ಸೋಮವಂಶೀಯ ಸಹಸ್ತ್ರಾರ್ಜುನ ಕ್ಷತ್ರಿಯ ಸಮಾಜದ ಹೋರಾಟಕ್ಕೆ ಹಲವು ನಾಯಕರ ಬೆಂಬಲ, ಮನವಿ ಸಲ್ಲಿಕೆ | ರಾಜ್ಯಾದ್ಯಂತ ವಿವಿಧ ಜಿಲ್ಲೆಗಳ ಸಾವಿರಾರು ಜನರಿಂದ ಬೆಳಗಾವಿಯಲ್ಲಿ ಶಕ್ತಿ ಪ್ರದರ್ಶನ
ಬೆಳಗಾವಿ: ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ(ಎಸ್ ಎಸ್ ಕೆ) ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಿ 200 ಕೋಟಿ ರೂ. ಮೀಸಲಿಡಲು ಸೇರಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸೋಮವಂಶೀಯ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ಆಶ್ರಯದಲ್ಲಿ ಕರ್ನಾಟಕ ಸೋಮವಂಶ ಸಹಸ್ರಾ ರ್ಜುನ ಕ್ಷತ್ರಿಯ ಸಮಾಜ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಬೆಳಗಾವಿ ಸುವರ್ಣ ಸೌಧದ ಕೊಂಡಸಕೊಪ್ಪ ದಲ್ಲಿ ಗುರುವಾರ ಧರಣಿ ನಡೆಸಿದರು.
ಕರ್ನಾಟಕದಲ್ಲಿ ಸಮುದಾಯದ ಜನಸಂಖ್ಯೆ 10 ರಿಂದ 12 ಲಕ್ಷವಿದೆ. ಕೆಲವರಷ್ಟೇ ಸ್ಥಿತಿವಂತರಿದ್ದಾರೆ. ಶೇ.80 ರಷ್ಟು ಜನರು ಕಡು ಬಡವರಾಗಿದ್ದು, ಸಣ್ಣ-ಪುಟ್ಟ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಸಮುದಾಯ ಸಾಮಾಜಿಕ, ಆರ್ಥಿಕ, ರಾಜಕೀ ಯವಾಗಿ ಹಿಂದುಳಿದೆ. ಇದಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಹನುಮಂತಸಾ ನಿರಂಜನ ಆಗ್ರಹಿಸಿದರು.
ಸೈಕಲ್ ಅಂಗಡಿ, ಬೀದಿ ಬದಿ ವ್ಯಾಪಾರ, ಬಂಡಿ ಅಂಗಡಿ , ಡಿಟಿಪಿ , ವೈರಿಂಗ ಕೆಲಸ, ಹೋಟೆಲ್ ಮಾಡಿ ಜೀವನ ಸಾಗಿಸು ತ್ತಿದ್ದಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಲ ಮಾಡುವ ಸ್ಥಿತಿ ಬಂದಿದೆ. ಸರ್ಕಾರ ಕೂಡಲೇ ನಿಗಮ ಸ್ಥಾಪಸಿ ಸೌಲಭ್ಯ ನೀಡಬೇಕು ಎಂದರು.
ಎಸ್ ಎಸ್ ಕೆ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು. ಸೋಮವಂಶ ಸಹಸ್ರಾರ್ಜುನ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಬೇಕು. ಕಳೆದ ಮೂರು ವರ್ಷ ಗಳಿಂದ ಸಮುದಾಯ ಬೇಡಿಕೆ ಈಡೇರಿಕೆಗಾಗಿ ಹೋರಾಟ ಮಾಡಲಾಗುತ್ತಿದೆ.
