ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದಿಂದ ಶಹಾಪುರ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ
ಶಹಾಪುರ: ಇಲ್ಲಿನ ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದ ವತಿಯಿಂದ ಈ ತಾಲೂಕಿನಾದ್ಯಂತ ಅಕ್ರಮವಾಗಿ ಹತ್ತಿ ಖರೀದಿ ಕೇಂದ್ರಗಳು ದಿನೇ ದಿನೇ ಹೆಚ್ಚಾಗುತ್ತಿರುವ ಬಗ್ಗೆ ಕ್ರಮವಹಿಸಿ ರೈತರಿಗೆ ನ್ಯಾಯ ಒದಗಿಸಲು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಶಹಾಪುರದಿಂದ ಯಾದಗಿರಿ ಮಾರ್ಗ, ಶಹಾಪುರದಿಂದ ಕಲಬುರಗಿ ಮಾರ್ಗ ಹಾಗೂ ಶಹಾಪುರದಿಂದ ಸುರಪುರ ಮಾರ್ಗ ಮಧ್ಯೆದಲ್ಲಿ ಇಂತಹ ಅಕ್ರಮ ಹತ್ತಿ ಕೇಂದ್ರಗಳು ತಲೆ ಎತ್ತಿವೆ. ನಮ್ಮ ತಾಲ್ಲೂಕಿನಲ್ಲಿ ಕೆಲವರು ಸರ್ಕಾರದ ನಿಯಮಾನುಸಾರ ಪರವಾನಗಿ ಪಡೆಯದೇ ಅಕ್ರಮವಾಗಿ ಹತ್ತಿ ಖರೀದಿ ಕೇಂದ್ರಗಳನ್ನು ಆರಂಭಿಸಿ ರೈತರ ಶೋಷಣೆಗೆ ಕಾರಣರಾಗುತ್ತಿದ್ದಾರೆ ಎಂದು ಸಂಘ ಮನವಿಯಲ್ಲಿ ಉಲ್ಲೇಖಿಸಿದೆ.
ಇಂತಹ ಅಕ್ರಮ ಕೇಂದ್ರಗಳಲ್ಲಿ ತೂಕದ ಅಕ್ರಮ, ಕಡಿಮೆ ದರ ನೀಡುವುದು ಹಾಗೂ ರೈತರ ಶ್ರಮದ ಫಲಕ್ಕೆ ನ್ಯಾಯ ನೀಡದ ಪರಿಸ್ಥಿತಿ ಉಂಟಾಗಿದೆ. ರೈತರು ಈಗಾಗಲೇ ಅತಿವೃಷ್ಟಿಯಿಂದ ಬೆಳೆಹಾನಿಯಾಗಿ ರೈತರು ಸಾಲದಲ್ಲಿ ಬೆಳೆದ ಅಲ್ಪಸ್ವಲ್ಪ ಬೆಳೆಗೆ ಸರಿಯಾದ ಬೆಲೆ ಸಿಗುವಂತಾಗಲಿ. ರೈತರು ಇಂತಹ ಅಕ್ರಮ ಹತ್ತಿ ಕೇಂದ್ರಗಳಿಗೆ ಯಾವುದೇ ಭದ್ರತೆಯಿಲ್ಲದೇ ಮಾರಾಟ ಮಾಡುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಅವರು ಪರಾರಿಯಾದರೆ ಯಾರು ಹೊಣೆ ಎಂದು ತಿಳಿಯುತ್ತಿಲ್ಲ. ಇದರಿಂದ ಅಕ್ರಮ ಹತ್ತಿ ಮಾರಾಟ ಮಾಡುವವರಿಗೆ ಯಾರು ಕೇಳುವವರಿಲ್ಲದಂತಾಗಿದೆ. ಹೀಗಾಗಿ ಸರಕಾರದಿಂದಲೇ ಹೊಸ ಹತ್ತಿ ಮಾರಾಟ ಕೇಂದ್ರವನ್ನು ಸ್ಥಾಪಿಸಬೇಕು. ಅಕ್ರಮ ಹತ್ತಿ ಕೇಂದ್ರಗಳಿಗೆ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಇಂತಹ ಅಕ್ರಮ ಹತ್ತಿ ಖರೀದಿ ಕೇಂದ್ರಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿದ್ದಾರೆ.
ಕೂಡಲೇ ಬೆಂಬಲ ಬೆಲೆ ಕ್ವಿಂಟಲ್ಗೆ 15 ಸಾವಿರ ನಿಗದಿಪಡಿಸಿ ರೈತರಿಗೆ ಬೆನ್ನೆಲುಬಾಗಿ ನಿಲ್ಲಬೇಕೆಂದು ಎಂದಿದ್ದಾರೆ. ಈ ಸಂಧರ್ಭದಲ್ಲಿ ಪ್ರದೀಪ ಅಣಬಿ, ಭೋಜಪ್ಪ ಮುಂಡಾಸ, ಅಂಬ್ರೇಶ ಶಿರವಾಳ, ಸುರೇಶ ಹಳಿಸಗರ ಇನ್ನಿತರ ಸಂಘದ ಸದಸ್ಯರು ಹಾಜರಿದ್ದರು.
