ಯಾದಗಿರಿ ಧ್ವನಿ ಡಿಜಿಟಲ್ ಮಾಧ್ಯಮವು ಯುವ ಸಾಹಿತಿ, ಚಿಂತಕ ಮಪಾಚ ಅವರ ‘ಗೀತಾ ರಥ’ ಅಂಕಣದ ಮೂಲಕ ಭಗವಾನ್ ಕೃಷ್ಣರ ಗೀತೆಯ ರಥವನ್ನು ಸಹೃದಯ ಸಜ್ಜನ ಓದುಗರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದೆ… ಶೀಘ್ರವೇ ನಿಮ್ಮ ಕಣ್ಣೆದುರು “ಗೀತಾರಥ” ಬರಲಿದೆ….

ನೀವೊಂದು ಹೆಜ್ಜೆಯನ್ನಿಡಿ, ಭಗವಂತನೂ ನಿಮ್ಮೊಡನೆ ಹೆಜ್ಜೆಯನಿಟ್ಟು ಪೋಷಿಸುವ

ಕೃಷ್ಣಪ್ರಿಯ ಚಪೆಟ್ಲಾ.

ಗವಂತನನ್ನು ಕಾಣಲು, ಭಗವಂತನನ್ನು ಅರಿಯಲು, ಭಗವಂತನೊಡಗೂಡಲು ಏನು ಮಾಡಬೇಕು ಎನ್ನುವುದನ್ನು ಸರಳವಾಗಿ ವಿವರಿಸಿದ್ದು ಯೋಗೀಶ್ವರ-ಗೀತಾಚಾರ್ಯ ಕೃಷ್ಣ ಭಗವಾನರು. ಅವರು ಹೇಳಿದ ಭಗವದ್ಗೀತೆ ನಮ್ಮ ಜೀವನೋತ್ಸಾಹ, ಜೀವನಾದರ್ಶ ಮತ್ತು ಜೀವನ ಸಾರ್ಥಕತೆಗೆ ದೀವಟಿಗೆಯೇ ಹೌದು.

ಬಹುತೇಕರಿಗೆ ಗೀತೆಯೆಂದರೆ ಏನೋ ಒಂದು ಆಧ್ಯಾತ್ಮಿಕ ಅಥವಾ ಧಾರ್ಮಿಕ ಗ್ರಂಥವೆನ್ನುವ ಮಟ್ಟಿಗಿನ ಅರಿವಿದೆ. ಆದರೆ, ಅದೋಂದು ಜೀವನದ ಪಯಣದ ಮಾರ್ಗದರ್ಶಕ. ನಮ್ಮ ಪೂರ್ವಿಕರು ಸದಾ ಬಯಸುತ್ತಿದ್ದ ‘ಸಾರ್ಥಕ ಜೀವನ; ಸಂತಸದ ಮರಣ’ಕ್ಕೆ ಬೇಕಾದ ತಯಾರಿ, ಅನುಸರಿಸಬೇಕಾದ ‘ಜೀವನ ಧರ್ಮ’ದ ಕುರಿತು ಕೃಷ್ಣನಷ್ಟು ಸೊಗಸಾಗಿ, ಸರಳವಾಗಿ ವಿವರಿಸಿದ ಮೊದಲಿಗಾರೂ ಇರಲಿಕ್ಕಿಲ್ಲ.

ಭಗವದ್ಗೀತೆಯು ಹದಿನೆಂಟು ಅದ್ಯಾಯಗಳಲ್ಲಿನ 700+1 ಶ್ಲೋಕಗಳ ಮೂಲಕ ಭಾರತದ ಸನಾತನ ಧರ್ಮದ ಸಂಪೂರ್ಣ ವೇದ, ಉಪನಿಷತ್ತುಗಳ ಸಾರವೆಲ್ಲವನ್ನೂ ಒಳಗೊಂಡ ಅಮೃತವಾಗಿದೆ. ಅರ್ಜುನನು ಯುದ್ಧ ಭೂಮಿಯಲ್ಲಿ ದಿಕ್ಕುತೋಚದೆ ಶೋಕಕ್ಕೊಳಗಾದ. ಕುಂತಿ ಪುತ್ರನ ವಿಷಾದದ ಕಾರಣ ಸಾರಥಿ ಕೃಷ್ಣ ಗೀತಾಚಾರ್ಯನಾದ. ಅರ್ಜುನನಲ್ಲಿನ ವಿಷಾದವು ಮನುಕುಲಕ್ಕೆ ಸರ್ವೋತ್ತಮ ಜ್ಞಾನವನ್ನು ನೀಡಿತು. ಅದಕ್ಕೆಂದೇ ಪಾಂಡವನ ವಿಷಾದ ಮನುಕುಲಕ್ಕೊಂದು ಯೋಗವಾಯಿತು.