ಆದರೆ, ಸರ್ಕಾರ ಕಿವಿ ಕೊಡುತ್ತಿಲ್ಲ. ಬೇಡಿಕೆ ಈಡೇರಿಕೆಗಾಗಿ ಉಗ್ರವಾದ ಹೋರಾಟ ಮಾಡಲಾಗುವುದು. ರಸ್ತೆ ತಡೆ ಹಾಗೂ ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಬೆಳಗಾವಿ, ರಾಯಚೂರು, ಕೊಪ್ಪಳ, ಗದಗ, ಹಾವೇರಿ, ಧಾರವಾಡ, ಹುಬ್ಬಳ್ಳಿ, ಬಾಗಲಕೋಟೆ, ಶಿಗ್ಲಿ, ಅಮೀನಗಡ, ಸೂಳೇಭಾವಿ, ದಾವಣಗೆರೆ, ಕುಷ್ಟಗಿ, ಬೆಟಗೇರಿ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ 1500 ಕ್ಕಿಂತ ಹೆಚ್ಚು ಸಮುದಾಯದ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಬಿ.ಪಿ.ಹರೀಶ್, ಅಭಯ ಪಾಟೀಲ್, ಮಹೇಶ ತೆಂಗಿನ ಕಾಯಿ ಅವರು ಮನವಿ ಸ್ವೀಕರಿಸಿ, ಕಾಂಗ್ರೆಸ್ ಸರ್ಕಾರಕ್ಕೆ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಲಾಗುವುದು. ಇಲ್ಲದಿದ್ದರೆ ಮುಂದೆ ಪಕ್ಷ ಆಡಳಿತಕ್ಕೆ ಬಂದಾಗ ನಿಗಮ ಅನುಷ್ಠಾನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸೋಮವಂಶೀಯ ಸಹಸ್ರಾರ್ಜುನ ಸಮಾಜದ ರಾಜ್ಯಾಧ್ಯಕ್ಷರಾದ ಡಾ.ಶಶಿಕುಮಾರ ಮೆಹರವಾಡೆ, ಮಾಜಿ ಶಾಸಕ ಅಶೋಕ ಕಾಟವೆ, ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಹನಮಂತಸಾ ನಿರಂಜನ.
ರಾಘವೇಂದ್ರ ಕಬಾಡಿ, ನಾಗರಾಜ ನಗರಿ, ಕಾಶಿನಾಥಸಾ ಶಿದ್ಲಿಂಗ್, ಸಮಾಜದ ಪ್ರಮುಖರಾದ ವಿಠ್ಠಲ ಲದವಾ, ನಾಗೇಶ ಕಲಬುರ್ಗಿ, ಕೊಟ್ರೇಶ್ ಮೆಹರವಾಡೆ ಸೇರಿದಂತೆ ಹಲವು ಜಿಲ್ಲೆಗಳ ಸಮಾಜದ ಮುಖಂಡರು, ಯುವಕರು ಭಾಗವಹಿ ಸಿದ್ದರು.
ಹಿಂದುಳಿದ ಸಮುದಾಯದ ಕಾಲಕಾಲಕ್ಕೆ ಮೀಸಲಾತಿ ಪಡೆಯುವುದು ಸಂವಿಧಾನ ನೀಡಿದ ಹಕ್ಕಾಗಿದೆ. ಸಮಾಜದ ಹೋರಾಟಕ್ಕೆ ಬೆಂಬಲವಿದೆ. ಹಿಂದುಗಳು ಜಾಗೃತರಾಗಬೇಕು. ಜಾತಿ ಬಿಟ್ಟು ಎಲ್ಲರೂ ಒಂದಾಗಬೇಕು. ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಿರುವುದಕ್ಕೆ ಪಶ್ಚಿಮ ಬಂಗಾಳ ಕೋರ್ಟ್ ಅಲ್ಲಿನ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಮೂಲ ನಿವಾಸಿ ಹಿಂದುಗಳಿಗೆ ಮೀಸಲಾತಿಯಿಂದ ವಂಚಿತರಾಗಿಸುವ ತಂತ್ರ ನಡೆಯುತ್ತಿದೆ – ಬಸನಗೌಡ ಪಾಟೀಲ್ ಯತ್ನಾಳ್, ಶಾಸಕರು.