ಯಾದಗಿರಿ : ಯಾದಗಿರಿ ಮಾರ್ಗದ ಮೂಲಕ ಸುತ್ತಮುತ್ತಲಿನ ಗ್ರಾಮಗಳಿಗೆ ಸುಮಾರು 17 ರಿಂದ 20 ಆಟೋ ಮತ್ತು ಜೀಪುಗಳಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ 50 ಅಧಿಕ ಮಕ್ಕಳನ್ನು ಬಾಲ ಕಾರ್ಮಿಕ ಅಧಿಕಾರಿಗಳು ರಕ್ಷಿಸಿದ್ದಾರೆ.
ಆಟೋ ತಡೆದು ಜಾಗೃತಿ ಮೂಡಿಸಿದ ಅಧಿಕಾರಿಗಳು, ಮಕ್ಕಳನ್ನು ಮತ್ತೊಮ್ಮೆ ಕೂಲಿ ಕೆಲಸಕ್ಕೆ ಕಳುಹಿಸದಂತೆ ಪಾಲಕ, ಪೋಷಕರು ಹಾಗೂ ಆಟೋ, ಜೀಪುಗಳ ಚಾಲಕರಿಗೆ ಪೋಸ್ಟರ್ ಮೂಲಕ ತಿಳುವಳಿಕೆ ನೀಡಿ ಗ್ರಾಮಕ್ಕೆ ಮರಳಿ ಕಳಿಸಲಾಯಿತು.
ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ವರ್ಕನಳ್ಳಿ ಮಾತನಾಡಿ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳಬಾರದು.
ಆಟೋ, ಟಂಟಂಗಳಲ್ಲಿ ಕೂಲಿ ಕೆಲಸಕ್ಕಾಗಿ ಕರೆದುಕೊಂಡು ಹೋಗಬಾರದು. ಕಾರ್ಮಿಕ ಇಲಾಖೆಯಿಂದ ನಿರಂತರವಾಗಿ ಜನ-ಜಾಗೃತಿ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಇದನ್ನು ಮೀರಿಯೂ ಸಹ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ ಅಂತಹ ಅಂಗಡಿ ಮಾಲೀಕರ ವಿರುದ್ಧ ಮತ್ತು ಮಕ್ಕಳನ್ನು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುವ ಆಟೋ, ಜೀಪುಗಳ ಚಾಲಕರ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಕ್ಕಳ ರಕ್ಷಣ ಘಟಕದ ತ್ರಿಶೂಲ್, ಮಕ್ಕಳ ರಕ್ಷಣ ಘಟಕ 1098ನ ವೆಂಕಟೇಶ, ಕಾರ್ಮಿಕ ಇಲಾಖೆ ಅಮೃತ್ ರಾವ್ ಕೊತ್ವಾಲ್ ಇದ್ದರು.