ಶಹಾಪುರ: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಾಮಾಜಿಕ ಅರಣ್ಯ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವಲಯ ಅರಣ್ಯಾಧಿಕಾರಿಯನ್ನು ಅಮಾನತುಗೊಳಿಸಿ, ಅವರು ನಿರ್ವಹಿಸಿದ ಕಾಮಗಾರಿ ತನಿಖೆಗೆ ಒಳಪಡಿಸಬೇಕು ಎಂದು ಶಹಾಪುರ ತಹಸೀಲ್ದಾರರ ಮೂಲಕ ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದ ಪ್ರಮುಖರು  ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಸಾಮಾಜಿಕ ಅರಣ್ಯ ವಲಯ ಶಹಾಪುರನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಲಯ ಅರಣ್ಯಾಧಿಕಾರಿ ಉಪಳಪ್ಪ ಇವರು ೨೦೨೩-೨೪ ನೇ ಸಾಲಿನಲ್ಲಿ ಆರ್ ಎಸ್ಪಿ, ಎಸ್.ಎಫ್ ಸಿ ಹಾಗೂ ಎಸ್ ಎಫ್ ಯೋಜನೆಯಡಿಯಲ್ಲಿ ರಸ್ತೆ ಬದಿ ನಡೆತೋಪು ಕಾಮಗಾರಿಯ ಸ್ಥಳದಲ್ಲಿ ಅಳವಡಿಸಲಾದ ನಾಮಫಲಕದಲ್ಲಿ ಕಾಮಗಾರಿಯ ಅಂದಾಜು ಮೊತ್ತ ಹಾಕದೇ, ಇಲಾಖೆ ಯೋಜನೆಗಳನ್ನು ಗೌಪ್ಯವಾಗಿಟ್ಟು ಸಾರ್ವಜನಿಕರಿಗೆ ಇದರ ಮಾಹಿತಿ ಸಿಗದಂತೆ ಮಾಡಿ ಸಾಕಷ್ಟು ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇವರು ನಿರ್ವಹಿಸಿದ ವಿಭೂತಿಹಳ್ಳಿ – ಹತ್ತಿಗೂಡೂರು ರಸ್ತೆ ಬದಿ ನಡೆತೋಪು, ಹಾಲಬಾವಿ ಕ್ರಾಸ್‌ದಿಂದ ಮುರಾರ್ಜಿ ದೇಸಾಯಿ ಶಾಲೆ ಮುಖ್ಯ ಕಾಲುವೆ ರಸ್ತೆ ಬದಿ ನಡೆತೋಪು, ಭೀ.ಗುಡಿ ಕ್ರಾಸ್‌ನಿಂದ – ಹಾಲಭಾವಿ ಕ್ರಾಸ್ ಮುಖ್ಯ ಕಾಲುವೆ ರಸ್ತೆ ಬದಿ ನಡೆತೋಪು, ಟಿ.ವಡಗೇರಾ – ಹೈಯಾಳ.ಕೆ ರಸ್ತೆ ವಬದಿ ನಡೆತೋಪು ಹಾಗೂ ಗುಂಡಳ್ಳಿ ಸರ್ವೇ ನಂ : ೧೨೧ ರಲ್ಲಿ ನಡೆತೋಪು ಕಾಮಗಾರಿಗಳಲ್ಲಿ ನೆಟ್ಟ ಗಿಡಗಳ ಪಾಲನೆ ಪೋಷಣೆ ಮಾಡದೇ ಗಿಡಗಳು ಒಣಗಿ ಹೋಗಿದ್ದು, ಸದರಿ ಕಾಮಗಾರಿ ಗಳಲ್ಲಿ ನಕಲಿ ಕಾವಲುಗಾರರ ಯಾದಿ ಸೃಷ್ಟಿಸಿ ಅವರ ಹೆಸರಿನಲ್ಲಿ ಲಕ್ಷಾಂತರ ರೂ. ಅನುದಾನ ದುರ್ಬಳಕೆ ಮಾಡಿಕೊಂಡಿದ್ದು ತನಿಖೆ ಮಾಡಲು ಮನವಿ ಮಾಡಿದ್ದಾರೆ.

ಈ ಮೇಲ್ಕಂಡ ಕಾಮಗಾರಿಗಳ ಹೆಸರಿನಲ್ಲಿ ಅಪಾರ ಪ್ರಮಾಣದ ಅವ್ಯವಹಾರ ನಡೆದಿದ್ದು, ಸದರಿ ಕಾಮಗಾರಿಗಳ ನಿರ್ವಹಣೆ ಮತ್ತು ವೀಡಿಂಗ್ ಕೆಲಸ ಹಾಗೂ ಹೋಯಿಂಗ್ ಮತ್ತು ಸೋಯಿಲ್ ವರ್ಕ್, ಸ್ಟೆಂಪಿಂಗ್ ಕೆಲಸ ಮತ್ತು ಬೆಂಕಿ ರೇಖೆ ನಿರ್ವಹಣೆ ಸೇರಿದಂತೆ ಅನೇಕ ಕೆಲಸಗಳನ್ನು ಕಳಪೆ ಮಟ್ಟದಿಂದ ಮಾಡಿರುತ್ತಾರೆ.

ಕಾಮಗಾರಿಗಳ ಸ್ಥಳ ಪರಿಶೀಲನೆ ಮಾಡಿ, ಕೂಡಲೇ ಇವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ಸೇವೆಯಿಂದ ಅಮಾನತ್ತುಗೊಳಿಸಿ, ಶಿಸ್ತು ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ವಿನಂತಿ ಮಾಡಿದೆ.

ಈ ವೇಳೆ ಸಂಘದ ಅಧ್ಯಕ್ಷ ಪ್ರದೀಪ ಅಣಬಿ, ಮೌನೇಶ ಬೀರನೂರು, ಭೋಜಪ್ಪ ಮುಂಡಾಸ, ಅಂಬ್ರೇಶ ಶಿರವಾಳ, ಶೇಖರ ಕಟ್ಟಿಮನಿ, ದೇವಿಂದ್ರಪ್ಪ ರಸ್ತಾಪುರ, ದೇವಪ್ಪ, ದಶವನ ಕನಗನಹಳ್ಳಿ, ಮಹಾಂತೇಶ ನಾಯ್ಕೋಡಿ ಇನ್ನಿತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!