ಆ ಕಾರಣದಿಂದಲೇ ವಿಷಾಧವನ್ನೂ ಯೋಗವೆಂದೇ ಪರಿಗಣಿಸಿ, ಭಗವದ್ಗೀತೆಯು ಆರಂಭಗೊಳ್ಳುವುದು ಅರ್ಜುನನ ವಿಷಾಧ ಯೋಗದಿಂದ. ಕೊನೆಗೊಂಡಿದ್ದು ಉಪದೇಶ ಅಥವಾ ಮೋಕ್ಷಯೋಗದಲ್ಲಿ. ಮೋಹವು ಕ್ಷಯಿಸಿದರೆ ಮೋಕ್ಷ !!

ವಿಷಾದದಿಂದ ಮೋಕ್ಷದವರೆಗಿನ 18 ಅಧ್ಯಾಯಗಳಲ್ಲಿ ಕೃಷ್ಣಾರ್ಜುನರ ಸಂವಾಧವು ನಮ್ಮ ಜೀವನಕ್ಕೆ ದಾರಿ ತೋರುವ ಪ್ರಕಾಶವಾಗಿದೆ. ಇಂತಹ ಭಗವದ್ಗೀತೆಯು ಪ್ರಸ್ತುತ ನಿವೃತ್ತರಾದವರ ಕಾಲಹರಣದ ಸಂಗಾತಿಯಾಗಿ ಅಥವಾ ಜೀವನದ ಅಂತ್ಯಕಾಲದಲ್ಲಿ ಓದೋಣ ಎನ್ನುವಂತಾಗಿದೆ.

ಇದು ಪರೀಕ್ಷೆಗಳೆಲ್ಲಾ ಮುಗಿದ ನಂತರ ಸೆಲೆಬಸ್ ಓದಲು ಆರಂಭಿಸಿದ ಮಂದ ವಿದ್ಯಾರ್ಥಿಯಂತಾಗುವುದಲ್ಲವೇ? ಜೀವನವು ಹೇಗಿರಬೇಕು ಎನ್ನುವುದನ್ನು ಜೀವನವನ್ನು ಕೊನೆಗೊಳಿಸುವ ಸಮಯದಲ್ಲಿ ತಿಳಿದರೇನು ಫಲ? ಜೀವನವು ಆರಂಭಗೊಳ್ಳವಾಗಲೇ ತಿಳಿದರೆ ‘ಸಾರ್ಥಕ ಜೀವನವು ಮತ್ತು ಸಂತಸದ ಮರಣವೂ’ ಲಭಿಸುವ ಮಾರ್ಗವನ್ನು ಅರಿಯಬಹುದಲ್ಲವೇ?

ಆದ್ದರಿಂದಲೇ ‘ಗೀತಾ ರಥ’ ಅಂಕಣದ ಮೂಲಕ ಭಗವಾನ್ ಕೃಷ್ಣರ ಗೀತೆಯ ರಥವನ್ನು ಡಿಜಿಟಲ್ ಓದುಗರಿಗೆ ತಲುಪಿಸುವ ಯತ್ನವನ್ನು ಮಾಡುತ್ತಿರುವೆ. ಗೀತೆಯನ್ನು ನಾನು ಅರಿತ ಮಟ್ಟದಲ್ಲಿ, ಓದುಗರ ಸ್ವಾರಸ್ಯಕ್ಕೆ ಮತ್ತು ಅರ್ಥವಿವರಣೆಗೆ ಕೆಲ ಸ್ವಂತಾಭಿಪ್ರಾಯಗಳನ್ನೂ ಅಂಕಣದಲ್ಲಿ ಬೆರೆಸುತ್ತಿರುವೆ ಎಂದು ಮೊದಲೇ ತಮ್ಮಲ್ಲಿ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಿರುವೆ.

ನಿಮ್ಮೆಲ್ಲರ ಸ್ವೀಕಾರ, ಪ್ರೋತ್ಸಾಹದ ನಿರೀಕ್ಷೆಯೊಡನೆ ಶೀಘ್ರವೇ ‘ಗೀತಾ ರಥ’ವನ್ನು ನಿಮ್ಮಲ್ಲಿಗೆ ತರಲಿದ್ದೇವೆ.

ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ ಪ್ರಾಣತಃ ಕ್ಲೇಶನಾಶಾಯ ಗೋವಿಂದಾಯ ನಮೋ ನಮಃ ।।

Spread the love

Leave a Reply

Your email address will not be published. Required fields are marked *

error: Content is protected !!