ಯಾದಗಿರಿಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಸುದ್ದಿಗೋಷ್ಠಿ
ಯಾದಗಿರಿ: ರಾಜ್ಯದಲ್ಲಿ ಸರ್ಕಾರದ ಆಡಳಿತ ವ್ಯವಸ್ಥೆಯಿಂದ ಜನ ರೋಸಿಹೋಗಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ವಾಗ್ದಾಳಿ ನಡೆಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಬಿಪಿಎಲ್ ಕಾರ್ಡ್ ವಿತರಿಸುವಲ್ಲಿ ಸರ್ಕಾರ ವಿಫಲ ಆಗಿದ್ದು, ಬಡ ಜನರು ಜೀವನ ಸಾಗಿಸುವುದು ಕಷ್ಟವಾಗಿದೆ. ಭ್ರ್ರಷ್ಟಾಚಾರ, ಬೆಲೆ ಏರಿಕೆಯಿಂದ ಜನರ ಬದುಕು ದುಸ್ತರವಾಗಿದೆ ಎಂದರು.
ಹೊಸ ಯೋಜನೆಗಳ ಜಾರಿಗೆ ಅನುದಾನವಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಅಲ್ಲೀವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಮುಡಾ ಸೈಟ್ ಹಂಚಿಕೆ ವಿವಾದ ಪ್ರಸ್ತಾಪಿಸಿದರು.
ಅಬಕಾರಿ ಇಲಾಖೆಯಲ್ಲಿ 700 ಕೋಟಿ ರೂ.ಭ್ರಷ್ಟಾಚಾರ ನಡೆದಿದೆ ಎಂದು ರಾಜ್ಯ ಮದ್ಯ ಮಾರಾಟ ಸಂಘದವರು ಹೋರಾಟ ಮಾಡಲು ಅಣಿಯಾಗಿದ್ದಾರೆ. ಹಣವನ್ನು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಬಳಸಿಕೊಂಡಿದೆ ಎಂದು ಆರೋಪಿಸಿದರು.
ಇಷ್ಟು ಸಾಲದು ಎಂಬಂತೆ ಸರ್ಕಾರದ ಕಣ್ಣು ಇದೀಗ ರೈತರ ಭೂಮಿ ಮೇಲೆ ಬಿದ್ದಿದ್ದು, ವಕ್ಫ್ ಬೋರ್ಡ್ ಮೂಲಕ ಭೂಮಿ ಕಿತ್ತುಕೊಳ್ಳಲು ಮುಂದಾಗಿದೆ. ಇದನ್ನು ನಮ್ಮ ಪಕ್ಷ ಉಗ್ರವಾಗಿ ಖಂಡಿಸಿದ್ದು, ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗಿದೆ. ಅಲ್ಲದೆ, ನಮ್ಮ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸತ್ಯ ಶೋಧನೆಗಾಗಿ 3 ತಂಡಗಳನ್ನು ರಚನೆ ಮಾಡಿದ್ದು, ರಾಜ್ಯದಾದ್ಯಂತ ಸಂಚರಿಸಿ ರೈತರ ಬೆನ್ನಿಗೆ ನಿಲ್ಲುವ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ,ಯುವ ಮುಖಂಡ ಮಹೇಶರಡ್ಡಿ ಮುದ್ನಾಳ, ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ಶರಣ ಭೂಲರಡ್ಡಿ, ನಿಗಮದ ಮಾಜಿ ಅಧ್ಯಕ್ಷ ದೇವಿಂದ್ರನಾಥ ನಾದ, ಜಿಲ್ಲಾ ಪ್ರ.ಕಾ. ಮೇಲಪ್ಪ ಗುಳಗಿ ಮತ್ತು ಪರುಶುರಾಮ ಕುರಕುಂದಿ, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ್ ಕಾಡಂನೊರ ಸೇರಿ ಆರು ಮಂಡಲ ಅಧ್ಯಕ್ಷರು ಜಿಲ್ಲಾ ಪದಾಧಿಕಾರಿಗಳ, ಜಿಲ್ಲಾ ಮೋರ್ಚಾ ಪದಾಧಿಕಾರಿಗಳ, ಜಿಲ್ಲಾ ಸದಸ್ಯತ್ವ ತಂಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.