ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವ
ವಿಜಯಪುರ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರು, ದೇವಸ್ಥಾನ, ಮಠ ಮಾನ್ಯಗಳ ಜಮೀನುಗಳ ದಾಖಲೆಯಲ್ಲಿ ವಕ್ಫ್ ಹೆಸರು ನಮೂದಾಗಿದ್ದು ಕ್ರಮವನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಖಂಡಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ವಕ್ಫ್ ಅವಾಂತರಗಳ ವಿರುದ್ಧ ವಿಜಯಪುರದಲ್ಲಿ ನಡೆದ ಜನಾಂದೋಲನದಲ್ಲಿ ಮಾತನಾಡಿದರು.
ವಕ್ಫ್ ಕ್ರಮ ವಿರೋಧಿಸಿ ಅನಿರ್ಧಿಷ್ಟಾವಧಿ ಹೋರಾಟ ನಾಲ್ಕನೇ ದಿನಕ್ಕೆ ಜಿಲ್ಲಾಧಿಕಾರಿ ಗಳ ಕಚೇರಿ ಬಳಿ ಜೆಪಿಸಿ ಅಧ್ಯಕ್ಷ, ಸಂಸದ ಜಗದಂಬಿಕಾ ಪಾಲ್ ಅವರಿಗೆ ಮನವಿ ಸಲ್ಲಿಸಿ, ಬೇಡಿಕೆ ಈಡೇರಿಕೆಯ ಭರವಸೆ ದೊರೆತ ಹಿನ್ನೆಲೆ ಹೋರಾಟಕ್ಕೆ ಬ್ರೇಕ್ ನೀಡಲಾಯಿತು.
ವಿಜಯಪುರ ಸೇರಿದಂತೆ ರಾಜ್ಯದ ರೈತರಿಗೆ, ಮಠಮಾನ್ಯಗಳು, ಐತಿಹಾಸಿಕ ಸ್ಮಾರಕಗಳು, ಆಸ್ಪತ್ರೆ, ಶಾಲಾ-ಕಾಲೇಜುಗಳ ಜಮೀನುಗಳು ತನ್ನದೇ ಎಂದು ವಕ್ಫ್ ನಮೂದಿಸಿ ರೈತರಿಗೆ ಅನ್ಯಾಯ ಮಾಡುತ್ತಿದೆ.
ಬೀದರ್, ರಾಯಚೂರು, ವಿಜಯಪುರ, ಯಾದಗಿರಿ, ಕೊಪ್ಪಳ, ಬಳ್ಳಾರಿ, ಕಲಬುರಗಿ, ಬಾಗಲಕೋಟೆ, ಕೋಲಾರ, ಮಂಡ್ಯ, ಚಿಕ್ಕೋಡಿ ವಿಭಾಗ ಸೇರಿದಂತೆ ವಿವಿಧ ಜಿಲ್ಲೆಗಳಾದ್ಯಂತ ವಕ್ಫ್ ಮಂಡಳಿಯು ಯಾವುದೇ ಪೂರ್ವ ಸೂಚನೆ ನೀಡದೆ ಗಣನೀಯ ಪ್ರಮಾಣದ ಭೂಮಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದು, ಇದರಿಂದ ಭೂಮಾಲೀಕರು ಮತ್ತು ರೈತರು ಆತಂಕಗೊಂಡಿದ್ದಾರೆ.
ರೈತರ ಫಲವತ್ತಾದ ಜಮೀನುಗಳಲ್ಲಿ ತಲೆಮಾರುಗಳಿಂದ ಭೂಮಿಯನ್ನು ಉಳುಮೆ ಮಾಡುತ್ತಿರುವ ರೈತರ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ದುರುದ್ದೇಶ ಅಡಗಿದೆ ಎಂದು ಸಂಸದೀಯ ಸಮಿತಿಗೆ ವಿವರವಾದ 4 ಪುಟಗಳ ಮನವಿ ಸಲ್ಲಿಸಿದ್ದಾರೆ.
ಜೆಪಿಸಿಯಿಂದ ಪೂರಕ ಸಲಹೆ : ವಕ್ಫ್ ಕಾಯ್ದೆಗೆ ಕೇಂದ್ರ ಸರ್ಕಾರ ಪಾರದರ್ಶಕ ತಿದ್ದುಪಡಿ ತರಲಿದ್ದು, ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡಿಸಲಿದೆ. ಪ್ರಸ್ತುತ ಕಾಯ್ದೆಯಲ್ಲಿರುವ ತೊಡಕುಗಳನ್ನು ಸರಿಪಡಿಸಿ, ಭವಿಷ್ಯದಲ್ಲಿ ವಕ್ಫ್ ನಿಂದ ರೈತರು, ಮಠ, ಮಂದಿರ, ಐತಿಹಾಸಿಕ ಸ್ಮಾರಕ ಸೇರಿ ಯಾರಿಗೂ ತೊಂದರೆ ಯಾಗದಂತೆ ಅಗತ್ಯ ತಿದ್ದು ಪಡಿಗೆ ಸಮಿತಿ ಪೂರಕ ಸಲಹೆ ನೀಡಲಿದೆ ಎಂದು ಸಮಿತಿ ಅಧ್ಯಕ್ಷರು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಜಯಪುರ ಸಂಸದ ರಮೇಶ ಜಿಗಜಣಗಿ, ಜೆಪಿಸಿ ಸದಸ್ಯರೂ ಸಂಸದ ತೇಜಸ್ವಿಸೂರ್ಯ, ಮಾಜಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಸೇರಿದಂತೆ ಮುಖಂಡರು, ಮಠಾಧೀಶರು, ರೈತರು ಪಾಲ್ಗೊಂಡಿದ್ದರು.