ಮಕ್ಕಳನ್ನು ಶಾಲೆಗೆ ಕಳಿಸುವಂತೆ ಪೋಷಕರು, ಆಟೋ ಟಂಟಂಗಳ ಚಾಲಕರಿಗೆ ಜಾಗೃತಿ…
ಯಾದಗಿರಿ : ಶಹಾಪೂರ ತಾಲೂಕಿನ ಗೋಗಿ ಗ್ರಾಮದ ಮೂಲಕ ಸುಮಾರು 6 ರಿಂದ 8 ಆಟೋ ಟಂಟಂಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ ಎಂಬ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ 1098 ಯಾದಗಿರಿ ಅವರ ಮಾಹಿತಿಯ ಮೇರೆಗೆ ಹಠಾತ್ ದಾಳಿಯನ್ನು ಕೈಗೊಂಡು ಕೂಲಿ ಕೆಲಸಕ್ಕಾಗಿ ಆಟೋಗಳಲ್ಲಿ ತೆರಳುತ್ತಿದ್ದ 20 ಮಕ್ಕಳನ್ನು ರಕ್ಷಿಸಲಾಗಿದೆ.
ಮಕ್ಕಳನ್ನು ಮತ್ತೊಮ್ಮೆ ಶಾಲೆಗೆ ಕಳಿಸುವಂತೆ ಪಾಲಕ, ಪೋಷಕರು ಹಾಗೂ ಆಟೋ ಟಂಟಂಗಳ ಚಾಲಕರಿಗೆ ಜಾಗೃತಿ ಮೂಡಿಸಿ ಪುನಃ ಗ್ರಾಮಕ್ಕೆ ಕಳುಹಿಸಲಾಯಿತು.
ಯಾದಗಿರಿ ಕಾರ್ಮಿಕ ನಿರೀಕ್ಷಕಿ ಶ್ರೀಮತಿ ಸಾಬೇರಾ ಬೇಗಂ ಮಾತನಾಡಿ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಲ್ಲಿ ಅಂತಹ ಅಂಗಡಿ ಮಾಲಿಕರಿಗೆ 20 ಸಾವಿರದಿಂದ 50 ಸಾವಿರ ರೂ.ಗಳ ವರೆಗೆ ದಂಡ ಮತ್ತು 6 ತಿಂಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನು ಸಹ ವಿಧಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ವರ್ಕನಳ್ಳಿ ಮಾತನಾಡಿ, ಆಟೋ ಟಂಟಂಗಳಲ್ಲಿ ಕೂಲಿ ಕೆಲಸಕ್ಕಾಗಿ ಕರೆದುಕೊಂಡು ಹೋಗಬಾರದೆಂದು ಕಾರ್ಮಿಕ ಇಲಾಖೆಯಿಂದ ನಿರಂತರವಾಗಿ ಜನ ಜಾಗೃತಿ, ಕಾನೂನು ಅರಿವು-ನೆರವು ಕಾರ್ಯಕ್ರಮ, ಬೀದಿನಾಟಕಗಳನ್ನು ನಡೆಸಲಾಗುತ್ತಿದೆ.
ಇದನ್ನು ಮೀರಿಯೂ ಸಹ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ ಅಂತಹ ಅಂಗಡಿ ಮಾಲೀಕರ ವಿರುದ್ಧ ಮತ್ತು ಮಕ್ಕಳನ್ನು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುವ ಆಟೋ ಟಂಟಂಗಳ ಚಾಲಕರ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಹಠಾತ್ ದಾಳಿ ಸಂದರ್ಭದಲ್ಲಿ ಶಹಾಪೂರ ತಾಲ್ಲೂಕ ಆರೋಗ್ಯ ನಿರೀಕ್ಷಣಾಧಿಕಾರಿ ಸಂಗಣ್ಣ ನುಚ್ಚಿನ್, ಸಮಾಜ ಕಲ್ಯಾಣ ಇಲಾಖೆಯ ರಾಜೇಶ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ರೇಖಾ ಜಿಂಧೆ, ಸಿ.ಆರ್.ಪಿ ಧರ್ಮರಾಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿಶತ್ ಅಂಜುಂ, ಮಕ್ಕಳ ರಕ್ಷಣಾ ಘಟಕ 1098ನ ಸಿಬ್ಬಂದಿಗಳಾದ ಪರ್ವತರೆಡ್ಡಿ, ರೇಣುಕಾ, ಕಾರ್ಮಿಕ ಇಲಾಖೆಯ ಮಹಮ್ಮದ್ ಏಥೇಶಾಮ್, ಬಾಲು ನಾಯಕ, ಮಾರ್ಗದರ್ಶಿ ಸಂಸ್ಥೆಯ ಬುಸಪ್ಪನೋರು ಬಸ್ಸು ಉಪಸ್ಥಿತರಿದ್ದರು.