಾಡುತ್ತಾರೆ. ಮೈಲಾಪೂರದ ಕೆರೆಯಲ್ಲಿ ಅರಳಿದ ಕಮಲಗಳನ್ನು ನೋಡುವು ದೇ ಕಣ್ಣಿಗೆ ಹಬ್ಬ. ಗುಡಿಯ ಶಿಖರದ ಮೇಲೆ ತುಪ್ಪದ ದೀಪ, ಸರಪಳಿ ಹರಿಯುವುದು. ಇತ್ಯಾದಿ ಕಣ್ತುಂಬ ನೋಡುವುದು ಸಂಕ್ರಾಂತಿ ಸಡಗರ ಮಹತ್ವದ ಘಟ್ಟವಾಗಿದೆ.
ಯಾದಗಿರಿ ನಗರದ ಶ್ರೀ ರಾಚೋಟಿ ವೀರಣ್ಣನ ಭಕ್ತರಿಗೆ ಸಂಕ್ರಾಂತಿ ದಿನ ಶ್ರೀ ರಾಚೋಟಿ ವೀರಣ್ಣ , ಭಧ್ರಕಾಳಿಯವರ ವಾರ್ಷಿಕ ವಿವಾಹ ಮಹೋತ್ಸವದ ಸಂಭ್ರಮ ದಿನ. ಅಂದು ಸಂಜೆ ನಡೆಯುವ ಕಲ್ಯಾಣೋತ್ಸವದಲ್ಲಿ ಭಾಗಿಯಾಗುವುದರಿಂದ ತಮ್ಮ ಮನೆಯಲ್ಲಿ ಸಹ ಮಂಗಲ ಕಾರ್ಯಗಳು, ಮದುವೆ ನಡೆಯುತ್ತವೆ ಎಂಬ ನಂಬಿಕೆ ಇದೆ. ಸಂತೋಷ, ಸಂಭ್ರಮ, ಉತ್ಸಾಹಗಳನ್ನು ವರ್ಧಿಸುವ ಸಂಕ್ರಾಂತಿಯನ್ನು ಆನಂದದಿ ಆಚರಿಸುತ್ತ ದಿನದ ಪ್ರತಿ ಕ್ಷಣವನ್ನು ಸಂಭ್ರಮಿಸೋಣ. – ಮಹಾದೇವಯ್ಯ ಕರದಳ್ಳಿ.