ವಿಕಲಚೇತನರ ಸಮಸ್ಯೆಗಳಿಗೆ ಸಕಾಲಕ್ಕೆ ಸ್ಪಂದಿಸಲು ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಸಲಹೆ
ಯಾದಗಿರಿ: ಸರ್ಕಾರದ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ವಿಕಲಚೇತನರ ಅನುಕೂಲಕ್ಕಾಗಿ ಶೇ.5 ರಷ್ಟು ಅನುದಾನವನ್ನು ಕಾಯ್ದಿರಿಸಿ, ಅವಶ್ಯಕ ಸೌಲಭ್ಯಗಳನ್ನು ಕಲ್ಪಿಸುವಂತೆ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮರಿಯಪ್ಪ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಕಾರ್ಯಾಲಯದ ಸಭಾಂಗಣದಲ್ಲಿ ಇಂದು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ದಿ ಅಸೋಸಿಯೇಶನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ(ಎ.ಪಿ.ಡಿ) ಸಂಸ್ಥೆ ಯಾದಗಿರಿ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳಿಗೆ ಏರ್ಪಡಿಸಿದ್ದ *ವಿಕಲಚೇತನರ ಹಕ್ಕು ಗಳ ಕಾಯ್ದೆ 2016ರ* ಕುರಿತ ಒಂದು ದಿನದ ಕಾರ್ಯಾ ಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾನ ಅವಕಾಶ, ಹಕ್ಕುಗಳ ರಕ್ಷಣೆ ಮತ್ತು ಸಂಪೂರ್ಣ ಭಾಗವ ಹಿಸುವಿಕೆ ಅಧಿನಿಯಮ 1995 ಇದನ್ನು 2016ರ ಡಿಸೆಂಬರ್ ದಲ್ಲಿ ರದ್ದುಪಡಿಸಿ ಅಂಗವಿಕಲರ ಹಕ್ಕುಗಳ ಕಾಯ್ದೆ 2016 ಅನುಮೋದಿಸಲಾಗಿದೆ. ಇದರನ್ವಯ 21 ವಿಧಧ ಅಂಗವಿಕಲತೆ ಸ್ಥಿತಿಗಳನ್ನು ಹೊಂದಿರುವ ವಿಕಲಚೇತನರಿಗೆ ಸರಕಾರದಿಂದ ಕೊಡಮಾಡಿದ ಸೌಲಭ್ಯಗಳನ್ನು ತಪ್ಪದೇ ಕಲ್ಪಿಸಬೇಕು. ವಿಶೇಷ ವಾಗಿ ಶೇ. 5 ರಷ್ಟು ಅನುದಾನವನ್ನು ಅವರಿಗೆ ಕಾಯ್ದಿರಿಸಿ ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತೆ ಅವರು ಸಲಹೆ ನೀಡಿದರು.
ವಿಕಲಚೇತನರಿಗೆ ಸವಲತ್ತು ಒದಗಿಸುವಲ್ಲಿ ತಾರತಮ್ಯ ಆಗಬಾ ರದು. ವಿಕಲಚೇತನರಿಗೆ ತಮ್ಮ ಹಕ್ಕುಗಳನ್ನು ಪಡೆಯಲು ತೊಂದರೆ ಅನುಭವಿಸಿದ್ದಲ್ಲಿ ಕಾನೂನು ಸೇವಾ ಪ್ರಾಧಿಕಾರದ ನೆರವನ್ನು ಪಡೆಯಬೇಕು ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ ಒರಡಿಯಾ ಅವರು, “ನಿರಾಮಯ” ಆರೋಗ್ಯ ವಿಮೆ ಕಾರ್ಡ್ ವಿತರಿಸಿ ಮಾತನಾಡಿ, ವಿಕಲಚೇತನರ ಕಲ್ಯಾಣ ಕಾರ್ಯಗಳಿಗೆ ಇರುವ ಅನುದಾನವನ್ನು ಸಮರ್ಪಕವಾಗಿ ಬಳಸಿ, ವಿವಿಧ ಸೌಲಭ್ಯಗಳು ಅವರಿಗೆ ಸಕಾಲಕ್ಕೆ ತಲುಪುವಂತಾಗಬೇಕು.
ವೈಯಕ್ತಿಕ ಫಲಾನುಭವಿ ಹಾಗೂ ಸಮುದಾಯ ಆಧಾರಿತ ಯೋಜನೆಗಳ ಲಾಭ ಅವರಿಗೆ ದೊರಕಿಸಬೇಕು. ನಗರ ಸ್ಥಳೀಯ ಸಂಸ್ಥೆಗಳು, ಗ್ರಾಂ.ಪಂ,ತಾ.ಪಂ ಹಾಗೂ ಜಿ.ಪಂ ಹಾಗೂ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಶೇ. 5 ರಷ್ಟು ಅನುದಾನ ಕಾಯ್ದಿರಿಸಿ ಅವರಿಗೆ ಸೌಲಭ್ಯ ಕಲ್ಪಿಸುವುದು ತಮ್ಮ ಆಧ್ಯ ಕರ್ತವ್ಯ ಎಂದು ಭಾವಿಸುವಂತೆ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ತೀವ್ರ ತರಹದ ವಿಕಲಚೇತನರಿಗೆ ಒಂದು ಲ.ರೂ ಗಳವರೆಗಿನ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸುವ “ನಿರಾಮಯ” ಕಾರ್ಡ್ ಗಳನ್ನು 60 ಫಲಾನುಭವಿಗಳಿಗೆ ವಿತರಿಸಲಾಯಿತು.
ಬೆಂಗಳೂರು ಎ.ಪಿ.ಡಿ ಸಂಸ್ಥೆ ನಿರ್ದೇಶಕ ಎಂ.ಎಲ್.ಜನಾರ್ಧನ್ ಹಾಗೂ ಕಲಬುರಗಿ ಎ.ಪಿ.ಡಿ ಸಂಸ್ಥೆ ನಿರ್ದೇಶಕ ರಮೇಶ್ ಜಿ. ಸಂಪನ್ಮೂಲ ವ್ಯಕ್ತಿಗಳಾಗಿ ಅವಶ್ಯಕ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವೀರಣಗೌಡ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶರಣಪ್ಪ ಪಾಟೀಲ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎಪಿಡಿ ಸಂಸ್ಥೆ ಯ ಸಂಯೋಜಕ ನಾಗಪ್ಪ ಆವಂಟಿ ಕಾರ್ಯಕ್ರಮ ನಿರ್ವಹಿಸಿದರು.