ಡಾ.ಗಂಗಾಧರ ಸ್ವಾಮಿಗಳ ಸಲಹೆ | ಗಿರಿನಾಡು ಉತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ
ಯಾದಗಿರಿ: ಕನ್ನಡ ನೆಲದಲ್ಲಿ ಜನಿಸುವ ಪ್ರತಿಯೊಬ್ಬರೂ ಇಲ್ಲಿನ ಭಾಷೆ, ಸಂಸ್ಕೃತಿ ಮತ್ತು ನೆಲ,ಜಲದ ಸಂರಕ್ಷಣೆಗೆ ಬದ್ಧರಾಗಿರುವಂತೆ ಡಾ.ಗಂಗಾಧರ ಮಹಾಸ್ವಾಮಿಗಳು ಸಲಹೆ ನೀಡಿದರು.
ಭಾನುವಾರ ತಾಲೂಕಿನ ಅಬ್ಬೆತುಮಕೂರು ಗ್ರಾಮದ ಶ್ರೀ ವಿಶ್ವಾರಾಧ್ಯ ಸಿದ್ಧ ಸಂಸ್ಥಾನ ಮಠದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ ಕರವೇ ಆಯೋಜಿಸಿರುವ ಗಿರಿನಾಡು ಉತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮತ್ತು ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಸುಮಾರು 2 ಸಾವಿರ ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿರುವ ನಮ್ಮ ಭಾಷೆ ಅತ್ಯಂತ ಶ್ರೀಮಂತವಾದದು ಎಂದರು.
ಕನ್ನಡ ರಾಜ್ಯೋತ್ಸವ ಬಂದರೆ ಪ್ರತಿಯೊಬ್ಬರಿಗೂ ಹಬ್ಬವಿದ್ದಂತೆ. ಎಲ್ಲ ಕನ್ನಡಿಗರು ಸಂಭ್ರಮದಿಂದ ಆಚರಣೆ ಮಾಡಬೇಕು. ನಾಡಿನ ಉಳಿವಿಗಾಗಿ ಸಾವಿರಾರು ಹೋರಾಟಗಾರರು, ವಿಧ್ವಾಂಸರು ಹೋರಾಟ ಮಾಡುವ ಮೂಲಕ ಕರ್ನಾಟಕ ಏಕೀಕರಣಗೊಳಿಸಿದ್ದಾರೆ. ಆದರೆ, ಇಂದು ಬೆಂಗಳೂರಿನಂಥ ಮಹಾನಗರಗಳಲ್ಲಿ ಅನ್ಯ ಭಾಷೆಯ ಹಾವಳಿ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕರವೇ (ಟಿ.ಎ.ನಾರಾಯಣಗೌಡ ಬಣ) ಸಂಘಟನೆ ಕಳೆದ ಒಂದುವರೆ ದಶಕದಿಂದ ನಾಡಿನಲ್ಲಿ ಅನೇಕ ಹೋರಾಟಗಳನ್ನು ನಡೆಸಿ ಭಾಷೆಯ ಉಳಿವಿಗಾಗಿ ಶ್ರಮಿಸುತ್ತಿದೆ. ಅಸಂಖ್ಯ ಕಾರ್ಯಕರ್ತರು ಈ ಮಣ್ಣಿನ ಸಂರಕ್ಷಣೆಗಾಗಿ ಹೋರಾಟ ನಡೆಸಿ, ಜೈಲು ಸೇರಿ ಬಂದಿದ್ದಾರೆ. ನಿಜಕ್ಕೂ ಕರವೇ ಕಾರ್ಯ ಶ್ಲಾಘನೀಯ ಎಂದು ಬಣ‍್ಣಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ಮಾತನಾಡಿ, ನ.29ರಂದು ಯಾದಗಿರಿ ನಗರದ ಪಂಪ ಮಹಾಕವಿ ಮಂಟಪದಲ್ಲಿ ಸಂಜೆ 5 ಗಂಟೆಗೆ ಗಿರಿನಾಡು ಉತ್ಸವ ಆಯೋಜಿಸಲಾಗಿದೆ. ಇದರ ಜತೆಗೆ ಮನೋರಂಜನೆ ಸಮಾರಂಭ ಸಹ ನಡೆಯಲಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮಲ್ಲು ಮಾಳಿಕೇರಿ, ಸಿದ್ದುನಾಯಕ ಹತ್ತಿಕುಣಿ. ಶರಣಪ್ಪ ದಳಪತಿ,ಸಾಹೇಬಗೌಡ ನಾಯಕ, ವಿಶ್ವರಾಜ ಹೋನಿಗೇರ. ಸಿದ್ದಪ್ಪ ಕೊಯಿಲೂರ್, ಶರಣಬಸಪ್ಪ ಎಲೇರಿ ಇದ್ದರು.