ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ನೋಟಿಸ್ ಹಿಂಪಡೆಯಲು ಸರ್ಕಾರದ ಆದೇಶ
ಬೆಂಗಳೂರು: ರಾಜ್ಯದಾದ್ಯಂತ ರೈತರು, ಮಠ- ಮಾನ್ಯಗಳ ಜಮೀನುಗಳ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದನ್ನು ವಿರೋಧಿಸಿ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ನೋಟಿಸ್ ಹಿಂಪಡೆಯಲು ನ. 9ರಂದು ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ಸರ್ಕಾರ ಆದೇಶ ಹೊರಡಿಸಿ, ನಿರ್ದೇಶನ ನೀಡಿದೆ.
ವಿಜಯಪುರ ಸೇರಿ ರಾಜ್ಯದ ಹಲವೆಡೆ ವಕ್ಫ್ ಹೋರಾಟ ತೀವ್ರಗೊಂಡು, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ 4 ದಿನ ಅನಿರ್ಧಿಷ್ಟಾವಧಿ ಧರಣಿ ನಡೆದಿತ್ತು.
(ವಕ್ಫ್ ಮಸೂದೆ ತಿದ್ದುಪಡಿ) ಸಂಸದೀಯ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್ ಹಾಗೂ ಸದಸ್ಯರು ಭೇಟಿ ನೀಡಿ ಮನವಿ ಆಲಿಸಿದ್ದು ಸ್ಮರಿಸಬಹುದು.
ಮ್ಯುಟೇಷನ್ ಮಾಡಲು ಯಾವುದೇ ಕಛೇರಿ ಅಥವಾ ಯಾವುದೇ ಪ್ರಾಧಿಕಾರದಿಂದ ನೀಡಲಾದ ನಿರ್ದೇಶನಗಳನ್ನು ತಕ್ಷಣದಿಂದಲೇ ಹಿಂಪಡೆದು, ಮ್ಯುಟೇಷನ್ ಪ್ರಕ್ರಿಯೆ ತಕ್ಷಣದಿಂದಲೇ ಸ್ಥಗಿತಗೊಳಿಸಲು ಸೂಚಿಸಲಾಗಿದೆ.
ಈ ಕುರಿತು ನೀಡಲಾದ ಎಲ್ಲಾ ನೋಟೀಸಗಳನ್ನು ಹಿಂಪಡೆಯುವುದು ಹಾಗೂ ಸದರಿ ಜಮೀನುಗಳಲ್ಲಿ ವ್ಯವಸಾಯ ಮಾಡುತ್ತಿರುವ ರೈತರ ವಿರುದ್ಧ ಯಾವುದೇ ಕ್ರಮವನ್ನು ಜರುಗಿಸತಕ್ಕದಲ್ಲ ಎಂದು ಸರ್ಕಾರ ಆದೇಶದಲ್ಲಿ ಉಲ್ಲೇಖಿಸಿದೆ. ಮುಖ್ಯಮಂತ್ರಿಗಳ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆರ್.ಸಿ ಮತ್ತು ಡಿಸಿ ಗಳಿಗೆ ಸೂಚನೆ ನೀಡಲಾಗಿದೆ.